Thursday, July 4, 2024
Homeರಾಜ್ಯಬಸ್‌‍ ಟಿಕೆಟ್‌ ದರ ಸದ್ಯಕ್ಕೆ ಏರಿಸಲ್ಲ ಎನ್ನುತ್ತಲೇ ಏರಿಕೆಯ ಸುಳಿವು ನೀಡಿದ ಸಿಎಂ

ಬಸ್‌‍ ಟಿಕೆಟ್‌ ದರ ಸದ್ಯಕ್ಕೆ ಏರಿಸಲ್ಲ ಎನ್ನುತ್ತಲೇ ಏರಿಕೆಯ ಸುಳಿವು ನೀಡಿದ ಸಿಎಂ

ಬೆಂಗಳೂರು,ಜೂ.17- ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯ ಬೆನ್ನಲ್ಲೇ ಬಸ್‌‍ ಟಿಕೆಟ್‌ ದರದ ಏರಿಕೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷ ಸುಳಿವು ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಸಂಪನೂಲ ಕ್ರೂಢೀಕರಣಕ್ಕೆ ನಾವು ಪ್ರಯತ್ನ ಮಾಡಿದ್ದೇವೆ. ಜನರಿಗೆ ಹೊರೆಯಾಗುವಂತಹ ತೆರಿಗೆಗಳನ್ನು ವಿಧಿಸುವುದಿಲ್ಲ ಎಂದು ತಿಳಿಸಿದರು.

ಬಸ್‌‍ ಪ್ರಯಾಣ ದರ ಏರಿಕೆಯಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು ಬಸ್‌‍ ದರ ಏರಿಕೆಯಾಗಿ ತುಂಬಾ ವರ್ಷಗಳೇ ಆಗಿವೆ. ಸದ್ಯಕ್ಕೆ ಹೆಚ್ಚಳ ಮಾಡುವ ಸಾಧ್ಯತೆ ಇಲ್ಲ. ಆದರೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳುವ ಮೂಲಕ ಪ್ರಯಾಣದರದ ಏರಿಕೆಯ ಸುಳಿವು ನೀಡಿದರು.

ಕೇಂದ್ರ ಸರ್ಕಾರ ರಾಜ್ಯದ ಪಾಲನ್ನು ನ್ಯಾಯೋಚಿತವಾಗಿ ನೀಡಿದರೆ ನಮಗೆ ಪೆಟ್ರೋಲ್‌, ಡೀಸೆಲ್‌ ಮೇಲೆ ಮಾರಾಟ ತೆರಿಗೆಯನ್ನು ಹೆಚ್ಚಿಸುವ ಅಗತ್ಯವೇ ಬರುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ :
ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್‌, ಡಿಸೇಲ್‌ ದರ ಏರಿಕೆ ಮಾಡುತ್ತಿದ್ದರೂ ಬಾಯಿ ಬಿಡದ ಬಿಜೆಪಿಯವರು, ಈಗ ರಾಜ್ಯ ಸರ್ಕಾರ ಸಂಪನೂಲ ಕ್ರೋಢಿಕರಣಕ್ಕಾಗಿ ಮಾರಾಟ ತೆರಿಗೆಯನ್ನು ಹೆಚ್ಚಿಸಿದಾಕ್ಷಣ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಯವರು ಬಡವರ ಯೋಜನೆಗಳಿಗೆ ವಿರುದ್ಧವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಎಸ್‌‍ಟಿ ನಂತರ ರಾಜ್ಯಕ್ಕೆ ತೆರಿಗೆ ಹೆಚ್ಚು ಮಾಡುವ ಸ್ವಾತಂತ್ರ್ಯ ಕಡಿಮೆಯಾಗಿದೆ. ಅಬಕಾರಿ, ಮೋಟಾರು ಟ್ಯಾಕ್‌್ಸ, ಸ್ಟಾಂಟ್‌ ಡ್ಯೂಟಿ, ಪೆಟ್ರೋಲ್‌, ಡಿಸೇಲ್‌ ಮೇಲೆ ಮಾತ್ರ ತೆರಿಗೆ ಪರಿಷ್ಕರಣೆಗೆ ಅವಕಾಶ ಉಳಿದಿದೆ. ಉಳಿದ ಎಲ್ಲಾ ಜಿಎಸ್‌‍ಟಿಯನ್ನು ಕೇಂದ್ರ ಸರ್ಕಾರವೇ ಸಂಗ್ರಹಿಸುತ್ತಿದೆ. ಅದರಲ್ಲಿ ರಾಜ್ಯಕ್ಕೆ ಕಡಿಮೆ ಪಾಲು ಕೊಡುತ್ತಿದೆ.

