Thursday, September 18, 2025
Homeರಾಜ್ಯಅಲ್ಪಾವಧಿ ಕೃಷಿ ಸಾಲದ ಮಿತಿ ಹೆಚ್ಚಿಸುವಂತೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸಿಎಂ ಮನವಿ

ಅಲ್ಪಾವಧಿ ಕೃಷಿ ಸಾಲದ ಮಿತಿ ಹೆಚ್ಚಿಸುವಂತೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸಿಎಂ ಮನವಿ

CM Siddaramaiah meets Nirmala sitharaman

ಬೆಂಗಳೂರು,ನ.21- ಕರ್ನಾಟಕ ರಾಜ್ಯಸರ್ಕಾರದ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಕೇಂದ್ರಸಚಿವರನ್ನು ಭೇಟಿ ಮಾಡಿರುವ ಅವರು, ಕಳೆದ ಆರು ವರ್ಷದ ಕೃಷಿ ಸಾಲದ ವಹಿವಾಟನ್ನು ನಿರ್ವಹಿಸಿದ್ದಾರೆ. 2024-25ನೇ ಸಾಲಿನಲ್ಲಿ 9,162 ಕೋಟಿ ರೂ.ಗಳ ರಿಯಾಯಿತಿ ಸಾಲದ ಮಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ನಬಾರ್ಡ್‌ 2,340 ಕೋಟಿ ರೂ.ಗಳಿಗೆ ಮಾತ್ರ ಅನುಮೋದನೆ ನೀಡಿದೆ. ಇದು ಕಳೆದ ವರ್ಷಕ್ಕಿಂತಲೂ ಶೇ.58 ರಷ್ಟು ಕಡಿಮೆಯಾಗಿದೆ ಎಂದು ವಿವರಿಸಿದ್ದಾರೆ.

ಆರ್‌ಬಿಐ ಸಾಮಾನ್ಯ ಸಾಲದ ನೀತಿ (ಎಲ್‌ಓಸಿ)ಯನ್ನು ಕಡಿಮೆ ಮಾಡಿರುವುದರಿಂದಾಗಿ ಪ್ರಸಕ್ತ ವರ್ಷದ ರಿಯಾಯಿತಿ ದರ ಸಾಲದ ಮಿತಿಯನ್ನು ಕಡಿತ ಮಾಡಬೇಕಾಗಿದೆ ಎಂದು ನಬಾರ್ಡ್‌ ತಿಳಿಸಿದೆ.ಕರ್ನಾಟಕದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಮುಂಗಾರು ಚಟುವಟಿಕೆಗಳು ಚುರುಕುಗೊಂಡಿವೆ. ಹೀಗಾಗಿ ಅಲ್ಪಾವಧಿ ಕೃಷಿ ಸಾಲದ ಬೇಡಿಕೆ ಹೆಚ್ಚಿದೆ ಎಂದು ವಿವರಿಸಿದ್ದಾರೆ.

2019-20ನೇ ಸಾಲಿನಲ್ಲಿ 4,200 ಕೋಟಿ ರೂ.ಗಳ ಕೃಷಿ ಸಾಲಕ್ಕೆ ಮಂಜೂರಾತಿ ನೀಡಲಾಗಿತ್ತು. ನಂತರ ಹೆಚ್ಚುವರಿಯಾಗಿ 700 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದ್ದು, ಶೇ.15 ರಷ್ಟು ಹೆಚ್ಚಿಸಲಾಗಿತ್ತು.

2020-21ನೇ ಸಾಲಿನಲ್ಲಿ 5,500 ಕೋಟಿ ರೂ.ಗೆ ಅನುಮೋದನೆ ನೀಡಿ 1,300 ಕೋಟಿ ರೂ.ಗಳ ಹೆಚ್ಚುವರಿಯೊಂದಿಗೆ ಶೇ.27 ರಷ್ಟು, 2022-23 ನೇ ಸಾಲಿನಲ್ಲಿ 5,550 ಕೋಟಿ ರೂ.ಗಳ ಜೊತೆಗೆ 66 ಕೋಟಿ ರೂ.ಗಳ ಹೆಚ್ಚುವರಿಯೊಂದಿಗೆ ಶೇ.1 ರಷ್ಟು, 2023-24ನೇ ಸಾಲಿನಲ್ಲಿ 5,600 ಕೋಟಿ ರೂ.ಗಳ ಜೊತೆಗೆ 55 ಕೋಟಿ ರೂ. ಹೆಚ್ಚುವರಿಯೊಂದಿಗೆ ಶೇ.1 ರಷ್ಟು ಸಾಲದ ಪ್ರಮಾಣವನ್ನು ಹೆಚ್ಚಿಸಲಾಗಿತ್ತು.

2021-22ನೇ ಸಾಲಿನಲ್ಲಿ 5,483 ಕೋಟಿ ರೂ.ಗಳ ಮಂಜೂರಾತಿ ನೀಡಿದ್ದು, 16 ಕೋಟಿ ರೂ.ಗಳನ್ನು ಕಡಿತ ಮಾಡಿ ಶೇ.1 ರಷ್ಟು ತಗ್ಗಿಸಲಾಗಿತ್ತು. ಈ ವರ್ಷ 2340 ಕೋಟಿ ರೂ.ಗಳಿಗೆ ಮಾತ್ರ ಮಂಜೂರಾತಿ ನೀಡಿ 3260 ಕೋಟಿ ರೂ.ಗಳನ್ನು ಕಡಿತ ಮಾಡುವ ಮೂಲಕ ಶೇ.58 ರಷ್ಟು ಸಾಲದ ಮೊತ್ತವನ್ನು ಕಡಿಮೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡಲೇ ಆರ್‌ಬಿಐ ಮತ್ತು ನಬಾರ್ಡ್‌ ಸಂಸ್ಥೆಗಳಿಗೆ ಸೂಚನೆ ನೀಡಿ ರಾಜ್ಯದ ರೈತರಿಗೆ ಆಗಿರುವ ಸಾಲದ ಹೊರೆಯನ್ನು ಸರಿಪಡಿಸಿ ಅನ್ಯಾಯವನ್ನು ಸರಿದೂಗಿಸಬೇಕು ಎಂದು ಮನವಿ ಮಾಡಿದ್ದಾರೆ.ಈ ವೇಳೆ ಮುಖ್ಯಮಂತ್ರಿಯವರೊಂದಿಗೆ ಕೃಷಿ ಸಚಿವರಾದ ಚಲುವರಾಯಸ್ವಾಮಿ, ಭೈರತಿ ಸುರೇಶ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News