ಬೆಂಗಳೂರು, ಮಾ.7– ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು 4 ಲಕ್ಷ ಕೋಟಿಗೂ ಅಧಿಕ ಗಾತ್ರದ 2025-26ನೇ ಸಾಲಿನ ಬಜೆಟ್ ಅನ್ನು ಮಂಡಿಸಿದರು. 16ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ದಾಖಲೆ ಮಾಡಿರುವ ಸಿದ್ದರಾಮಯ್ಯ ಯಾವುದೇ ಜನಪ್ರಿಯ ಹೊಸ ಕಾರ್ಯಕ್ರಮಗಳ ಬೆನ್ನು ಬೀಳದೆ ಅಭಿವೃದ್ಧಿ ಕೇಂದ್ರಿತ ಆಯವ್ಯಯ ಮಂಡಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ತಮ್ಮ ಮೊಣಕಾಲಿನ ನೋವಿನ ನಡುವೆಯೂ ಆರಂಭದಲ್ಲಿ ನಿಂತು ಬಜೆಟ್ ಭಾಷಣ ಆರಂಭಿಸಿದ ಅವರು, ಅನಂತರ ಸಭಾಧ್ಯಕ್ಷರ ಅನುಮತಿ ಮೇರೆಗೆ ಕುಳಿತುಕೊಂಡು ಬಜೆಟ್ ಪ್ರತಿಯನ್ನು ಓದಲಾರಂಭಿಸಿದರು.
ಶಿಕ್ಷಣ, ಆರೋಗ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ವಾಸ್ಥ್ಯ ಕರ್ನಾಟಕ ನಿರ್ಮಾಣದ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ರೈತ ಕಲ್ಯಾಣ ಉದ್ದೇಶಿತ ಯೋಜನೆಗಳಿಗೆ ಕಳೆದ ವರ್ಷ 44 ಸಾವಿರ ಕೋಟಿ ರೂ. ಒದಗಿಸಿದ್ದರೆ ಪ್ರಸಕ್ತ ಸಾಲಿನ 51,339 ಕೋಟೆ ರೂ. ನೀಡಲಾಗಿದೆ. ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಯೋಜನೆಗಳಿಗಾಗಿ 13,692 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ.
ಪ್ರತೀ ಬಾರಿಯಂತೆ ಈ ವರ್ಷವೂ ಕೂಡ ಸಿದ್ದರಾಮಯ್ಯನವರು ತಮ್ಮ ಬಜೆಟ್‌ನಲ್ಲಿ ಕೇಂದ್ರದಿಂದ ತೆರಿಗೆ ಅನ್ಯಾಯವಾಗಿದೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ.
ವಿತ್ತೀಯ ಕೊರತೆ ಮತ್ತು ಆರ್ಥಿಕತೆಯ ಆರೋಗ್ಯ ಸಮಾಧಾನಕರ ಸ್ಥಿತಿಯಲ್ಲಿದೆ. ಈ ವರ್ಷ ಗ್ಯಾರಂಟಿ ಯೋಜನೆಗಳಿಗೆ 51,034 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಇದರ ಹೊರತಾಗಿಯೂ ವಿತ್ತೀಯ ಹೊಣೆಗಾರಿಕೆ ಆರ್ಥಾತ್ ಸಾಲದ ಪ್ರಮಾಣ ಶೇ.25 ರೊಳಗಿದೆ ಎಂದು ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ.ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎಂದು ಶಾಸಕರು ದಿನನಿತ್ಯ ಸಿಡಿಮಿಡಿಗೊಳ್ಳುವುದನ್ನು ತಪ್ಪಿಸಲು ಸಿದ್ದರಾಮಯ್ಯ ಈ ಬಾರಿ ವಿಧಾನಸಭಾ ಕ್ಷೇತ್ರದ ರಸ್ತೆ, ಸಣ್ಣನೀರಾವರಿ, ಮೂಲಸೌಕರ್ಯಗಳಿಗಾಗಿ 8 ಸಾವಿರ ಕೋಟಿ ರೂ.ಗಳ ಕೊಡುಗೆಯನ್ನು ಘೋಷಿಸಿದ್ದಾರೆ.
