ಬೆಂಗಳೂರು,ಡಿ.9- ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಲೀಲಾವತಿ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಅವರು, 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಲೀಲಾವತಿಯವರು ತಮ್ಮ ನೈಜ ಅಭಿನಯದ ಮೂಲಕ ಹೆಸರು ಮಾಡಿದವರು. ಕನ್ನಡ, ತೆಲುಗು, ಮಲೆಯಾಳಂ ಸೇರಿದಂತೆ ಬಹು ಭಾಷಾ ಚಿತ್ರಗಳಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದಲ್ಲಿ ಹೆಸರು ಮಾಡಿದ್ದರು ಎಂದರು.
ಮೆರವಣಿಗೆ ವೇಳೆ ಗೋಡೆ ಕುಸಿದು ಮಗು ಸೇರಿ 7 ಮಹಿಳೆಯರ ಸಾವು
ಲೀಲಾವತಿಯವರ ಈ ಸಾಧನೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರ ಸಿಗದೆ ಇರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು. ನನ್ನ ವಿದ್ಯಾರ್ಥಿ ಜೀವನದ 60-70ರ ದಶಕದಲ್ಲಿ ಡಾ.ರಾಜ್‍ಕುಮಾರ್ ಮತ್ತು ಲೀಲಾವತಿ ಜೋಡಿಯ ಚಿತ್ರಗಳನ್ನು ನೋಡುತ್ತಿದ್ದೆ. ನೈಜ ಮತ್ತು ಮನೋಜ್ಞ ನಟನೆಯಿಂದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು ಎಂದು ಸ್ಮರಿಸಿದರು.
ರಂಗಭೂಮಿಯಿಂದ ಸಿನಿಮಾದವರೆಗೆ ಬೆಳೆದಿದ್ದ ಅವರು, ಜೀವರಾಶಿಗಳನ್ನು ತುಂಬ ಇಷ್ಟಪಡುತ್ತಿದ್ದರು. ನೆಲಮಂಗಲದ ಬಳಿ ಜಮೀನು ಖರೀದಿಸಿ ರೈತಾಪಿ ಮಹಿಳೆಯಾಗಿ ಜಮೀನಿನಲ್ಲಿ ಹಣ್ಣು, ತರಕಾರಿಗಳನ್ನು ಬೆಳೆದು ಬಂದ ಹಣವನ್ನು ಸಾಮಾಜಿಕ ಸೇವೆಗಳಲ್ಲಿ ತೊಡಗಿಸುತ್ತಿದ್ದರು. ಇದು ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು. ಅವರ ಸಾವು ತುಂಬ ದುಃಖ ತಂದಿದೆ. ಪುತ್ರ ವಿನೋದ್‍ರಾಜ್ ಮತ್ತು ಅವರ ಅಭಿಮಾನಿಗಳಿಗೆ ಭಗವಂತ ದುಃಖಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುವೆ ಎಂದು ಹೇಳಿದರು.