ಬೆಂಗಳೂರು, ನ.7-ಕಬ್ಬು ಬೆಳೆಗಾರರ ಬೇಡಿಕೆ ಹಾಗೂ ಸಮಸ್ಯೆ ಪರಿಹಾರಕ್ಕೆ ಕರೆಯಲಾಗಿದ್ದ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳ ಮಹಾಪೂರವೇ ಕೇಳಿಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿಂದು ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕಾಗಿ ಕರೆಯಲಾಗಿದ್ದ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲಿಕರು ತಾವು ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಆಗುತ್ತಿರುವ ತೊಂದರೆಗಳನ್ನು ತೋಡಿಕೊಂಡಿದ್ದಾರೆ.
ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕರೆದಿದ್ದ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸಲಹೆ ನೀಡುವ ಬದಲು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನೇ ಹೇಳಿದ್ದು, ಮುಖ್ಯಮಂತ್ರಿಗಳ ತಲೆಬಿಸಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದ ಅತ್ತ ಧರಿ ಇತ್ತು ಹುಲಿ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಸಮಸ್ಯೆ ಪರಿಹರಿಸುವುದೋ ಅಥವಾ ಸಕ್ಕರೆ ಕಾರ್ಖಾನೆಗಳ ಮಾಲೀಕರ ತೊಂದರೆ ನಿವಾರಿಸುವುದೋ ಎಂಬ ಸಂದಿಗ್ಧ ಪರಿಸ್ಥಿತಿ ಎದುರಿಸುವಂತಾಗಿದೆ. ಕೆಳೆದ ಐದು ವರ್ಷದಿಂದ ಎಂಎಸ್ಪಿ ಹೆಚ್ಚಳ ಮಾಡಿಲ್ಲ, ನಾಲ್ಕು ವರ್ಷದಿಂದ ಎಥೆನಾಲ್ ದರವನ್ನೂ ಕೇಂದ್ರ ಸರ್ಕಾರ ಹೆಚ್ಚಿಸಿಲ್ಲ. ಇದರಿಂದ ನಮಗೆ ಸಮಸ್ಯೆ ಆಗಿದೆ ಎಂದು ಸಕ್ಕರೆ ಕಾರ್ಖಾನೆಗಳ ಮಾಲೀಕರು ತಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, ಎಂಎಸ್ಪಿ ಮತ್ತು ಎಥೆನಾಲ್ ದರ ಹೆಚ್ಚಿಸುವಂತೆ ನೀವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರದ ರಫ್ತು ನೀತಿಯಿಂದಾಗಿ ರಫ್ತು ಮಾಡುವ ಸಕ್ಕರೆ ಬೆಲೆ, ಸ್ಥಳೀಯ ಸಕ್ಕರೆ ಬೆಲೆಗಿಂತ ತುಂಬ ಕಡಿಮೆ ಇದೆ. ಕೇಂದ್ರದಿಂದ ಬರಬೇಕಾ ಶೇ.6ರಷ್ಟು ಎಥೆನಾಲ್ ಸಬ್ಸಿಡಿ ಸರಿಯಾಗಿ ಬರುತ್ತಿಲ್ಲ. ಇದರಿಂದಲೂ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ತೊಂದರೆ ಆಗಿದೆ. ಎಂಬುದನ್ನು ಸಭೆಯ ಗಮನಕ್ಕೆ ತರಲಾಗಿದೆ. ಕೇಂದ್ರದ ನಾನಾ ನೀತಿಯಿಂದ ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳಿಗೆ ತುಂಬಾ ಅನ್ಯಾಯ ಆಗುತ್ತಿದೆ. ಎಥೆನಾಲ್ ಮಿಶ್ರಣ ಮತ್ತು ನೇರ ಎಥೆನಾಲ್ ಬಳಕೆ ಬಗ್ಗೆ ಇರುವ ನಿಯಮಗಳು ಹೊರೆಯಾಗುತ್ತಿದೆ. ಇದನ್ನು ಸರಿಪಡಿಸುವಂತೆ ಕೇಂದ್ರಕ್ಕೆ ಪತ್ರ ಬರೆಯುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟು ಸಕ್ಕರೆ ಉತ್ಪಾದನೆ ಮತ್ತು ಮಾರಾಟದ ಲೆಕ್ಕಾಚಾರದಲ್ಲಿ ಉತ್ತರ ಭಾರತದ ಕಾರ್ಖಾನೆಗಳಿಗೆ ಅನುಕೂಲ ಆಗುವ ಪರಿಸ್ಥಿತಿ ಇದೆ. ದಕ್ಷಿಣ ಭಾರತದ ಕಾರ್ಖಾನೆಗಳಿಗೆ ಅನ್ಯಾಯ ಆಗುತ್ತಲೇ ಇದೆ. ಆದ್ದರಿಂದ ಉತ್ತರ ಭಾರತದ ಕಾರ್ಖಾನೆ ಮಾಲೀಕರು ಕೇಂದ್ರದ ವಿರುದ್ಧ ಧ್ವನಿ ಎತ್ತುವುದಿಲ್ಲ. ನಾವು ಧ್ವನಿ ಎತ್ತಿಯೂ ಪ್ರಯೋಜನ ಆಗುತ್ತಿಲ್ಲ. ಒಂದು ಎಕರೆಯೂ ಕಬ್ಬು ಬೆಳೆಯದ ಕೆಲವು ರೈತರು ಕಾರ್ಖಾನೆ ಮಾಲೀಕರ ಬಗ್ಗೆ ಆಡುತ್ತಿರುವ ಮಾತುಗಳು ಕೇಳಿದರೆ, ನಾವು ಕಾರ್ಖಾನೆ ಮಾಡಿ ಏನು ಪಾಪ ಮಾಡಿದ್ದೀವೋ ಅನ್ನಿಸುತ್ತದೆ ಎಂಬ ಅಭಿಪ್ರಾಯವನ್ನು ಸಕ್ಕರೆ ಕಾರ್ಖಾನೆಗಳ ಮಾಲೀಕರು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕಬ್ಬು ಬೆಳೆಗಾರರ ಕಣ್ಣೀರು ಒರೆಸಲು ಸಾಲ ಮಾಡಿ, ಬ್ಯಾಂಕ್ ಬೆನ್ನು ಬಿದ್ದು ಕಾರ್ಖಾನೆ ಮಾಡಿದ್ದೇವೆ. ಆದರೆ, ರೈತರ ಹೆಸರಲ್ಲಿ ಕೆಲವರ ಬಾಯಲ್ಲಿ ಬರುತ್ತಿರುವ ಮಾತುಗಳು ನೋವುಂಟು ಮಾಡಿವೆ. ನಮನ್ನು ದರೋಡೆಕೋರರು ಎನ್ನುತ್ತಿದ್ದಾರೆ. ಇದೆಲ್ಲಾ ಸಾಕಾಗಿದೆ. ನಷ್ಟದಲ್ಲಿ ನಾವು ಕಾರ್ಖಾನೆ ನಡೆಸಬೇಕು ಎಂದರೆ, ಸಕ್ಕರೆ ಕಾರ್ಖಾನೆಗಳನ್ನೇ ಬಿಟ್ಟು ಕೊಡುತ್ತೇವೆ. ಸರ್ಕಾರವೇ ನಡೆಸಲಿ ಅಥವಾ ಬೇರೆ ಯಾರಾದರೂ ನಡೆಸಲಿ ಎಂದು ಮಾಲೀಕರು ಹೇಳಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆ ನಡೆಸುವುದು ಬಹಳ ಕಷ್ಟವಾಗುತ್ತಿದೆ. ಮಹಾರಾಷ್ಟ್ರದ ಕಬ್ಬಿನಲ್ಲಿ ರಿಕವರಿ ಪ್ರಮಾಣ ಶೇ.14 ರಷ್ಟಿದೆ. ಅವರಿಗೆ ಹೋಲಿಸಿ ಇಲ್ಲಿನವರು ಅದೇ ಹಣ ಕೇಳುತ್ತಾರೆ. ಆದರೆ ಇಲ್ಲಿನ ಕಬ್ಬಿನಿಂದ ಸಿಗುವ ರಿಕವರಿ ಪ್ರಮಾಣ ಕಡಿಮೆ ಇದೆ. ಸಕ್ಕರೆ ಕಾರ್ಖಾನೆ ಮಾಲೀಕರು, ಕಾರ್ಮಿಕರ ಸವಲತ್ತು ಮತ್ತು ಸಂಬಳ ಇತ್ಯಾದಿ ನೋಡಿಕೊಳ್ಳಬೇಕು. ರೈತರ ಬೇಡಿಕೆಗಳನ್ನೂ ನೋಡಬೇಕು. ಸಕ್ಕರೆ ಕಾರ್ಖಾನೆಗಳು ಸಕ್ಕರೆ, ವಿದ್ಯುತ್, ಎಥೆನಾಲ್ ಉತ್ಪಾದನೆ ಮಾಡಿದರೂ ನಿರಂತರ ನಷ್ಟದಲ್ಲಿವೆ ಎಂಬ ಸಮಸ್ಯೆಗಳನ್ನು ಗಮನಕ್ಕೆ ಸಭೆಯ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
