ನವದೆಹಲಿ, ನ.8-ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೆರಳು ತೋರುವುದು ಸರಿಯಲ್ಲ. ಇದು ರೈತರನ್ನು ದಿಕ್ಕು ತಪ್ಪಿಸುವ ಅನ್ಯಾಯದ ಕ್ರಮವೆಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಕ್ಷೇಪಿಸಿದ್ದಾರೆ. ರಾಜ್ಯದ ವಿವಿಧೆಡೆ ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮುಖ್ಯಮಂತ್ರಿಗಳು ಕೇಂದ್ರದತ್ತ ಬೆರಳು ತೋರಿ, ಕಬ್ಬು ಬೆಳೆಗಾರರ ಹಿತರಕ್ಷಣೆಯಿಂದ ನುಣುಚಿಕೊಳ್ಳುವುದು ತರವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿದ್ದು, ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಹಿತರಕ್ಷಣೆಗೆ ಹಿಂದೆಂದಿಗಿಂತಲೂ ಒಳ್ಳೆಯ ಕ್ರಮಗಳನ್ನೇ ಕೈಗೊಂಡಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಬೆಳೆಗಾರರ ಸಂಕಷ್ಟ ಪರಿಸ್ಥಿತಿ ಅರಿತು ಈಗ ಕಬ್ಬು ಬಾಕಿಯನ್ನು ಶೂನ್ಯಕ್ಕೆ ತಂದಿದೆ. 2024-25ಕ್ಕೆ ಸುಮಾರು 50 ಲಕ್ಷ ರೂ.ಬಾಕಿ ಇದೆ. 2014-15ರಿಂದ 2020-21ರ ಅವಧಿಯಲ್ಲಿ ವಿವಿಧ ಯೋಜನೆಗಳಡಿ ರೈತರ ಕಬ್ಬಿನ ಬಾಕಿ ಪಾವತಿಸಲು ಅನುವಾಗುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸುಮಾರು 16,500 ಕೋಟಿ ರೂ. ಆರ್ಥಿಕ ನೆರವನ್ನು ಒದಗಿಸಿದೆ ಎಂದು ಗಮನ ಸೆಳೆದಿದ್ದಾರೆ.
ಕಬ್ಬು ಬೆಳೆಯುವ ಎಲ್ಲಾ ರಾಜ್ಯಗಳಿಗೂ ಅನ್ವಯಿಸಿ 2025-26ರಲ್ಲಿ ಉತ್ಪಾದನಾ ವೆಚ್ಚ ಒಳಗೊಂಡಂತೆ ಎಫ್‌ಆರ್‌ಪಿಯನ್ನು ಅನುಮೋದಿಸಿದೆ. ಎಫ್‌ಆರ್‌ಪಿ ದರದಲ್ಲಿ ಕಳೆದ ದಶಕದಿಂದ ಗಮನಾರ್ಹ ಏರಿಕೆ ಕಂಡುಬಂದಿದೆ. 2013-14ರಿಂದ 2024-25ರ ಅವಧಿಯಲ್ಲಿ ಕಬ್ಬು ಖರೀದಿ ಮೌಲ್ಯ ಶೇ.80ರಷ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ದರದಂತೆ ಸಕ್ಕರೆ ಕಾರ್ಖಾನೆಗಳು 14 ದಿನಗಳಲ್ಲಿ ರೈತರಿಗೆ ಸಕಾಲಿಕವಾಗಿ ಕಬ್ಬಿನ ವೆಚ್ಚ ಪಾವತಿಸುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ 1966ರ ಕಬ್ಬು ನಿಯಂತ್ರಣ (ಆದೇಶ) ನಿಬಂಧನೆ ಜಾರಿಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ವಹಿಸಲಾಗಿದೆ ಎಂದಿದ್ದಾರೆ.
ರಾಜ್ಯದ ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ರಾಜ್ಯ ಸರ್ಕಾರ ರಾಜ್ಯ ಸಲಹಾ ಬೆಲೆ ಘೋಷಿಸಲಿ ಎಂದು ಸಲಹೆ ಮಾಡಿರುವ ಅವರು, ಹೆಚ್ಚುವರಿ ಕಬ್ಬನ್ನು ಎಥೆನಾಲ್‌ಗೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳನ್ನು ಪ್ರೋತ್ಸಾಹಿಸುತ್ತಿದೆ. ಕರ್ನಾಟಕದಲ್ಲಿ ಎಥೆನಾಲ್ ಡಿಸ್ಟಿಲರಿಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಎಥೆನಾಲ್ ಬಡ್ಡಿ ಸಬ್ವೆನ್ಷನ್ ಯೋಜನೆಯಡಿ 435.42 ಕೋಟಿ ರೂ. ಆರ್ಥಿಕ ನೆರವು ನೀಡಿದೆ ಎಂದು ಅಂಕಿ-ಅಂಶಗಳ ಸಹಿತ ಮಾಹಿತಿ ನೀಡಿದ್ದಾರೆ.
ಸಕ್ಕರೆ ರಫ್ತಿಗೆ ಅವಕಾಶ:10 ಲಕ್ಷ ಮೆಟ್ರಿಕ್ ಟನ್‌ನಿಂದ 15 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತಿಗೆ ಅವಕಾಶ ನೀಡಲು ನಿರ್ಧರಿಸಿದೆ. ಮೊಲಾಸಸ್ ಮೇಲಿನ ಶೇ.50ರಷ್ಟು ರಫ್ತು ಸುಂಕವನ್ನು ತೆಗೆದುಹಾಕಿದೆ. ಹೀಗೆ ಕೇಂದ್ರ ಸರ್ಕಾರ ರೈತರು ಮತ್ತು ಸಕ್ಕರೆ ಉದ್ಯಮ ಎರಡನ್ನೂ ಬೆಂಬಲಿಸುವ ನಿಟ್ಟಿನಲ್ಲಿ ಸಮತೋಲಿತವಾಗಿ ಸ್ಪಂದಿಸುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