14 ಮತ್ತು 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ 1.87 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ತೆರಿಗೆ ಪಾಲು ಹಾಗೂ ಕೇಂದ್ರದಿಂದ ಬರುವ ಅನುದಾನವೂ ಕಡಿಮೆಯಾಗಿದೆ. ಜಿಎಸ್‌‍ಟಿ ತೆರಿಗೆಯಲ್ಲಿ 5495 ಕೋಟಿ ಪಾಲು ಕಡಿಮೆಯಾಗಿದೆ, ಅದನ್ನು ಸರಿತೂಗಿಸಲು ವಿಶೇಷ ಅನುದಾನ ಕೊಡುತ್ತೇವೆ ಎಂದು 15ನೇ ಹಣಕಾಸು ಆಯೋಗ ಹೇಳಿತ್ತು, ಅದರ ಬಗ್ಗೆ ಮಾತನಾಡಲಿಲ್ಲ. ಬೆಂಗಳೂರಿನ ಕೆರೆಗಳು, ಫೆರಿಫರಲ್‌ ರಿಂಗ್‌ ರಸ್ತೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಲಾಗಿದ್ದ ಹಣ ಬಿಡುಗಡೆಯಾಗದಿದ್ದಾಗ ಬಿಜೆಪಿಯವರು ಮಾತನಾಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಕರ್ನಾಟಕ ಸರ್ಕಾರ ಪಾಪರ್‌ ಆಗಿದೆ ಎನ್ನುತ್ತಿದ್ದಾರೆ. ಪಾಪರ್‌ ಎಂದರೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ಗೆ ಅರ್ಥ ಗೊತ್ತಾ? ಯಾವುದಾದರೂ ವೇತನ ಅಥವಾ ಬಜೆಟ್‌ನಲ್ಲಿ ಹೇಳಿದ ಯೋಜನೆಗಳಿಗೆ ಹಣ ನಿಲ್ಲಿಸಿದ್ದೇವಾ? ಎಂದು ಮರು ಪ್ರಶ್ನಿಸಿದರು.

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಾಗ 2014 ಜೂನ್‌ನಲ್ಲಿ ಪೆಟ್ರೋಲ್‌ ಮೇಲೆ ಕೇಂದ್ರ ಅಬಕಾರಿ ಸುಂಕ 9.48 ರೂಪಾಯಿ ಇತ್ತು. ಅದು 2020 ಮೇ ವೇಳೆಗೆ 32.98 ರೂಪಾಯಿ ಆಗಿದೆ. 23.50 ರೂಪಾಯಿ ಹೆಚ್ಚಾಗಿದೆ. ಡೀಸೆಲ್‌ ಮೇಲೆ 3.56 ರೂ. ಕೇಂದ್ರ ಅಬಕಾರಿ ತೆರಿಗೆ 31.81 ರೂಪಾಯಿ ಆಗಿದೆ. 28.27 ರೂಪಾಯಿ ಹೆಚ್ಚಾಗಿದೆ. ಆಗ ಬಿಜೆಪಿಯವರು ಪ್ರತಿಭಟನೆ ಮಾಡಲಿಲ್ಲ. ಕೇಂದ್ರ ತೆರಿಗೆ ಹೆಚ್ಚಳದಿಂದ ಜನಸಾಮಾನ್ಯರಿಗೆ ಹೊರೆಯಾಗಲಿಲ್ಲವೇ?, ಬಡವರು, ರೈತರು ಹಾಗೂ ಸಾಮಾನ್ಯ ಜನರ ಪರವಾಗಿರುವ ಬಿಜೆಪಿಯವರು ಹಾಗೂ ಇತರರು ಕೇಂದ್ರ ತೆರಿಗೆಯನ್ನು ಏಕೆ ವಿರೋಧಿಸಲಿಲ್ಲ? ಎಂದು ಪ್ರಶ್ನಿಸಿದರು.

