Friday, November 22, 2024
Homeರಾಜ್ಯಪಕ್ಷಕ್ಕಾಗಿ ಬಿಡುವಿಲ್ಲದೆ ದುಡಿದ ಸಿಎಂ ಸಿದ್ದರಾಮಯ್ಯ

ಪಕ್ಷಕ್ಕಾಗಿ ಬಿಡುವಿಲ್ಲದೆ ದುಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ 10- ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿಡುವಿಲ್ಲದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಜನವರಿಯಿಂದ 14 ಗ್ಯಾರಂಟಿ ಸಮಾವೇಶಗಳು, 76 ಪ್ರಜಾಧ್ವನಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾಜ್ಯಾದ್ಯಂತ ಸುಮಾರು 22 ರಿಂದ 26 ಸಾವಿರ ಕಿಲೋ ಮೀಟರ್‌ ಪ್ರವಾಸ ಮಾಡಿದ್ದಾರೆ.

ಮುಖ್ಯಮಂತ್ರಿಯವರ ರೋಡ್‌ ಶೋನಲ್ಲಿ ಸರಾಸರಿ 15 ಸಾವಿರ ಮಂದಿ ಭಾಗವಹಿಸಿದ್ದರು. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಆರೋಗ್ಯ ತೀವ್ರ ಸ್ವರೂಪದಲ್ಲಿ ಏರುಪೇರಾದಾಗಲೂ ಲೆಕ್ಕಿಸದೆ ದಿನಕ್ಕೆ ಸರಾಸರಿ 14-18 ಗಂಟೆ ಪ್ರಚಾರದಲ್ಲಿ ಶ್ರಮಿಸಿದ್ದಾರೆ.

ಚುನಾವಣೆ ಘೋಷಣೆಗೂ ಮುನ್ನಾ 14 ಗ್ಯಾರಂಟಿ ಸಮಾವೇಶಗಳಲ್ಲಿ ಭಾಗವಹಿಸಿದ್ದರು. ಎಲ್ಲಾ ಸಮಾವೇಶಗಳಲ್ಲೂ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳ ತಾತ್ವಿಕತೆ, ಅಗತ್ಯ, ಅನಿವಾರ್ಯತೆ ಮತ್ತು ಪರಿಣಾಮಗಳನ್ನು ತಮದೇ ಶೈಲಿಯಲ್ಲಿ ಜನರಿಗೆ ಮನದಟ್ಟು ಮಾಡಿಸಿದ್ದರು. ಪ್ರಮುಖವಾಗಿ ನೆರೆದಿದ್ದ ಜನರ ಜತೆ ಸಂವಾದ ನಡೆಸುತ್ತಲೇ ಅವರನ್ನು ಒಳಗೊಳ್ಳುತ್ತಾ ಜನಪದ ಕಲಾವಿದರ ಶೈಲಿಯಲ್ಲಿ ಸ್ಪಂದಿಸಿದ್ದು ಪರಿಣಾಮಕಾರಿಯಾಗಿತ್ತು.

ಚುನಾವಣೆ ಘೋಷಣೆಯಾದ ಬಳಿಕ ಮೊದಲ ಮತ್ತು ಎರಡನೇ ಹಂತದ 28 ಲೋಕಸಭಾ ಕ್ಷೇತ್ರಗಳ 76 ಸ್ಥಳಗಳಲ್ಲಿ ಪ್ರಜಾಧ್ವನಿ ಸಮಾವೇಶಗಳಲ್ಲಿ ಹೈವೋಲ್ಟೇಜ್‌ ಭಾಷಣಗಳ ಮೂಲಕ ರಾಜ್ಯದ ಜನರಿಗೆ 2024ರ ಲೋಕಸಭಾ ಚುನಾವಣೆಯ ಮಹತ್ವವನ್ನು ಮನಮುಟ್ಟುವಂತೆ ಅರ್ಥ ಮಾಡಿಸಿದ್ದರು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಬಿಜೆಪಿ ಕೇವಲ ಭಾರತೀಯರ ಭಾವನೆಗಳನ್ನು ಕೆರಳಿಸಿ ಜನರನ್ನು ಬಕ್ರಾ ಮಾಡುತ್ತಿದೆ. ಕಾಂಗ್ರೆಸ್‌‍ ನಿಮ್ಮ ಭಾವನೆಗಳನ್ನು ಗೌರವಿಸುತ್ತಲೇ ನಿಮ್ಮ ಬದುಕಿಗೆ ಭರವಸೆಗಳನ್ನು ನೀಡುತ್ತಿದೆ ಎನ್ನುತ್ತಾ ಜನರ ಮನಸೂರೆಗೊಂಡರು. ಎಲ್ಲಾ ಕಡೆ ಇಲ್ಲಿ ನಾನೇ ಅಭ್ಯರ್ಥಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್‌‍ ಗೆದ್ದರೆ ನಾನು ಗೆದ್ದಂತೆ ಎಂದು ಹೇಳುವ ಮೂಲಕ ಜನರ ಉತ್ಸುಕತೆಯನ್ನು ಹೆಚ್ಚಿಸಿದರು.

ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿಯವರ ಆಡಳಿತದಿಂದಾದ ತೊಂದರೆಗಳನ್ನು ವಿವರಿಸಿದರು. ಕಳೆದ ಹತ್ತು ವರ್ಷಗಳಲ್ಲಿ ಮೋದಿ ನಿಮ ಕೈಗೆ ಏನು ಕೊಟ್ಟರು ಎಂದರು ಜನರೆಡೆಗೆ ಬೆರಳು ಮಾಡಿ ಸಿದ್ದರಾಮಯ್ಯ ಪ್ರಶ್ನಿಸಿದರೆ, ಜನತೆ ಖಾಲಿ ಚೊಂಬು ಎಂದು ಕೂಗುತ್ತಿದ್ದರು. ತಮ ಅಧಿಕಾರವಧಿಯಲ್ಲಿ ಕೊಟ್ಟ ಭಾಗ್ಯಗಳನ್ನು ಒಂದೊಂದಾಗಿ ಹೆಸರಿಸುತ್ತಾ…ಅನ್ನಭಾಗ್ಯ ಕೊಟ್ಟಿದ್ದು ಯಾರು ? ಎಂದು ಕೇಳುತ್ತಿದ್ದರು.

ಜನತೆ ಸಿದ್ದರಾಮಯ್ಯ ಎಂದು ಕೂಗುತ್ತಿದ್ದರು. ಇದೇ ರೀತಿ ಒಟ್ಟು 18-20 ಭಾಗ್ಯಗಳನ್ನು ಹೆಸರಿಸಿದರೆ ಅಷ್ಟೂ ಬಾರಿ ಜನ ಸಿದ್ದರಾಮಯ್ಯ ಎಂದು ಮುಗಿಲು ಮುಟ್ಟುವಂತೆ ಕೂಗುತ್ತಿದ್ದದ್ದರಿಂದ ಇಡೀ ಸಭೆಯಲ್ಲಿ ವಿದ್ಯುತ್‌ ಸಂಚಾರವಾದಂತೆ ಭಾಸವಾಗುತ್ತಿತ್ತು ಎಂದು ಪ್ರತ್ಯೇಕ್ಷ ದರ್ಶಿಗಳು ವಿವರಿಸಿದ್ದಾರೆ.

ಹೈದರಾಬಾದ್‌ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ನೆತ್ತಿ ಸುಡುವ ಬಿಸಿಲಿನಲ್ಲೂ ಮಧ್ಯಾಹ್ನದ ವೇಳೆಯಲ್ಲೂ ಕಪ್ಪು ಮುಖ ಬೆಳ್ಳಿ ಗಡ್ಡದ ಜೊತೆಗೆ ತಲೆಗೆ ಟವೆಲ್‌ ಸುತ್ತಿದ ಗಂಡಸರು, ಸೆರಗು ತಲೆಗೆ ಸುತ್ತಿಕೊಂಡ ಮಹಿಳೆಯರು ಗಂಟೆಗಟ್ಟಲೆ ಕಾದು ಸಿದ್ದರಾಮಯ್ಯ ಅವರ ಭಾಷಣ ಕೇಳುತ್ತಿದ್ದರು. ಈ ಬಾರಿ ಮತದಾನ ಪ್ರಮಾಣ ನಿರೀಕ್ಷೆಗಿಂತ ಹೆಚ್ಚಾಗುವ ಭರವಸೆ ವ್ಯಕ್ತವಾಗಿತ್ತು. ಮುಖ್ಯಮಂತ್ರಿಯವರ ಬಾಷಣಕ್ಕೆ ಜನರಿಂದ ಕೋರಸ್‌‍ ಹೆಚ್ಚಾಗಿ ಕೇಳಿ ಬರುತ್ತಿತ್ತು.

