ಮೈಸೂರು,ಜು.29- ಮೇಕೆದಾಟು ಅಣೆಕಟ್ಟೆ ನಿರ್ಮಿಸು ವುದರಿಂದ ತಮಿಳುನಾಡಿಗೆ ಹೆಚ್ಚಿನ ಲಾಭವಾಗುತ್ತದೆ. ಆದರೂ ರಾಜಕೀಯ ಕಾರಣಕ್ಕಾಗಿ ಅನಗತ್ಯವಾಗಿ ವಿರೋಧ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಬಳಿಕ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ 65 ಟಿಎಂಸಿ ನೀರು ಸಂಗ್ರಹಿಸಲು ಸಾಧ್ಯವಾಗುತ್ತದೆ. ಅಣೆಕಟ್ಟು ಕಟ್ಟುವುದು ತಮಿಳುನಾಡು ಜಾಗದಲ್ಲಲ್ಲ. ಕೇರಳದ ಜಾಗದಲ್ಲಿ. ಕಾವೇರಿ ನದಿಯ ನೀರಿನ ಹಂಚಿಕೆ ಕೇವಲ ತಮಿಳುನಾಡು-ಕರ್ನಾಟಕಕ್ಕೆ ಸೀಮಿತವಲ್ಲ. ಪಾಂಡಿಚೇರಿ ಹಾಗೂ ಕೇರಳ ರಾಜ್ಯಗಳೂ ಇದರ ಪಾಲುದಾರಿಕೆ ಹೊಂದಿವೆ ಎಂದರು.
ಮೇಕೆದಾಟು ನಿರ್ಮಾಣ ನಮ ಹಕ್ಕು. ಇದಕ್ಕಾಗಿ ಸಾಕಷ್ಟು ಪ್ರತಿಭಟನೆಯನ್ನು ನಡೆಸಿದ್ದೇವೆ. ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ತಕ್ಷಣ ಅಣೆಕಟ್ಟು ನಿರ್ಮಾಣ ಮಾಡುತ್ತೇವೆ. ಕೇಂದ್ರ ಸರ್ಕಾರ ಈವರೆಗೂ ಅನುಮತಿ ನೀಡಿಲ್ಲ. ತಮಿಳುನಾಡಿನ ವಿರೋಧ ಅನಗತ್ಯ ಎಂದು ಹೇಳಿದರು.
ಕೇಂದ್ರ ಸರ್ಕಾರ ರಾಜಕೀಯ ಕಾರಣಕ್ಕಾಗಿ ಇ.ಡಿ, ಸಿಬಿಐ ಅನ್ನು ಬಳಸಿಕೊಂಡು ನಿರಪರಾಧಿಗಳನ್ನು ಜೈಲಿಗೆ ಕಳುಹಿಸುವ ಪ್ರಯತ್ನ ಮಾಡುತ್ತಿದೆ. ಜನ ಇದನ್ನು ಖಂಡಿಸಬೇಕು ಎಂದ ಸಿದ್ದರಾಮಯ್ಯ, ಬಿಜೆಪಿಯವರು ಮನೆಮುರುಕರು. ಯಾವುದೇ ಪ್ರಕರಣವಾದರೂ ಜೆಡಿಎಸ್-ಬಿಜೆಪಿ ಒಂದಾಗಿ ಸಿಬಿಐ ತನಿಖೆಗೆ ಕೊಡಿ ಎಂದು ಒತ್ತಾಯ ಮಾಡುತ್ತಾರೆ ಎಂದು ಆಕ್ಷೇಪಿಸಿದರು.
ರಾಜ್ಯದ ಸಂಸದರು ಕೇಂದ್ರ ಸರ್ಕಾರದಿಂದಾಗಿರುವ ಅನ್ಯಾಯಗಳ ವಿರುದ್ಧ ಒಂದು ದಿನವೂ ಪ್ರತಿಭಟನೆ ಮಾಡಿಲ್ಲ. ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸುತ್ತಿದೆ. ಬಜೆಟ್‌ನ ಅನ್ಯಾಯವೂ ಸೇರಿದಂತೆ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಆದರೆ ರಾಜ್ಯದ ಜೆಡಿಎಸ್-ಬಿಜೆಪಿ ಸಂಸದರು ಯಾವುದರ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ ಎಂದರು.ಪ್ರತಿ ವರ್ಷ ಇದೇ ರೀತಿ ರಾಜ್ಯದ ನದಿಗಳು ತುಂಬಿಹರಿಯಲಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ ಸಿದ್ದರಾಮಯ್ಯ, ಕೆಆರ್‌ಎಸ್‌ನ ಎಡದಂಡೆ ಕಾಲುವೆಯನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.