Tuesday, September 17, 2024
Homeರಾಜ್ಯದೆಹಲಿಯಲ್ಲಿ ಮುಖಾಮುಖಿಯಾಗಲಿದ್ದಾರೆ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಸಿಎಂ ಸಿದ್ದರಾಮಯ್ಯ

ದೆಹಲಿಯಲ್ಲಿ ಮುಖಾಮುಖಿಯಾಗಲಿದ್ದಾರೆ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜೂ.27- ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯ ಪ್ರವಾಸದ ವೇಳೆ ಕೇಂದ್ರ ಬೃಹತ್‌ ಮತ್ತು ಉಕ್ಕು ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಲಿದ್ದಾರೆ.

ವಿಧಾನಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಕಾಂಗ್ರೆಸ್‌‍ ಹಾಗೂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದರು. ಅದು ರಾಜಕೀಯ ಎಲ್ಲೆಯನ್ನೂ ಮೀರಿ ಟೀಕೆಗಳು ನಡೆದಿದ್ದವು. ವೈಯಕ್ತಿಕ ತೇಜೋವಧೆಗಳಾಗಿದ್ದವು. ಬೆಂಗಳೂರಿನಲ್ಲಿ ನಡೆದ ಒಂದೆರಡು ಸಭೆಗಳಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮುಖಾಮುಖಿಯಾಗಿದ್ದರು.

ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆ ಮಾಡಿದಗಿಂತಲೂ ಜಗಳ ಮಾಡಿದ್ದೇ ಹೆಚ್ಚು. ಲೋಕಸಭಾ ಚುನಾವಣೆ ವೇಳೆಗೆ ಕುಮಾರಸ್ವಾಮಿ ತಮ ಪಕ್ಷ ಜೆಡಿಎಸ್‌‍ ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕವಂತೂ ಅಧಿಕೃತ ವಿರೋಧಪಕ್ಷದ ನಾಯಕರಂತೆಯೇ ಟೀಕೆ ಮಾಡಲಾರಂಭಿಸಿದ್ದರು. ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯನವರನ್ನು ಅವಕಾಶ ಸಿಕ್ಕಾಗಲೆಲ್ಲಾ ಟೀಕಿಸಿ ಸಮರ್ಥ ವಿಪಕ್ಷವಾಗಿ ಕೆಲಸ ಮಾಡುತ್ತಿದ್ದರು.

ಹಾಲಿನ ದರ ಏರಿಕೆ ವಿಚಾರವಾಗಿ ನಿನ್ನೆ ಕೂಡ ಕುಮಾರಸ್ವಾಮಿ ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕುಮಾರಸ್ವಾಮಿಯವರಿಗೆ ವಿಷಯ ಸರಿಯಾಗಿ ತಿಳಿದಿಲ್ಲ. ಮೊದಲು ಸರಿಯಾದ ಮಾಹಿತಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿಯೂ ಆಗಿತ್ತು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ರಾಜ್ಯದಲ್ಲಿ ಪ್ರಭಾವಿ ನಾಯಕರಾಗಿದ್ದು, ಬೇರೆಲ್ಲಾ ಮುಖಂಡರು ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೇಳಬೇಕಿತ್ತು.ಕಾಲದ ಮಹಿಮೆ ಎಂಬಂತೆ ಈಗ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಅವರ ಭೇಟಿಗೆ ಸಿದ್ದರಾಮಯ್ಯ ಅವರು ಸಮಯ ಕೇಳಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅಲ್ಲಿ ಸಂಸದರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅನಂತರ ಕರ್ನಾಟಕವನ್ನು ಕೇಂದ್ರದಲ್ಲಿ ಪ್ರತಿನಿಧಿಸುವ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಕಾರ್ಮಿಕ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಲಿದ್ದಾರೆ.

