ಮೈಸೂರು,ಜು.29- ಕಾವೇರಿ ನದಿಪಾತ್ರದಲ್ಲಿ ಸಮೃದ್ಧಿ ಮಳೆಯಿಂದ ತುಂಬಿ ಹರಿಯುತ್ತಿರುವ ಕೆಆರ್‌ಎಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಬಾಗಿನ ಅರ್ಪಿಸಿದರು.ಸಚಿವರಾದ ಎಚ್.ಸಿ.ಮಹ ದೇವಪ್ಪ, ಚೆಲುವರಾಯಸ್ವಾಮಿ, ವೆಂಕಟೇಶ್, ಜಿಲ್ಲೆಯ ಜನಪ್ರತಿನಿಧಿ ಗಳು ಭಾಗವಹಿಸಿದ್ದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಹಿಂದೆ ಮಳೆ ಬರದೇ ಇದ್ದಾಗ ವಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅಪಪ್ರಚಾರ ಮಾಡಿದರು. ಈಗ ಸಿದ್ದರಾಮಯ್ಯ ಅವರ ಕಾಲ್ಗುಣದಿಂದ ಸಮೃದ್ಧ ಮಳೆಯಾಗುತ್ತಿದೆ. ಎಲ್ಲಾ ಜಲಾಶಯಗಳೂ ತುಂಬಿ ತುಳುಕುತ್ತಿವೆ ಎಂದು ತಿರುಗೇಟು ನೀಡಿದರು.
ಕಾವೇರಿ ನದಿಪಾತ್ರದಲ್ಲಿನ ರೈತರ ಹಿತರಕ್ಷಣೆಗೆ ನಮ ಸರ್ಕಾರ ಬದ್ಧವಾಗಿದೆ. ಬೆಳೆಗಳಿಗೆ ನೀರು ಹರಿಸಲಾಗುವುದು ಎಂದು ಹೇಳಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇತ್ತೀಚೆಗೆ ಆತುರಾತುರವಾಗಿ ಪ್ರತಿದಿನ 1 ಟಿಎಂಸಿ ನೀರು ಬಿಡಬೇಕು ಎಂದು ತೀರ್ಪು ನೀಡಿದೆ. ಕಾವೇರಿ ಕೃಪಾಶೀರ್ವಾದದಿಂದ ಉತ್ತಮ ಮಳೆಯಾಗುತ್ತಿದೆ. ಈ ತಿಂಗಳ ಅಂತ್ಯಕ್ಕೆ 40 ಟಿಎಂಸಿ ಬಿಡಬೇಕಿತ್ತು. ಈಗಾಗಲೇ 84 ಟಿಎಂಸಿಗೂ ಹೆಚ್ಚು ನೀರು ಹರಿದುಹೋಗಿದೆ. ನೀರು ಹರಿಸಿರುವ ಬಗ್ಗೆಯೂ ಕೆಲವರು ಟೀಕೆ ಮಾಡುತ್ತಿದ್ದಾರೆ. ಈ ಹಿಂದೆ
ಉತ್ತಮ ಮಳೆಯಾದಾಗ ನಿಗದಿಗಿಂತಲೂ ಹೆಚ್ಚು ನೀರು ಹರಿದಿರುವ ಲೆಕ್ಕವಿದೆ ಎಂದು ವಿವರಣೆ ನೀಡಿದರು.ಇದೇ ರೀತಿ ಮಳೆಯಾದರೆ ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳ ರೈತರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.ಕೆಆರ್‌ಎಸ್ ಅಣೆಕಟ್ಟೆಯ ಸಮೀಪವಿರುವ ಬೃಂದಾವನ ಉದ್ಯಾನವನವನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ ಉತ್ತಮ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲಾಗುವುದು. ಕಳೆದ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ. ಯೋಜನೆಗಾಗಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಸರ್ಕಾರದ ಭೂಮಿಯೇ ಸಾಕಾಗಲಿದೆ ಎಂದು ಹೇಳಿದರು.
ಅಣೆಕಟ್ಟೆಯ ಭದ್ರತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಗಂಗಾರತಿ ಮಾದರಿಯಲ್ಲೇ ಕಾವೇರಿ ಆರತಿಯನ್ನು ಆಯೋಜಿಸಲು ಚೆಲವರಾಯಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಒಂದು ತಿಂಗಳಲ್ಲೇ ವರದಿ ಪಡೆದು ಮುಂದಿನ ತಿಂಗಳಿನಿಂದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಮುಂದಿನ ವರ್ಷದಿಂದ ಕೆಆರ್‌ಎಸ್ ಅಣೆಕಟ್ಟೆ ತುಂಬಿದ ವೇಳೆಯಲ್ಲಿ ಬಾಗಿನ ಅರ್ಪಿಸುವ ಸಂದರ್ಭದಲ್ಲೇ ಕಾರ್ಯಕ್ರಮ ಆಯೋಜನೆ ಮಾಡಿ 5 ಮಂದಿಗೆ ಪ್ರಶಸ್ತಿ ನೀಡಲಾಗುವುದು. ರೈತರಿಗೆ ಸಮರ್ಪಕವಾದ ನೀರು ಪೂರೈಕೆ ಮಾಡುವ 3 ಜನ ಸವಡಿಯರಿಗೆ ಒಬ್ಬ ಪ್ರಗತಿಪರ ರೈತ ಹಾಗೂ ಮತ್ತೊಬ್ಬ ಕಿರಿಯ ಎಂಜಿನಯರ್‌ಗೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.