14 ಗ್ಯಾರಂಟಿ ಸಮಾವೇಶಗಳು ಮತ್ತು 76 ಪ್ರಜಾಧ್ವನಿ ಜನ ಸಮಾವೇಶಗಳು ಸೇರಿ ಮುಖ್ಯಮಂತ್ರಿಯವರು ಭಾಗವಹಿಸಿದ್ದ ಸಮಾವೇಶಗಳಲ್ಲಿ ಸರಿ ಸುಮಾರು 7 ಸಾವಿರದಿಂದ 60 ಸಾವಿರದವರೆಗೂ ಜನ ಸೇರಿದ್ದರು. ರೋಡ್‌ ಶೋಗಳಲ್ಲಿ ಸರಾಸರಿ 15 ಸಾವಿರ ಎಂದು ಲೆಕ್ಕ ಹಿಡಿದರೂ ಒಟ್ಟಾರೆ 14 ಲಕ್ಷದಷ್ಟು ಜನರನ್ನು ಮುಖ್ಯಮಂತ್ರಿಗಳು ನೇರಾ ನೇರಾ ತಮ್ಮ ಮಾತುಗಳಲ್ಲಿ ಬೆಸೆದಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಉದ್ಯಮಿಗಳಾದ ಅಂಬಾನಿ, ಅದಾನಿ ಅವರ ಸಂಬಂಧಿಸಿದಂತೆ ಪ್ರಧಾನಿಯವರ ಹೇಳಿಕೆಗೆ ರಾಹುಲ್‌ಗಾಂಧಿ ನೀಡಿರುವ ತೀರುಗೇಟನ್ನು ಸಿದ್ದರಾಮಯ್ಯ ಹೊಸ ಬೆಳವಣಿಗೆಯಲ್ಲಿ ಅನುಮೋದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಯಥಾ ಪ್ರಕಾರ ತಮ ಸುಳ್ಳು ಭಾಷಣದಲ್ಲಿ, ರಾಹುಲ್‌ ಗಾಂಧಿಯವರಿಗೆ ಅಂಬಾನಿ-ಅದಾನಿ ತಮ್ಮ ಬ್ಲಾಕ್‌ ಮನಿಯನ್ನು ಟೆಂಪೋಗಳಲ್ಲಿ ತುಂಬಿ ಕಳುಹಿಸಿದ್ದಾರಾ? ಅದಕ್ಕೇ ಇವರು ಅಂಬಾನಿ-ಅದಾನಿಯನ್ನು ಟೀಕಿಸುವುದನ್ನೇ ನಿಲ್ಲಿಸಿದ್ದಾರಾ? ಎಂದು ಮೋದಿ ಆರೋಪಿಸಿದ್ದಾರೆ.

ಇದು ಅಪ್ಪಟ ಸುಳ್ಳು. ಏಕೆಂದರೆ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾಗಾಂಧಿ ರಾಜ್ಯದಲ್ಲಿ ನಡೆಸಿದ ಪ್ರತೀ ಚುನಾವಣಾ ಪ್ರಚಾರದಲ್ಲೂ, ಭಾರತೀಯರ ಹಣ ಮತ್ತು ಭಾರತ ದೇಶದ ಸಂಪತ್ತು ಹೇಗೆ ಅಂಬಾನಿ-ಅಂದಾನಿಯ ಖಾಸಗಿ ಸ್ವತ್ತಾಗಿ ಪರಿವರ್ತನೆ ಆಗಿದೆ ಎನ್ನುವುದನ್ನು ತಮದೇ ಮಾತುಗಳಲ್ಲಿ, ತಮ್ಮದೇ ಶೈಲಿಯಲ್ಲಿ ಜನತೆಗೆ ವಿವರಿಸಿದ್ದಾರೆ. ಅದನ್ನು ಸಹಿಸಿಕೊಳ್ಳಲಾಗದೆ ಮೋದಿ ಸುಳ್ಳು ಪ್ರಚಾರ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Latest News