ಬೆಂಗಳೂರು,ಸೆ.30– ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆಯನ್ನು ನಿಷ್ಪಕ್ಷಪಾತ ಹಾಗೂ ನ್ಯಾಯಸಮತವಾಗಿ ಎದುರಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನಾತಕವಾಗಿ ಹೋರಾಟವನ್ನು ಕೈಬಿಟ್ಟಿದ್ದಾರೆ.ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಮುಖ್ಯ ಮಂತ್ರಿ ವಿರುದ್ಧ ವಿಚಾರಣೆ ಹಾಗೂ ಅಭಿಯೋಜನೆಗೆ ಪೂರ್ವಾ ನುಮತಿ ನೀಡಿದ್ದರು.
ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ರಾಜ್ಯಪಾಲರ ಪೂರ್ವಾನುಮತಿಯನ್ನು ಎತ್ತಿಹಿಡಿದಿತ್ತು. ಆದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 218 ರಡಿ ತನಿಖೆಗೆ ರಾಜ್ಯಪಾಲರು ನೀಡಿದ್ದ ಆದೇಶವನ್ನು ಅಮಾನ್ಯಗೊಳಿಸಿ, ಭ್ರಷ್ಟಾಚಾರ ತಡೆ ಕಾಯಿದೆ 17 ಎ ಅಡಿ ತನಿಖೆಗೆ ಅವಕಾಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚನೆ ನೀಡಿದ ಅನುಸಾರ ಈಗಾಗಲೇ ಎಫ್‌ಐಆರ್ ದಾಖಲಾಗಿದೆ.
ಹೈಕೋರ್ಟ್ ಆದೇಶದ ವೇಳೆ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಮೇಲನವಿ ಸಲ್ಲಿಸುವುದಾಗಿ ಹೇಳಲಾಗಿತ್ತು. ಆದರೆ ಕಾನೂನು ಹೋರಾಟವನ್ನು ಕೈಬಿಟ್ಟಿರುವ ಸಿದ್ದರಾಮಯ್ಯನವರು ಲೋಕಾಯುಕ್ತ ತನಿಖೆಯನ್ನು ಎದುರಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಯಾವುದೇ ಮೇಲನವಿಗಳನ್ನು ಸಲ್ಲಿಸುವುದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಹೈಕೋರ್ಟ್‌ನ ತೀರ್ಪಿನಲ್ಲಿ ತಮಗೆ ಮೇಲುಗೈ ಆಗಿದೆ ಎಂದು ಪರಿಭಾವಿಸಿರುವ ಸಿದ್ದರಾಮಯ್ಯ ಭ್ರಷ್ಟಾಚಾರ ನಿಗ್ರಹ ತಡೆ ಕಾಯಿದೆಯಡಿ ತನಿಖೆಗೆ ಆದೇಶಿಸಿರುವುದು ಸಾಮಾನ್ಯ ಬೆಳವಣಿಗೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ತನಿಖೆಗೆ ನೀಡಿದ್ದ ಅನುಮತಿಯನ್ನು ಅಮಾನ್ಯಗೊಳಿಸುವುದು ನ್ಯಾಯಾಂಗದಿಂದ ದೊರೆತ ಗೆಲುವು ಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮೇಲನವಿಗಳನ್ನು ಸಲ್ಲಿಸಿ ಕಾಲಾಹರಣ ಮಾಡುವ ಬದಲಾಗಿ ತನಿಖೆಯನ್ನು ಎದುರಿಸಿ ನಿರ್ದೋಷಿಯಾಗಿ ಹೊರಬರುವುದು ಉತ್ತಮ ಎಂಬ ನಿಲುವನ್ನು ಸಿದ್ದರಾಮಯ್ಯ ಹೊಂದಿರುವುದಾಗಿ ತಿಳಿದುಬಂದಿದೆ.
ಮುಡಾ ಪ್ರಕರಣದಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ, ಜಮೀನಿನ ಮೂಲ ಮಾಲೀಕರಿಲ್ಲದೆ ನ್ಯಾಯೋಚಿತವಾಗಿ ಮಲ್ಲಿಕಾರ್ಜುನ ಸ್ವಾಮಿ ಭೂಮಿ ಖರೀದಿ ಮಾಡಿದ್ದಾರೆ. ಕಾನೂನು ಮೂಲಕವೇ ತಮ ಪತ್ನಿಗೆ ದಾನಪತ್ರ ನೀಡಲಾಗಿದೆ. ಜಮೀನನ್ನು ಮುಡಾ ನಿಯಮಬಾಹಿರವಾಗಿ ನಿವೇಶನ ಮಾಡಿ ಹಂಚಿಕೆ ಮಾಡಿದೆ.
ಭೂಮಿ ಕಳೆದುಕೊಂಡಿದ್ದಕ್ಕೆ ಪರಿಹಾರವಾಗಿ ನಿವೇಶನ ಪಡೆಯಲಾಗಿದೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ. ಜಮೀನಿನ ಪರಭಾರೆ ನಿಯಮಬಾಹಿರವಾಗಿದ್ದರೆ ಅದರ ಬಗ್ಗೆ ತನಿಖೆ ನಡೆಯಲಿ, ತಪ್ಪುಗಳಾಗಿದ್ದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಗಳಾಗಲಿ ಎಂದು ಕಾನೂನು ಸಲಹೆಗಾರರ ತಂಡಕ್ಕೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಲೋಕಾಯುಕ್ತರು ದಾಖಲಿಸಿರುವ ಎಫ್‌ಐಆರ್‌ಗೆ ತಡೆ ಪಡೆಯಲು ಸಿದ್ದರಾಮಯ್ಯ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಂತೆ ನಿಗದಿತ ಕಾಲಾವಧಿಯಲ್ಲಿ ತನಿಖೆ ನಡೆದು ವರದಿ ನೀಡುವ ಸಾಧ್ಯತೆಗಳಿವೆ.
ಸಿದ್ದರಾಮಯ್ಯ ಕಾನೂನು ಸಂಘರ್ಷವನ್ನು ಮುಂದುವರೆಸಲಿದ್ದಾರೆ. ತನಿಖೆಗೆ ತಡೆ ತರಬಹುದು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲನವಿ ಸಲ್ಲಿಸಬಹುದು ಎಂಬೆಲ್ಲಾ ವ್ಯಾಖ್ಯಾನ ಮಾಡಿದವರು ಬೆಸ್ತು ಬೀಳುವಂತಾಗಿದೆ.ಸಿದ್ದರಾಮಯ್ಯ ತನಿಖೆಗೆ ಮುಖಾಮುಖಿಯಾಗುವ ಮೂಲಕ ರಾಜಕೀಯ ಎದುರಾಳಿಗಳಿಗೆ ಮತ್ತೊಂದು ಪಟ್ಟು ಹಾಕಿದ್ದಾರೆ.