ಆಡಳಿತ ಸುಧಾರಣಾ ವ್ಯವಸ್ಥೆ ಹಾಗೂ ಭ್ರಷ್ಟವ್ಯವಸ್ಥೆಗಳ ನಿಯಂತ್ರಣಕ್ಕಾಗಿ ಹಲವು ಉಪಕ್ರಮಗಳನ್ನು ಕೈಗೊಂಡಿದ್ದು, ತೆರಿಗೆ ಸಂಗ್ರಹಣಾ ಇಲಾಖೆಗಳಾದ ಅಬಕಾರಿ, ನೋಂದಣಿ, ಮುದ್ರಾಂಕ, ಸಾರಿಗೆ, ಗಣಿ ಮತ್ತು ಭೂ ವಿಜ್ಞಾನ ಹಾಗೂ ವಾಣಿಜ್ಯ ತೆರಿಗೆ ಇಲಾಖೆಗಳಲ್ಲಿ ಬಿ ಮತ್ತು ಸಿ ವೃಂದಗಳಲ್ಲಿನ ಅಧಿಕಾರಿಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ.
ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ, ಯಾಂತ್ರೀಕರಣಕ್ಕೆ ಒತ್ತು ನೀಡಿದ್ದಾರೆ. ಸಾವಯವ ಮತ್ತು ಸಿರಿಧಾನ್ಯ ಹಬ್‌ಗಳನ್ನು ಸ್ಥಾಪಿಸುವ ಪ್ರಸ್ತಾಪ ಮಾಡಿದ್ದಾರೆ.
ಜಲಸಂಪನ್ಮೂಲ ಇಲಾಖೆಯ ಆಲಮಟ್ಟಿಯ ಎತ್ತರ. ಮೇಕೆದಾಟು, ಕಸಳಾಬಂಡೂರಿ ನಾಲಾ ಯೋಜನೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರಗಳ ತಿರುವಳಿ ದೊರೆತ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಹೇಳುವ ಮೂಲಕ ಯಾವುದೇ ಅನುದಾನ ಒದಗಿಸದೆ ಜಾರಿಕೊಂಡಿದ್ದಾರೆ.
ನೆನೆಗುದಿಗೆ ಬಿದ್ದಿರುವ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸುವುದು, ಅಣೆಕಟ್ಟುಗಳ ಗೇಟುಗಳ ದುರಸ್ತಿ ಮತ್ತು ಬದಲಿ ವ್ಯವಸ್ಥೆಯನ್ನು ಪ್ರಸ್ತಾಪಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಕೆರೆಗಳ ಆಧುನೀಕರಣ, ಅಣೆಕಟ್ಟು, ಪಿಕ್ ಅಪ್, ಕಿಂಡಿ ಅಣೆಕಟ್ಟು, ಏತ ನೀರಾವರಿ, ನಿಷ್ಕ್ರಿಯ ಯೋಜನೆಗಳ ಪುನರುಜ್ಜಿವನ ಯೋಜನೆಗಳಲ್ಲಿ 2 ಸಾವಿರ ಕೋಟಿ ರೂ. ಮೊತ್ತದ ಹೊಸ ಕಾಮಗಾರಿಗಳನ್ನು ಘೋಷಿಸಿದ್ದಾರೆ.
ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಅತಿಥಿ ಶಿಕ್ಷಕರು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವ ಗೌರವಧನವನ್ನು ತಲಾ 2,000 ರೂ.ಗಳಿಗೆ ಹೆಚ್ಚಿಸಿದ್ದಾರೆ. ಬಿಸಿಯೂಟ ತಯಾರಿಸುವ ಸಿಬ್ಬಂದಿಯ ಮಾಸಿಕ ಗೌರವಧನವನ್ನು ಓದು ಕರ್ನಾಟಕ, ಕಲಿಕಾ ಚಿಲುಮೆ, ಗಣಿತ ಗಣಕ, ಜ್ಞಾನಸೇತುವೆ, ನಿರಂತರ ವಿದ್ಯಾವಿಜೇತದಂತಹ ಯೋಜನೆಗಳನ್ನು ಶಿಕ್ಷಣ ಇಲಾಖೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಪ್ರಮುಖವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 5,267 ಹಾಗೂ ರಾಜ್ಯದಲ್ಲಿ ಖಾಲಿ ಇರುವ ಸಾವಿರ ಹುದ್ದೆಗಳಿಗೆ ಶಿಕ್ಷಕರನ್ನು ಭರ್ತಿ ಮಾಡುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ನಗರ ವಿವಿಗೆ ಡಾ. ಮನಮೋಹನ್ ಸಿಂಗ್ ಹೆಸರನ್ನು ಮರು ನಾಮಕರಣ ಮಾಡುವುದಾಗಿ ಪ್ರಕಟಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳ ಆರೋಗ್ಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿ ಸಿದ್ದರಾಮಯ್ಯ ಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ. ಹಲವು ಭಾಗಗಳಲ್ಲಿ ಆಸ್ಪತ್ರೆಗಳ ಮೇಲ್ದರ್ಜೆಗೇರಿಸುವುದು, ಆಧುನೀಕರಣದಂತಹ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ್ದು, ಮನೆಮನೆ ತಪಾಸಣೆಯ ಗೃಹ ಆರೋಗ್ಯವನ್ನು ರಾಜ್ಯಾದ್ಯಂತ ವಿಸ್ತರಿಸುವ, 108 ಆರೋಗ್ಯ ಕವಚ ನಿಯಂತ್ರಣಾ ಕೇಂದ್ರವನ್ನು ಆರೋಗ್ಯ ಇಲಾಖೆ ಆಧೀನಕ್ಕೊಳಪಡಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಮುಖ್ಯವಾಗಿ ಆಶಾಕಾರ್ಯಕರ್ತೆಯರಿಗೆ ದಂಡ ಆಧಾರಿತ ಪ್ರೋತ್ಸಾಹ ಧನ ನೀಡುವುದರ ಜೊತೆಗೆ ಗೌರವಧನವನ್ನು 1 ಸಾವಿರ ರೂ.ಗಳಿಗೆ ಹೆಚ್ಚಿಸಿದೆ. ಆಶಾ ಕಾರ್ಯಕರ್ತೆಯರು ಗೌರವ ಧನ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸಿದ್ದರು. ಪಂಚಖಾತ್ರಿಗಳಲ್ಲಿ ಪ್ರಮುಖವಾಗಿ ಗೃಹಲಕ್ಷ್ಮಿಗೆ 28,608 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ ಒಟ್ಟು 94,084 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ವಿಶೇಷ ಪಾಲನೆ ಯೋಜನೆಯಲ್ಲಿ ಎಚ್ ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳ ಶಿಕ್ಷಣ ಪ್ರೋತ್ಸಾಹಕ್ಕೆ ಮಾಸಿಕ ನೀಡುತ್ತಿರುವ ಧನಸಹಾಯವನ್ನು 1 ರಿಂದ 2 ಸಾವಿರ ರೂ.ಗಳವರೆಗೆ ಹೆಚ್ಚಿಸಲಾಗಿದೆ.
