ಬೆಂಗಳೂರು, ನ.9- ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಿಗೆ ಆಯೋಜಿಸಲಾ ಗಿರುವ ಔತಣಕೂಟ ಭಾರಿ ಕುತೂಹಲ ಕೆರಳಿಸಿದ್ದು, ನವೆಂಬರ್ ಕ್ರಾಂತಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.
ಇದೇ 14 ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದು, ಆ ಸಂದರ್ಭದಲ್ಲಿ ಕೊಪ್ಪಳ ಕ್ಷೇತ್ರದ ಸಂಸದ ರಾಜಶೇಖರ್ ಯತ್ನಾಳ್ ಕಾಂಗ್ರೆಸ್ನ ಸಂಸದರಿಗೆ ಹಾಗೂ ಪ್ರಮುಖರಿಗೆ ಔತಣಕೂಟ ಆಯೋಜಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಅದರಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಈ ಸಂದರ್ಭದಲ್ಲಿ ಧ್ವನಿ ಎತ್ತಲು ಮತ್ತು ಕೇಂದ್ರಸರ್ಕಾರ ಮಟ್ಟದಲ್ಲಿ ಬಾಕಿ ಯೋಜನೆಗಳ ಅನುಮೋದನೆಗೆ ಒತ್ತಡ ಹೆಚ್ಚಿಸಲು ಸಂಸದರಿಗೆ ಮನವರಿಕೆ ಮಾಡಿಕೊಡಲು ಈ ಸಭೆ ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಹಂತದಲ್ಲೂ ರಾಜ್ಯ ರಾಜಕಾರಣವೇ ಹೆಚ್ಚು ಸದ್ದು ಮಾಡುತ್ತಿದೆ. ನವೆಂಬರ್ನಲ್ಲಿ ಸಚಿವ ಸಂಪುಟ ಪುನರ್ರಚನೆಯಾಗಲಿದೆ, ನಾಯಕತ್ವ ಬದಲಾವಣೆಯಾಗಲಿದೆ ಎಂಬ ಕಾರಣಕ್ಕೆ ಅಲ್ಲಲ್ಲಿ ಪ್ರತ್ಯೇಕ ಸಭೆಗಳು ಗಮನ ಸೆಳೆದಿದ್ದವು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವ ನವೆಂಬರ್ ಕ್ರಾಂತಿಯೂ ಇಲ್ಲ. ಸಚಿವ ಸಂಪುಟ ಕೂಡ ಪುನರ್ರಚನೆಯಾಗುವುದಿಲ್ಲ. ನಾಯಕತ್ವ ಬದಲಾವಣೆ ಚರ್ಚೆಗಳಿಲ್ಲ ಎಂದು ಕಡ್ಡಿ ಮುರಿದಂತೆ ಮಾತನಾಡಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
ಅದರ ನಡುವೆಯೂ ಚರ್ಚೆಗಳು, ಗೊಂದಲಗಳು ಮುಂದುವರಿದೇ ಇವೆ. ರಾಜ್ಯದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಜಿ.ಪರಮೇಶ್ವರ್ ಅವರು ಹಲವು ಪ್ರತ್ಯೇಕ ಸಭೆಗಳ ಮೂಲಕ ಗಮನ ಸೆಳೆದಿದ್ದರು. ಹೈಕಮಾಂಡ್ ಕಟ್ಟಪ್ಪಣೆಯ ಮೂಲಕ ಪ್ರತ್ಯೇಕ ಸಭೆಗೆ ಕಡಿವಾಣ ಬಿದ್ದಿದೆ. ಆದರೆ ರಾಜ್ಯ ರಾಜಕೀಯ ಚರ್ಚೆಗಳು ಈಗ ದೆಹಲಿಗೆ ವರ್ಗಾವಣೆಗೊಂಡಂತಾಗಿದೆ. ನವೆಂಬರ್ 14ರಂದು ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ. ಅದೇ ವೇಳೆ ದೆಹಲಿಯಲ್ಲಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಸಚಿವ ಸಂಪುಟ ಪುನರ್ ರಚನೆ ಹಾಗೂ ಇತರ ವಿಚಾರಗಳ ಕುರಿತು ವರಿಷ್ಠ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ ಎಂಬ ನಿರೀಕ್ಷೆಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಔತಣಕೂಟದಲ್ಲಿ ಭಾಗವಹಿಸುತ್ತಿರುವುದರಿಂದಾಗಿ ಹೆಚ್ಚಿನ ದೆಹಲಿ ಭೇಟಿ ಕುತೂಹಲ ಕೆರಳಿಸಿದೆ.
ಈ ನಡುವೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಔತಣಕೂಟದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದೆಹಲಿಯಲ್ಲಿ ಸಂಸದ ರಾಜಶೇಖರ ಯತ್ನಾಳ್ ಕರೆದಿರುವ ಭೋಜನ ಕೂಟದಲ್ಲಿ ತಾವು ಭಾಗವಹಿಸುವುದಿಲ್ಲ, ನನಗೆ ಆಹ್ವಾನವೂ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ನವೆಂಬರ್ ಕ್ರಾಂತಿಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡಿದ್ದರೆ, ಅದಕ್ಕೆಲ್ಲಾ ಪ್ರತಿಕ್ರಿಯಿಸುವುದು ಹೇಗೆ? ಈ ಮೊದಲು ಕಾಂಗ್ರೆಸ್ನಲ್ಲೇ ಇದ್ದ ರಾಜ್ಯಸಭಾ ಸದಸ್ಯ ಕಪಿಲ್ ಸಿಬಾಲ್ ಅವರ ಪುಸ್ತಕ ಬಿಡುಗಡೆ ದೆಹಲಿಯಲ್ಲಿ ನಡೆಯಲಿದೆ. ಅದರಲ್ಲಿ ಭಾಗವಹಿಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ದೆಹಲಿಗೆ ತೆರಳುತ್ತಿದ್ದಾರೆ. ಆ ಸಂದರ್ಭದಲ್ಲಿ ಭೋಜನ ಕೂಟ ನಡೆಯಬಹುದು. ಆದರೆ ನನಗೆ ಮಾಹಿತಿ ಇಲ್ಲ ಎಂದರು. ದಲಿತ ಮುಖ್ಯಮಂತ್ರಿಯ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯಬಹುದು ಆದರೆ ಅದಕ್ಕೆ ತಾವು ಯಾವುದೇ ರೀತಿಯ ಉತ್ತರ ನೀಡುವುದಿಲ್ಲ ಎಂದಿದ್ದಾರೆ.
