Tuesday, September 17, 2024
Homeರಾಜ್ಯಉಪ್ಪು ತಿಂದವರು ನೀರು ಕುಡಿಯಲೇಬೇಕು : ಸಿಎಂ ಸಿದ್ಧರಾಮಯ್ಯ

ಉಪ್ಪು ತಿಂದವರು ನೀರು ಕುಡಿಯಲೇಬೇಕು : ಸಿಎಂ ಸಿದ್ಧರಾಮಯ್ಯ

ಬೆಂಗಳೂರು, ಜು.13– ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ತನಿಖೆ ನಡೆಯುತ್ತಿದ್ದು, ಜಾರಿನಿರ್ದೇಶನಾಲಯದ ಮಧ್ಯಪ್ರವೇಶ ಅಗತ್ಯ ಇರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಅವರು, ನಮ್ಮ ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ವಿಶೇಷ ತನಿಖಾದಳ ರಚನೆ ಮಾಡಿದ್ದೇವೆ ಎಂದು ಹೇಳಿದರು.

ನಿಗಮದಲ್ಲಿನ ಹಣ ವರ್ಗಾವಣೆ ಪ್ರಕರಣಕ್ಕೆ ಆರ್ಥಿಕ ಇಲಾಖೆ ಹೊಣೆ ಯಲ್ಲ. ಬ್ಯಾಂಕ್ಗಳಲ್ಲಿ ಅಕ್ರಮಗಳಾದರೆ ಅದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಥವಾ ಪ್ರಧಾನಿ ನರೇಂದ್ರಮೋದಿ ಹೊಣೆಗಾರರು ಎಂದು ಹೇಳಲು ಸಾಧ್ಯವೇ? ನಿಗಮದಲ್ಲಿನ ವ್ಯವಸ್ಥಾಪಕ ನಿರ್ದೇಶಕರು, ಹಣಕಾಸು ಅಧಿಕಾರಿಗಳು ಹೊಣೆಗಾರರಾಗಿದ್ದಾರೆ.

ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ವ್ಯವಸ್ಥಾಪಕ ನಿರ್ದೇಶಕರು ಏಕಾಂಗಿಯಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಎಸ್ಐಟಿ ತನಿಖೆ ಬಹಳ ಮುಂದುವರೆದಿದೆ. ಸಂಬಂಧಪಟ್ಟವರನ್ನು ಬಂಧಿಸಿರುವ ಜೊತೆಗೆ ಈವರೆಗೂ ನಡೆದ ತನಿಖೆ ಹಾಗೂ ಕಾರ್ಯಾಚರಣೆಯಲ್ಲಿ 30 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಹಂತದಲ್ಲಿ ಜಾರಿನಿರ್ದೇಶನಾಲಯದ ಮಧ್ಯಪ್ರವೇಶ ಅಗತ್ಯ ಇರಲಿಲ್ಲ. ಬಹುಶಃ ಬ್ಯಾಂಕ್ನಲ್ಲಿ ನಡೆದ ವಹಿವಾಟಿಗೆ ಸಂಬಂಧಪಟ್ಟಂತೆ ಇಡಿ ತನಿಖೆ ನಡೆಸುತ್ತಿರಬಹುದು ಎಂದು ಹೇಳಿದ್ದಾರೆ.

RELATED ARTICLES

Latest News