ಆರ್ಟಿಸಂ ಸೇರಿದಂತೆ ವಿವಿಧ ಬೌದ್ಧಿಕ ವಿಕಲತೆ ಆರೈಕೆದಾರರಿಗೆ ಮಾಸಿಕ 1 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗಿದೆ. ಎಸ್ಸಿಎಸ್‌ಪಿ ಯೋಜನೆಗೆ 29,992 ಕೋಟಿ ರೂ.. ಎಸ್‌ಟಿಪಿ ಯೋಜನೆಗೆ 12,026 ಕೋಟಿ ರೂ. ಸೇರಿ ಒಟ್ಟು 42,018 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಯಲ್ಲಿ ನೀಡಲಾಗುತ್ತಿದ್ದ ಮೀಸಲಾತಿಯ ಪ್ರಮಾಣವನ್ನು 1 ಕೋಟಿ ರೂ.ಗಳಿಂದ 2 ಕೋಟಿ ರೂ.ಗಳಿಗೆ ವಿಸ್ತರಿಸಲಾಗಿದೆ. ಸರಕು ಮತ್ತು ಸೇವೆಗಳ ವಹಿವಾಟಿನಲ್ಲೂ 1 ಕೋಟಿ ರೂ.ವರೆಗೆ ಮೀಸಲಾತಿ ನೀಡಲಾಗಿದ್ದು, ಈ ಎರಡೂ ಸೌಲಭ್ಯಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ -1, 2 ಎ ಮತ್ತು 2 ಬಿ ಸಮುದಾಯಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಭೂ ಒಡೆತನ ಯೋಜನೆಯನ್ನು ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಪ್ರಕಟಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ನಿಗಮಗಳಿಗೆ 488 ಕೋಟಿ ರೂ., ಹಿಂದುಳಿದ ವರ್ಗಗಳ ಅಧೀನದ ನಿಗಮಗಳಿಗೆ 442 ಕೋಟಿ ರೂ. ನೀಡಲಾಗಿದ್ದು, ಕ್ರಿಶ್ಚಿಯನ್ ಸಮುದಾಯಕ್ಕೆ 250 ಕೋಟಿ ರೂ.. ಹೆಚ್ ಯಾತ್ರಿಗಳಿಗೆ ಹೆಚ್ಚುವರಿ ಭವನ ನಿರ್ಮಾಣ, ಮೌಲಾನಾ ಆಜಾದ್ ಪಬ್ಲಿಕ್ ಶಾಲೆಗಳ ಉನ್ನತೀಕರಣ, ಸರಳ ವಿವಾಹಕ್ಕೆ 50 ಸಾವಿರ ರೂ. ಪ್ರೋತ್ಸಾಹ ಧನ ನೀಡುವ ಜೊತೆಗೆ ಜೈನ್, ಸಿಖ್, ಬೌದ್ಧ ಸಮುದಾಯಗಳಿಗೂ ನೆರವು ನೀಡಲಾಗಿದೆ ಎಂದರು.
ಯುವನಿಧಿ ಯೋಜನೆಯಡಿ 2.58 ಲಕ್ಷ ಯುವಕರಿಗೆ 286 ಕೋಟಿ ರೂ. ಈವರೆಗೂ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿರುವ ಮುಖ್ಯಮಂತ್ರಿಯವರು ಪ್ರಸಕ್ತ ಸಾಲಿನಲ್ಲಿ ಅನುದಾನ ಮೀಸಲಿಟ್ಟಿರುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ, ಮಹಿಳೆಯರ ಆರ್ಥಿಕ ಚಟುವಟಿಕೆಗಳಿಗೆ ರಾಜ್ಯಮಟ್ಟದಲ್ಲಿ ಅಕ್ಕ ಕೋ ಅಪರೇಟಿವ್ ಸೊಸೈಟಿ ಸ್ಥಾಪಿಸಿ, ಗೃಹಲಕ್ಷ್ಮಿ ಯೋಜನೆಯ ಯಜಮಾನಿಯರನ್ನು ಅದಕ್ಕೆ ಸದಸ್ಯರನ್ನಾಗಿ ಮಾಡುವುದಾಗಿ ತಿಳಿಸಿದ್ದಾರೆ.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಅಕ್ಕ ಕೆಥೆ ಮತ್ತು ಕ್ಯಾಂಟಿನ್‌ಗಳ ಆರಂಭ, ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ಕೃಷಿ ಪಥ, ಗ್ರಾಮೀಣ ರಸ್ತೆ ಬದಿಗಳಲ್ಲಿ ಸಸಿ ನೆಡೆಸಲು ಹಸಿರು ಪಥ ಯೋಜನೆಗಳನ್ನು ಪ್ರಕಟಿಸಲಾಗಿದೆ. ಬಿಬಿಎಂಪಿಯಲ್ಲಿ 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗದ ಕಾರಿಡಾರ್ ಯೋಜನೆಯನ್ನು ಪ್ರಸ್ತಾಪಿಸಲಾಗಿದ್ದು, 19 ಸಾವಿರ ಕೋಟಿ ರೂ. ಗ್ಯಾರಂಟಿಯನ್ನು ನೀಡಲಾಗಿದೆ. 8,916 ಕೋಟಿ ರೂ. ವೆಚ್ಚದಲ್ಲಿ ನಮ್ಮ ಮೆಟ್ರೋ ಮೂರನೇ ಹಂತದಲ್ಲಿ ಡಬ್ಬಲ್ ಡೆಕ್ಟರ್ ಪ್ರೈ ಓವರ್ ರಸ್ತೆ ನಿರ್ಮಿಸಲಾಗುತ್ತಿದೆ.