ಬೆಂಗಳೂರು,ಫೆ.29- ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ಭರವಸೆ ನೀಡಿದರು.ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ಬಂಸಬೇಕು, ನೈತಿಕ ಹೊಣೆ ಹೊತ್ತು ಸರ್ಕಾರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷದ ಸದಸ್ಯರು ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಸಿಎಂ, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ.
ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಸ್ವತಂತ್ರವಾಗಿ ಎಫ್ಐಆರ್ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ. ಆ ಘಟನೆಗೆ ಸಂಬಂದಿಸಿದಂತೆ 7 ಜನರ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ. ಆದರೂ ಪ್ರತಿಪಕ್ಷಗಳ ಶಾಸಕರು ಧರಣಿ ನಡೆಸಿ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಸುಗಮ ಕಲಾಪಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಆದರೂ ಬಿಜೆಪಿ ಶಾಸಕರು ಮಣಿಯದಿದ್ದಾಗ, ದೇಶಭಕ್ತಿಯ ವಿಚಾರದಲ್ಲಿ ನಾವು ನಿಮ್ಮಿಂದ ಪಾಠ ಕಲಿಯಬೇಕಿಲ್ಲ. ನಿಮಗಿಂತ 100 ಪಾಲು ಹೆಚ್ಚು ನಮಗೆ ಇದೆ ಎಂದು ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
1925ರಲ್ಲಿ ಆರ್ಎಸ್ಎಸ್ ಅಸ್ತಿತ್ವಕ್ಕೆ ಬಂದಿತು. ಹೆಗಡೆವಾರು, ಗೋಲವಾಲ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರೆ ? ನಮ್ಮ ಪಕ್ಷ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಪಕ್ಷ ಎಂದು ಸಮರ್ಥಿಸಿಕೊಂಡರು. ಮಹಾತ್ಮಗಾಂಧೀಜಿಯವರನ್ನು ಗುಂಡಿಕ್ಕಿ ಕೊಂದ ನಾಥೋರಾಮ್ ಗೂಡ್ಸೆ ಅವರನ್ನು ಪೂಜೆ ಮಾಡುವವರು ಅವರಿಂದ ನಾವು ದೇಶಭಕ್ತಿಯ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದರು.ಜೆಡಿಎಸ್ನವರು ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಎಸ್ ಅನ್ನು ತೆಗೆದು ಜನತಾ ದಳ ಎಂದಿಟ್ಟುಕೊಳ್ಳುವುದು ಸೂಕ್ತ. ಬೇಕಿದ್ದರೆ ಜನತಾದಳ ಬಿಜೆಪಿ ಎಂದಿಟ್ಟುಕೊಳ್ಳಲಿ ಎಂದು ಟೀಕಿಸಿದರು.