2014ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 113 ಡಾಲರ್‌ ಇತ್ತು. 2015ರಲ್ಲಿ 50 ಡಾಲರ್‌ಗೆ ಇಳಿಯಿತು. 2016ರಲ್ಲಿ ಅದಕ್ಕಿಂತ ಕಡಿಮೆಯಾಯಿತು. ಈಗ 82.35 ಡಾಲರ್‌ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಯಿತು. ಆದರೆ ದೇಶಿಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾಗಿದೆ. 410 ರೂ ಇದ್ದ ಅಡುಗೆ ಸಿಲಿಂಡರ್‌ ಬೆಲೆ 200 ರೂ ದರ ಇಳಿಸಿದ ಬಳಿಕವೂ 805.50 ಆಗಿದೆ ಎಂದರು.

ಬಡವರು ಮತ್ತು ಶ್ರೀಸಾಮಾನ್ಯರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿಯವರು ಯಾರ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ನಮಗೆ ಪಾಠ ಹೇಳುತ್ತಾರಾ ? ಬರ ಪರಿಹಾರ ತೆಗೆದುಕೊಳ್ಳಲು ಕೋರ್ಟ್‌ಗೆ ಹೋದ ಮೇಲೆ ನ್ಯಾಯಾಲಯದ ನಿರ್ದೇಶನದ ಮೇರೆಗೆ 3453 ರೂಪಾಯಿ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಬಡವರ, ಸಾಮಾನ್ಯರ ಕಾರ್ಯಕ್ರಮಗಳಿಗೆ ವಿರುದ್ಧವಾಗಿದ್ದಾರೆ. ನಾವು ಗ್ಯಾರಂಟಿ ಕೊಟ್ಟಿರುವುದು ಜನ ಸಾಮಾನ್ಯರಿಗಾಗಿ. ಇವುಗಳಿಂದ ಬಡವರ ಕೊಳ್ಳುವ ಆರ್ಥಿಕ ಶಕ್ತಿ ಹೆಚ್ಚಾಗಿದೆ ಎಂದು ವಿವರಿಸಿದರು. ರಾಜ್ಯದಲ್ಲಿ ಮಾರಾಟ ತೆರಿಗೆ ಪರಿಷ್ಕರಣೆಯ ಬಳಿಕ ಬೆಂಗಳೂರಿನಲ್ಲಿ ಪೆಟ್ರೋಲ್‌ ಲೀಟರ್‌ಗೆ 102.85 ರೂಪಾಯಿಗೆ ಮಾರಾಟವಾಗುತ್ತಿದೆ. ಮೊದಲು 99.85 ರೂಗಳಿತ್ತು. ನೆರೆಯ ತಮಿಳುನಾಡಿನ ಹೊಸೂರಿನಲ್ಲಿ 102.84, ಕೇರಳದ ಕಾಸರಗೂಡಿನಲ್ಲಿ 106.64 ರೂ, ಆಂಧ್ರ ಪ್ರದೇಶದಲ್ಲಿ 109.44, ತೆಲಂಗಾಣದಲ್ಲಿ 107.40, ಬಿಜೆಪಿ ಆಡಳಿತದಲ್ಲಿರುವ ಮಹಾರಾಷ್ಟ್ರದಲ್ಲಿ 104.46 ರೂಪಾಯಿ ದರವಿದೆ.

