ಬೆಂಗಳೂರು, ಮೇ 23- ರಾಜ್ಯ ಸರ್ಕಾರದ ಮನವಿಯ ಮೇರೆಗೆ ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲಗೊಳಿಸಿದ್ದು, ಅಧಿಕಾರಿಗಳು ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸಿ, ವರ್ಷದ ಕೆಲಸವನ್ನು 10 ತಿಂಗಳಿನಲ್ಲಿ ಪೂರ್ಣಗೊಳಿಸಲು ಕಟಿಬದ್ಧರಾಗಿ ಕೆಲಸ ಮಾಡಬೇಕು, ಬಜೆಟ್ ಘೋಷಣೆಗಳಿಗೆ ಜೂನ್ ಕೊನೆಯ ವೇಳೆಗೆ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬರ ಹಾಗೂ ಮುಂಗಾರು ಕೃಷಿ ಚಟುವಟಿಕೆ ಕುರಿತು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಆರಂಭಿಕವಾಗಿ ಮಾತನಾಡಿ, ಯೋಜನಾ ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಕೂಡ ಶೀಘ್ರವಾಗಿ ನಡೆಸುವಂತೆ ಆದೇಶಿಸಿದ್ದಾರೆ.
ಟೆಂಡರ್ ಕರೆಯಲು ಯಾವುದೇ ನೀತಿ ಸಂಹಿತೆ ಅಡ್ಡ ಬರುವುದಿಲ್ಲ. ಟೆಂಡರ್ ಕರೆದು, ಅಂತಿಮಗೊಳಿಸಿ, ಕಾರ್ಯಾದೇಶ ನೀಡಲು ಪ್ರಯತ್ನಿಸಬೇಕು. ಇದರಲ್ಲಿ ವಿಳಂಬವಾದರೆ ರಾಜ್ಯದ ಅಭಿವೃದ್ಧಿಯಲ್ಲಿ ವಿಳಂಬವಾಗುತ್ತದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಬಜೆಟ್‌ನಲ್ಲಿ 500 ಕ್ಕೂ ಹೆಚ್ಚು ಘೋಷಣೆಗಳನ್ನು ಮಾಡಲಾಗಿದೆ. ಈ ಬಗ್ಗೆ ಎಲ್ಲ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು. ಅಭಿವೃದ್ಧಿ ಕಡೆ ಅಧಿಕ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾರ್ಚ್ 16ರಿಂದ ಜೂನ್ 6ರವರೆಗೆ ಸುದೀರ್ಘ ಕಾಲದ ನೀತಿ ಸಂಹಿತೆ ಜಾರಿಯಲ್ಲಿತ್ತು. ಸರ್ಕಾರದ ಆಡಳಿತಕ್ಕೆ ಲಕ್ವ ಹೊಡೆದಂತಾಗಿತ್ತು. ಎಲ್ಲ ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಗಳಾಗಿದ್ದರು. ಚುನಾವಣಾ ಕೆಲಸದಲ್ಲಿ ನಿರತರಾಗಿದ್ದರಿಂದ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲು ಸಾಧ್ಯವಾಗಿರಲಿಲ್ಲ. ನಮ್ಮ ಮನವಿ ಮೇರೆಗೆ ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲಿಸಿದೆ. ತಕ್ಷಣದಿಂದಲೇ ತುರ್ತು ಕೆಲಸಗಳಿಗೆ ಗಮನ ಕೊಡಿ ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದರು.
ಎಲ್ಲ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಲು ಪ್ರಾರಂಭಿಸಬೇಕು. ಫೆಬ್ರುವರಿಯಲ್ಲಿ ಬಜೆಟ್ ಮಂಡಿಸಲಾಗಿದೆ. ಆರ್ಥಿಕ ವರ್ಷದ ಎರಡು ತಿಂಗಳು ಕಳೆದು ಹೋಗುತ್ತಿದೆ. ಒಂದು ವರ್ಷದಲ್ಲಿ ಮಾಡುವ ಕೆಲಸವನ್ನು 10 ತಿಂಗಳಲ್ಲಿ ಮಾಡಿ ಮುಗಿಸುವ ಅನಿವಾರ್ಯತೆ ಇದೆ ಎಂದ ಅವರು, ಈ ಹಿನ್ನೆಲೆಯಲ್ಲಿ ಎಲ್ಲ ಕಾರ್ಯದರ್ಶಿಗಳ ಸಭೆ ನಡೆಸಲಾಗಿದ್ದು ಅಗತ್ಯ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಪ್ರಸ್ತುತ, ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಕೃಷಿ ಚಟುವಟಿಕೆ ಆರಂಭವಾಗಿದೆ. ಬೀತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕೃಷಿ ಯಂತ್ರೋಪಕರಣಗಳ ಹೆಸರಿನಲ್ಲಿ ರೈತರಿಂದ ಅಧಿಕ ಹಣ ವಸೂಲಿ ಮಾಡುವವರ ಮೇಲೆ ನಿಗಾವಹಿಸಬೇಕು. ಬಿತ್ತನೆ ಸಮಯದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಮಾದರಿ, ಮಣ್ಣಿನ ಫಲವತ್ತತೆ, ಮಾರುಕಟ್ಟೆ ನಿರೀಕ್ಷೆ, ರೋಗ ನಿಯಂತ್ರಣ ಕುರಿತು ರೈತರಿಗೆ ಮಾಹಿತಿ ನೀಡಬೇಕು.
