Tuesday, January 14, 2025
Homeರಾಜ್ಯ2024ನೇ ಸಾಲಿನ ಪ್ರೆಸ್‌‍ ಕ್ಲಬ್‌ ಆಫ್ ಬೆಂಗಳೂರು ಪ್ರಶಸ್ತಿ ಪ್ರಧಾನ ಮಾಡಿದ ಸಿಎಂ

2024ನೇ ಸಾಲಿನ ಪ್ರೆಸ್‌‍ ಕ್ಲಬ್‌ ಆಫ್ ಬೆಂಗಳೂರು ಪ್ರಶಸ್ತಿ ಪ್ರಧಾನ ಮಾಡಿದ ಸಿಎಂ

CM Siddaramaiah presents Press Club of Bangalore Award for 2024

ಬೆಂಗಳೂರು, ಜ.12 – ಮಾಧ್ಯಮದವರು ಯಾವಾಗಲೂ ಜನರ ಧ್ವನಿಯಾಗಿ ಕೆಲಸ ಮಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ಮಾಡಿದರು. ಪ್ರೆಸ್‌‍ ಕ್ಲಬ್‌ ಆಫ್ ಬೆಂಗಳೂರು ಕೊಡಮಾಡುವ 2024ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ, ಸುವರ್ಣ ಮಹೋತ್ಸವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಸಾಧ್ಯವಾದರೆ ಸತ್ಯ ಬರೆಯಲು ಪ್ರಯತ್ನ ಮಾಡಿ ನೋಡೋಣ ಎಂದರು. ಎಲ್ಲಾ ಆರೋಗ್ಯಕರ ಟೀಕೆಗಳನ್ನು ಸ್ವಾಗತಿಸುತ್ತೇನೆ. ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ. ಆದರೆ ರಾಜಕೀಯ ಕಾರಣಕ್ಕೆ ವಿನಾ ಕಾರಣ ಟೀಕಿಸಿದರೆ ಅದನ್ನು ಕಡೆಗಣಿಸುತ್ತೇನೆ ಎಂದು ನುಡಿದರು.

ಊಹಾ ಪತ್ರಿಕೋದ್ಯಮ ವ್ಯಾಪಕವಾಗುತ್ತಿರುವುದು ಅಪಾಯಕಾರಿ. ನಾನು ಇದುವರೆಗೂ ಯಾವ ಮಾಧ್ಯಮದವರಿಗೂ ಯಾಕೆ ಈ ರೀತಿ ಬರೆದಿದ್ದೀರಿ ಎಂದು ಕೇಳಿಲ್ಲ. ಆದರೆ ನಾವು ಜನಪರ ಕೆಲಸ ಮಾಡದಿದ್ದಾಗ, ಕೊಟ್ಟ ಮಾತು ಈಡೇರಿಸದಿದ್ದಾಗ ಅದನ್ನು ಬರೆದು ಜನರ ಕಣ್ಣು ತೆರೆಸುವ ಹಕ್ಕು, ಜವಾಬ್ದಾರಿ ಮಾಧ್ಯಮದವರ ಮೇಲಿದೆ. ಅದನ್ನು ನಿಭಾಯಿಸಿ ಎಂದು ಅವರು ಕರೆ ನೀಡಿದರು.

ಮನಃಸಾಕ್ಷಿಗೆ ತಕ್ಕಂತೆ ಮಾಧ್ಯಮಗಳು ವರದಿ ಮಾಡಿದರೆ ಸಮಾಜಕ್ಕೆ ಅದಕ್ಕಿಂತ ದೊಡ್ಡ ಸೇವೆ ಇಲ್ಲ. ಸುದ್ದಿಗಳನ್ನು ವೈಭವೀಕರಿಸುವುದು, ಮೂಢ ನಂಬಿಕೆಗಳನ್ನು ಬೆಂಬಲಿಸಲು ಹೋಗಬೇಡಿ. ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೆ ಜ್ಯೋತಿಷಿಗಳನ್ನು ಚಾನಲ್‌ಗಳಿಗೆ ಕರೆಸಿ ಏನೆಲ್ಲಾ ಹೇಳಿಸಿದಿರಿ. ನಾನು 5 ವರ್ಷ ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸಲ್ಲ ಎಂದು ತೋರಿಸಿದ್ದೀರಿ. ಆದರೆ ನಾನು ಐದು ವರ್ಷ ಪೂರೈಸಿ ಎರಡನೇ ಬಾರಿ ಮುಖ್ಯಮಂತ್ರಿಯೂ ಆದೆ. ಈಗ ಹೇಳಿ ಕಾಗೆ ಸುದ್ದಿಯಿಂದ ಮಾಧ್ಯಮಗಳ ವಿಶ್ವಾಸಾರ್ಹತೆ ಕಡಿಮೆ ಆಗಿದೆಯೋ ಇಲ್ವೋ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ನಾವು ಊಟಕ್ಕೆ ಸೇರಿದಾಗ ಏನೋ ಮಾತಾನಾಡಿರುತ್ತೇವೆ. ಆದರೆ ಮಾಧ್ಯಮಗಳೇ ಡೈಲಾಗ್‌ ಬರೆದು ಬಿಡುತ್ತಾರೆ. ನಮಗೆ ಗೊತ್ತೇ ಇರದ ವಿಷಯವನ್ನು ಅವರೇ ಡೈಲಾಗ್‌ ಬರೆದು ತೋರಿಸಿದ್ದಾರೆ ಎಂದು ಟೀಕಿಸಿದರು.ಬುದ್ದ, ಬಸವ, ಅಂಬೇಡ್ಕರ್‌ ಹೇಳಿದ ಸಮ ಸಮಾಜದ ಆಶಯ ಈಡೇರಿಸುವ ದಿಕ್ಕಿನಲ್ಲಿ ವೃತ್ತಿಪರತೆ ನಿರ್ವಹಿಸಿದರೆ, ಅದು ಸಮಾಜಕ್ಕೆ ಉಪಯೋಗವಾಗುತ್ತದೆ ಎಂದು ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಶುಭ ಹಾರೈಸಿದರು.

ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತರಾದ ಸಚಿವ ಎಂ.ಬಿ.ಪಾಟೀಲ್‌‍, ಸನಾನಿತರಾದ ಸಚಿವರುಗಳಾದ ಲಕ್ಷ್ಮೀ ಹೆಬ್ಬಾಳ್ಕರ್‌, ಕೆ.ಜೆ.ಜಾರ್ಜ್‌, ಕೆ.ಹೆಚ್‌.ಮುನಿಯಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್‌ ಅಹಮದ್‌, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಚಲನ ಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ, ಪ್ರೆಸ್‌‍ ಕ್ಲಬ್‌ ಅಧ್ಯಕ್ಷ ಆರ್‌. ಶ್ರೀಧರ್‌ ಸೇರಿದಂತೆ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು.

RELATED ARTICLES

Latest News