ಡೀಸೆಲ್‌ 85.94 ಇದ್ದದ್ದು ಮೂರು ರೂ. ಮಾರಾಟ ತೆರಿಗೆ ಹೆಚ್ಚಳದ ಬಳಿಕ 88.94 ಆಗಿದೆ. ಹೋಸೂರಿನಲ್ಲಿ 94.81 ರೂ, ಕಾಸರಗೋಡಿನಲ್ಲಿ 95.60, ಆಂಧ್ರ ಪ್ರದೇಶದಲ್ಲಿ 97, ತೆಲಂಗಾಣದಲ್ಲಿ 95, ಮಹಾರಾಷ್ಟ್ರದಲ್ಲಿ 91.01 ರೂಪಾಯಿ ಇದೆ. ಇನ್ನೂ ಬಿಜೆಪಿ ಆಡಳಿತದ ರಾಜಸ್ಥಾನದಲ್ಲಿ ಪೆಟ್ರೋಲ್‌ 104.86 , ಮಧ್ಯಪ್ರದೇಶದಲ್ಲಿ107.47 ರೂ. ರಾಜಸ್ಥಾನದಲ್ಲಿ ಡೀಸೆಲ್‌ 90.36, ಗುಜರಾತ್‌ನಲ್ಲಿ 90.21, ಮಧ್ಯ ಪ್ರದೇಶದಲ್ಲಿ 91.84 ರೂ ಇದೆ. ಬಿಜೆಪಿಯವರು ಅಲ್ಲೆಲ್ಲಾ ಏಕೆ ಗಲಾಟೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯಕ್ಕೆ ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಒಂದು ದಿನ ಬಾಯಿ ಬಿಡಲಿಲ್ಲ. ಇವರಿಗೆ ನಮ ಸರ್ಕಾರವನ್ನು ಟೀಕಿಸಲು ಯಾವ ನೈತಿಕತೆ ಇದೆ ಎಂದ ಅವರು, ಬಡವರ ಕೆಲಸಗಳಿಗೆ ಕಲ್ಲು, ಹಾಕಿ ಬಡವರ ಹೊಟ್ಟೆಯ ಮೇಲೆ ಹೊಡೆಯುವುದೇ ಬಿಜೆಪಿಯವರ ಕೆಲಸ ಎಂದು ಟೀಕಿಸಿದರು.

ಸಂಪನೂಲ ಸಂಗ್ರಹಿಸಿ, ರಾಜ್ಯವನ್ನು ಅಭಿವೃದ್ಧಿ ಮಾಡುವುದೇ ನಮ ಉದ್ದೇಶ. ಕೇಂದ್ರ ಸರ್ಕಾರ ದೊಡ್ಡ ಅನ್ಯಾಯ ಮಾಡುತ್ತಿದೆ. ಬಿಜೆಪಿಯವರು ಒಂದು ದಿನವೂ ಚಕಾರ ಎತ್ತಲಿಲ್ಲ. ಆರು ತಿಂಗಳು ಬರಗಾಲಕ್ಕೆ ಹಣ ನೀಡದಿದ್ದರೂ ಮಾತನಾಡಲಿಲ್ಲ. ಈಗ ಬಿಜೆಪಿಗೆ ಬೇರೆ ವಿಚಾರಗಳಿಲ್ಲ. ಅದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆಶೋಕ್‌ಗೆ ದೇಶದ ಆರ್ಥಿಕತೆ ಗೊತ್ತಿಲ್ಲ. ಹೆಚ್‌.ಡಿ.ಕುಮಾರಸ್ವಾಮಿ ಜನರಿಗೆ ದಂಗೆ ಏಳಿ ಎಂದು ಕರೆ ನೀಡಿದ್ದಾರೆ. ರಾಜ್ಯಕ್ಕೆ ಅನ್ಯಾಯವಾದಾಗ ಒಂದು ದಿನವೂ ಮಾತನಾಡಲಿಲ್ಲ. ಬಿಜೆಪಿ ಜೊತೆ ಮೈತ್ರಿ ಬಳಿಕವೂ ಮೌನಕ್ಕೆ ಶರಣಾಗಿದ್ದರು ಎಂದು ಸಿಡಿಮಿಡಿ ವ್ಯಕ್ತಪಡಿಸಿದರು.

ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದು ಸುಳ್ಳು. ಹಾಗೆಂದ ಮಾತ್ರಕ್ಕೆ ಹಣಕಾಸು ತುಂಬಿ ತುಳುಕುತ್ತಿಲ್ಲ, ಪೆಟ್ರೋಲ್‌ ಡೀಸೆಲ್‌ನಿಂದ 3 ಸಾವಿರ ಕೋಟಿ ಬರಬಹುದು. ಗ್ಯಾರಂಟಿಗಳಿಗೆ 60 ಸಾವಿರ ಕೋಟಿ ಖರ್ಚಾಗುತ್ತಿದೆ. ನಾವು ಆ ಹಣವನ್ನು ಶ್ರೀಮಂತರಿಗೆ ಕೊಡುತ್ತಿಲ್ಲ. ನರೇಂದ್ರ ಮೋದಿ ರೀತಿ ಅಂಬಾನಿ ಅದಾನಿಯಂತಹ ಶ್ರೀಮಂತರಿಗೆ ಸಾಲ ಮನ್ನಾ ಮಾಡುತ್ತಿಲ್ಲ ಎಂದು ತಿರುಗೇಟು ನೀಡಿದರು.