ನೀರು, ಮಣ್ಣಿನ ಫಲವತ್ತತೆ ರಕ್ಷಣೆಯ ಜೊತೆಗೆ, ಕಡಿಮೆ ಭೂಮಿಯಲ್ಲಿ ಹೆಚ್ಚು ಇಳುವರಿ ಪಡೆಯುವ ತಳಿಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ರೇಷ್ಮೆ, ಸಹಕಾರ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಮೇ ತಿಂಗಳಲ್ಲಿ ಗುರಿ 2.95 ಲಕ್ಷ ಹೆಕ್ಟೇರ್ ಪ್ರದೇಶ. ಸಾಧನೆಯಾಗಿರುವುದು 68,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇನ್ನೂ 13 ದಿನ ಬಾಕಿದೆ. ಪೂರ್ವ ಮುಂಗಾರಿನಲ್ಲಿ ಗುರಿ ಮೀರಿ ಬಿತ್ತನೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಸಕಾಲದಲ್ಲಿ ರೈತರಿಗೆ ಸಾಲ ಸಿಗುವುದನ್ನು ಖಾತರಿಪಡಿಸಬೇಕು. ಈ ವರ್ಷದ ಸಾಲ ಯೋಜನೆ ಈಗಾಗಲೇ ಜಿಲ್ಲಾಡಳಿತಗಳಿಗೆ ಕಳುಹಿಸಲಾಗಿದೆ. ಜಿಲ್ಲಾ ಬ್ಯಾಂಕರುಗಳೊಂದಿಗೆ ಸಮನ್ವಯ ವಹಿಸಿ, ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಬರ ಪರಿಹಾರ ಮೊತ್ತವನ್ನು ರೈತರ ಸಾಲಕ್ಕೆ ವಜಾ ಮಾಡಿಕೊಳ್ಳದಂತೆ ಬ್ಯಾಂಕರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.ಬೆಳೆ ವಿಮೆ ಕ್ಲೇಮ್ ಮಾಡುವ ಸಂದರ್ಭದಲ್ಲಿ ಕಂಪೆನಿಗಳ ಸ್ಯಾಂಪಲ್ ಪರಿಶೀಲನೆಯ ಕುರಿತು ರೈತರು ಹಲವು ಸಂದೇಹಗಳನ್ನು ಹೊಂದಿದ್ದಾರೆ. ಕಂಪನಿಗಳು ಆಡುವ ಆಟದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಅಪಾಯವಿದೆ ಎನ್ನುವ ಸಲಹೆ ಸಚಿವ ಲಾಡ್ ಅವರಿಂದ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಈ ಕುರಿತು ಮುಂಚಿತವಾಗಿಯೇ ವಿಮಾ ಕಂಪೆನಿಗಳೊಂದಿಗೆ ಚರ್ಚಿಸಿ, ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಸಂವಾದದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಕೃಷ್ಣ ಭೈರೇಗೌಡ, ಹೆಚ್.ಕೆ. ಪಾಟೀಲ್, ಕೆ.ಹೆಚ್. ಮುನಿಯಪ್ಪ, ಚೆಲುವರಾಯಸ್ವಾಮಿ, ಭೈರತಿ ಸುರೇಶ್, ಶಿವರಾಜ್ ತಂಗಡಗಿ, ಪ್ರಿಯಾಂಕ್ ಖರ್ಗೆ, ರಹೀಂ ಖಾನ್, ಶಿವಾನಂದ ಪಾಟೀಲ, ಎಸ್. ಎಸ್. ಮಲ್ಲಿಕಾರ್ಜುನ್, ಸಂತೋಷ್ ಲಾಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.