Wednesday, April 9, 2025
Homeರಾಜ್ಯಶನಿವಾರ ಪಿಎಂ ಮೋದಿ ಭೇಟಿಯಾಗಲಿದ್ದಾರೆ ಸಿಎಂ ಸಿದ್ದರಾಮಯ್ಯ

ಶನಿವಾರ ಪಿಎಂ ಮೋದಿ ಭೇಟಿಯಾಗಲಿದ್ದಾರೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜೂ.27- ಸಂಸದರ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಹಲವು ಸಚಿವರುಗಳ ಜೊತೆಗೆ ನಾಡಿದ್ದು ಸಂಜೆ ವಿಶೇಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಅಂಗವಾಗಿ ವಿಧಾನಸೌಧದದ ಮುಂಭಾಗ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನವಾಗಿ ಆಯ್ಕೆಯಾಗಿರುವ ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ಸಭೆಯನ್ನು ದೆಹಲಿಯಲ್ಲಿ ಕರೆಯಲಾಗಿದೆ.

ತಾವು ಅದರಲ್ಲಿ ಭಾಗವಹಿಸುತ್ತಿದ್ದು, ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಯೋಜನೆಗಳ ಪಟ್ಟಿ ನೀಡುತ್ತೇನೆ. ಅವುಗಳ ಮಂಜೂರಾತಿಗೆ ಹಾಗೂ ಹಣ ಬಿಡುಗಡೆಗೆ ಪ್ರಯತ್ನಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಜೊತೆಗೆ ಹಲವಾರು ಕೇಂದ್ರ ಸಚಿವರು, ಕೇಂದ್ರದ ರಾಜ್ಯ ಸಚಿವರುಗಳನ್ನು ಭೇಟಿ ಮಾಡುತ್ತೇನೆ. ವಿಶೇಷವಾಗಿ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್‌ ಗಟ್ಕರಿ, ಆರ್ಥಿಕ ಸಚಿವರಾದ ನಿರ್ಮಲಾ ಸೀತಾರಾಮನ್‌, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ರನ್ನು ಭೇಟಿಯಾಗಲಿದ್ದೇನೆ.

ಕೇಂದ್ರ ಗೃಹಸಚಿವ ಅಮಿತ್‌ ಶಾ ಇನ್ನೂ ಸಮಯ ನೀಡಬೇಕಿದೆ. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ್‌ರನ್ನು ಭೇಟಿಯಾಗಲಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೂ.29 ರಂದು ರಾತ್ರಿ 8 ಗಂಟೆಗೆ ಭೇಟಿಯಾಗಲು ಸಮಯ ನೀಡಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಮಂಡಿಸುತ್ತಿರುವ ಬಜೆಟ್‌ಗೆ ರಾಜ್ಯದಿಂದ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಲಾಗಿದೆ. ತಮ ಭಾಷಣದ ಪ್ರತಿಯನ್ನು ಕಂದಾಯ ಸಚಿವ ಕೃಷ್ಣಭೈರೇಗೌಡ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನಡೆಸಿದ ಸಭೆಯಲ್ಲಿ ಮಂಡಿಸಿದ್ದಾರೆ ಎಂದು ಹೇಳಿದರು.

ರಾಹುಲ್‌ಗಾಂಧಿಯವರು ಪಾದಯಾತ್ರೆ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ದೇಶಾದ್ಯಂತ ಸಂಚಾರ ಮಾಡಿ ಸಮಸ್ಯೆಗಳ ಬಗ್ಗೆ ಅರಿತುಕೊಂಡಿದ್ದಾರೆ. ಸಂಸತ್‌ನಲ್ಲಿ ವಿರೋಧಪಕ್ಷದ ನಾಯಕರಾಗಿ ಜನರ ಧ್ವನಿಯಾಗಿ ಸಮರ್ಥವಾಗಿ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಪ್ರದಾಯದಂತೆ ನಿನ್ನೆ ಲೋಕಸಭೆಯ ಸ್ಪೀಕರ್‌ ಆಯ್ಕೆ ಚುನಾವಣೆ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಒಟ್ಟಾಗಿ ಸ್ಪೀಕರ್‌ ಓಂಬಿರ್ಲಾ ಅವರನ್ನು ಕರೆದುಕೊಂಡು ಹೋಗಿ ಪೀಠಾಸೀನರನ್ನಾಗಿಸಿದ್ದಾರೆ ಎಂದು ಹೇಳಿದರು.

ಭಾರತ ಬಹುತ್ವದ ರಾಷ್ಟ್ರ. ವಿವಿಧ ಜಾತಿ, ಧರ್ಮ, ಭಾಷೆಗಳ ಜನ ವಾಸಿಸುತ್ತಿದ್ದಾರೆ. ಹಾಗಾಗಿ ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ. ನೋಬೆಲ್‌ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್‌ ಹೇಳಿದಂತೆ ಲೋಕಸಭೆಯ ಚುನಾವಣೆ ಫಲಿತಾಂಶ ಭಾರತ ಹಿಂದೂರಾಷ್ಟ್ರ ಅಲ್ಲ ಎಂಬ ಅಭಿಪ್ರಾಯ ಸರಿಯಾಗಿದೆ ಎಂದರು.

RELATED ARTICLES

Latest News