ನರೇಂದ್ರ ಮೋದಿ ಕೂಡ ನಮ ಹಾಗೇಯೇ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿಯೇ ಅಧಿಕಾರಕ್ಕೆ ಬಂದವರು. ಅಚ್ಚೆ ದಿನ್‌ ಆಯೇಗಾ ಎಂದು ಹೇಳಿದರು. ನಾವು ಆ ರೀತಿ ಹೇಳಲಿಲ್ಲ. ಚುನಾವಣೆ ಪ್ರಚಾರದಲ್ಲಿ ತೆರಿಗೆ ಹಾಕಲ್ಲ ಎಂದು ನಾವು ಹೇಳಿಲ್ಲ, ಹೇಳಿದ್ದರೆ ತೋರಿಸಿ ಎಂದು ಸವಾಲು ಹಾಕಿದರು.

ಐದು ವರ್ಷ ನರೇಂದ್ರ ಮೋದಿ ಯದ್ವಾತದ್ವ ಬೆಲೆ ಏರಿಕೆ ಮಾಡಿದರೂ ಕಡಿಮೆ ಮಾಡಿ ಎಂದು ಬಿಜೆಪಿಯವರು ಕೇಳಲಿಲ್ಲ. ಸಂಸತ್‌ ಚುನಾವಣೆಯಲ್ಲಿ ಸೋಲಿಗಾಗಿ ದರ ಹೆಚ್ಚಿಸಲಾಗಿದೆ ಎಂಬುದು ಸುಳ್ಳು. ಕಾಂಗ್ರೆಸ್‌‍ಗೆ ಶೇ.31.ರಿಂದ 45 ಮತ ಗಳಿಕೆ ಅಂದರೆ ಶೇ.13ರಷ್ಟು ಹೆಚ್ಚಾಗಿದೆ. 2019ರಲ್ಲಿ ಕಾಂಗ್ರೆಸ್‌‍ ಒಂದು ಸ್ಥಾನ ಮಾತ್ರ ಗೆದ್ದಿತ್ತು, ಈಗ 9ರಲ್ಲಿ ಗೆದಿದ್ದೇವೆ. 25 ಸ್ಥಾನ ಗೆದಿದ್ದ ಬಿಜೆಪಿಯವರು 17ಕ್ಕೆ ಇಳಿದಿದ್ದಾರೆ. ಜೆಡಿಎಸ್‌‍ನೊಂದಿಗೆ ಮೈತ್ರಿಯಿಂದಾಗಿ ಬಿಜೆಪಿ ಕಾಂಗ್ರೆಸ್‌‍ಗಿಂತ ಸ್ವಲ್ಪ ಪ್ರಮಾಣದಷ್ಟು ಮಾತ್ರ ಮತ ಹೆಚ್ಚು ಗಳಿಸಿದೆ. ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಕಡಿಮೆ ಸ್ಥಾನ ಗಳಿಸಿದೆ, ಸೋತಿದೆ. ನಾವು ಗೆದ್ದಿದ್ದೇವೆ ಎಂದು ವಿವರಿಸಿದರು.

ಗ್ಯಾರಂಟಿ ಯೋಜನೆಗಳು ಬಡವರ ಕಾರ್ಯಕ್ರಮ, ಅವನ್ನು ಮತಕ್ಕಾಗಿ ಮಾಡಿದ್ದಲ್ಲ. ಯಾವುದನ್ನೂ ನಿಲ್ಲಿಸುವುದಿಲ್ಲ, ಎಲ್ಲ ಯೋಜನೆಗಳನ್ನು ಮುಂದುವರೆಸುತ್ತೇವೆ ಎಂದರು. ಸಚಿವರಾದ ಬೈರತಿ ಬಸವರಾಜು, ಚಲುವರಾಯಸ್ವಾಮಿ, ಶಾಸಕ ನರೇಂದ್ರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News