ಕರ್ನಾಟಕದಲ್ಲಿ ಪ್ರತಿನಿಧಿಸುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಇದೇ ವೇಳೆ ಮುಖ್ಯಮಂತ್ರಿಯವರು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಕರ್ನಾಟಕದಿಂದ ಹಲವಾರು ಯೋಜನೆಗಳ ಪ್ರಸ್ತಾವನೆ ಕೇಂದ್ರ ಸರ್ಕಾರಗಳ ಮುಂದಿವೆ. ನಿರ್ಮಲಾ ಸೀತಾರಾಮನ್‌ ಅವರು ಹೊಸದಾಗಿ ಬಜೆಟ್‌ ಮಂಡಿಸಲು ತಯಾರಿ ನಡೆಸಿದ್ದು, ಅದರಲ್ಲಿ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ದೊರೆಯುವಂತೆ ಮಾಡಲು ಮುಖ್ಯಮಂತ್ರಿ ಮುಂದಾಗಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದಿನ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,100 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಘೊಷಿಸಲಾಗಿತ್ತು. ಆ ಹಣ ಇನ್ನೂ ಬಾಕಿ ಇದೆ. ಜೊತೆಗೆ 14ನೇ ಹಣಕಾಸು ಯೋಜನೆಯಲ್ಲಿ ಬೆಂಗಳೂರಿನ ಕೆರೆಗಳ ಅಭಿವೃದ್ಧಿ ಮತ್ತು ಹೊರವರ್ತುಲ ರಸ್ತೆಗೆ ತಲಾ 3 ಸಾವಿರ ಕೋಟಿ ರೂ.ಗಳನ್ನು ಪ್ರಸ್ತಾಪಿಸಲಾಗಿತ್ತು. ಆದರೆ ಅದು ನೆನೆಗುದಿಗೆ ಬಿದ್ದಿದೆ. ಮತ್ತೊಂದೆಡೆ ನೀರಾವರಿ ಯೋಜನೆಗಳಾದ ಮೇಕೆದಾಟು, ಮಹಾದಾಯಿಗೆ ಕೇಂದ್ರದ ಅನುಮತಿ ಹಾಗೂ ಆರ್ಥಿಕ ನೆರವಿನ ಅಗತ್ಯವಿದ್ದು, ಇದರ ಬಗ್ಗೆಯೂ ಪ್ರಸ್ತಾಪವಾಗಲಿದೆ.

ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಬೇಕೆಂಬ ಪ್ರಸ್ತಾವನೆ ಹಲವು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದೆ. ಹಾಗೆಯೇ ಮೆಟ್ರೋ ರೈಲನ್ನು ತುಮಕೂರಿನವರೆಗೂ ಹಾಗೂ ಬೆಂಗಳೂರು ದಕ್ಷಿಣ ಹಾಗೂ ಪೂರ್ವಾಭಿಮುಖವಾಗಿ ಮತ್ತಷ್ಟು ದೂರ ವಿಸ್ತರಿಸುವ ಪ್ರಸ್ತಾಪಗಳಿದ್ದು, ಅದಕ್ಕೂ ಕೇಂದ್ರದ ಮುಂದೆ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆಗಳಿವೆ. ಜೊತೆಗೆ ತೆರಿಗೆ ಹಂಚಿಕೆಯಲ್ಲಿ ನ್ಯಾಯೋಚಿತ ಪಾಲು ಪಡೆದುಕೊಳ್ಳಲು ಸಹಕಾರ ನೀಡುವಂತೆ ಸಂಸದರಿಗೆ ಮನವಿ ಮಾಡಲಿರುವ ಸಿದ್ದರಾಮಯ್ಯ ಅವರು ಇದೇ ವೇಳೆ ಕೇಂದ್ರ ಸಚಿವರ ಮುಂದೆ ಪ್ರಸ್ತಾವನೆ ಮಂಡಿಸಲು ತಯಾರಿ ನಡೆಸಿದ್ದಾರೆ.

RELATED ARTICLES

Latest News