ಬೆಂಗಳೂರು,ಏ.10- ಪ್ರತಿಯೊಬ್ಬ ಸಚಿವರೂ ತಮ ಇಲಾಖೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಆಡಳಿತದಲ್ಲಿ ಹಿಡಿತ ಹಾಗೂ ದಕ್ಷತೆ ಬರಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ 36ನೇ ರಾಷ್ಟ್ರೀಯ ಭೂ ಮಾಪನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಸರ್ಕಾರದ ಮಾತೃ ಇಲಾಖೆಯಿದ್ದಂತೆ ರೈತರ ಜೊತೆ ನೇರ ಸಂಪರ್ಕ ಇದೆ. ಅತೀ ಹೆಚ್ಚು ಅರ್ಜಿಗಳು ಬರುವುದು ಈ ಇಲಾಖೆಗೆ. ಇಲ್ಲಿ ಪರಿಹಾರ ಸಿಕ್ಕರೆ ಅರ್ಧ ಸಮಸ್ಯೆಗಳು ಬಗೆಹರಿದಂತೆ. ಹೆಚ್ಚು ಜಗಳಗಳಾಗುವುದು ಹೆಣ್ಣು, ಹೊನ್ನು, ಮಣ್ಣಿನಿಂದ. ಹೀಗಾಗಿ ಈ ಇಲಾಖೆ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.
ತಾವು ತಾಲ್ಲೂಕು ಮಂಡಳಿ ಸದಸ್ಯರಾಗಿ ರಾಜಕೀಯ ಸೇವೆ ಆರಂಭಿಸಿ ಶಾಸಕನಾಗಿ, ಸಚಿವನಾಗಿ, ವಿರೋಧಪಕ್ಷದ ನಾಯಕನಾಗಿ, ಉಪಮುಖ್ಯಮಂತ್ರಿಯಾಗಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಇಷ್ಟು ಸುದೀರ್ಘ ಅನುಭವವಿದ್ದರೂ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸಲಾಗಲಿಲ್ಲವಲ್ಲ ಎಂಬ ಕೊರಗು ತಮನ್ನು ಕಾಡುತ್ತಿದೆ ಎಂದು ಹೇಳಿದರು.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಸುದೀರ್ಘವಾಗಿ ಮಾತನಾಡಿದ್ದಾರೆ. ಅದರ ಅರ್ಥ ಅವರು ಇಲಾಖೆಯನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ ಎಂಬುದಾಗಿದೆ. ಪ್ರತಿಯೊಬ್ಬ ಮಂತ್ರಿಯೂ ಇಲಾಖೆಯಲ್ಲಿ ಹಿಡಿತ ಸಾಧಿಸಿ ದಕ್ಷತೆ ತರಬೇಕಾದರೆ ಇಲಾಖೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಕೈ ಬೆರಳ ತುದಿಯಲ್ಲಿ ಅಂಕಿಅಂಶಗಳಿರಬೇಕು. ಆಗ ಮಾತ್ರ ಸಮರ್ಥ ಆಡಳಿತ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ ಎಂದರು.
ಸಚಿವರಾಗುವುದು ಮುಖ್ಯವಲ್ಲ. ಜನಪರ ಕಾಳಜಿಯ ಅಗತ್ಯ. ಕೃಷ್ಣ ಭೈರೇಗೌಡ ಸಚಿವರಾದ ಮೇಲೆ ಕಂದಾಯ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿಸಿದರು.
ಕಂದಾಯ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಮತ್ತಷ್ಟು ಚೆನ್ನಾಗಿ ಕೆಲಸ ಮಾಡಬೇಕು ಎಂದ ಅವರು, ಸರ್ವೆ, ಪೋಡಿ ಕೆಲಸಗಳು ಕಾಲಮಿತಿಯಲ್ಲಿ ಸಮರ್ಪಕವಾಗಿ ನಡೆಯಬೇಕು. ಆಗ ಮಾತ್ರ ಸರ್ಕಾರದ ಆಸ್ತಿಗಳ ಸಂರಕ್ಷಣೆ ಸಾಧ್ಯವಾಗಲಿದೆ. ಆಧುನಿಕ ಸಲಕರಣೆಗಳು ಹಾಗೂ ತಂತ್ರಜ್ಞಾನಗಳನ್ನು ಬಳಕೆ ಮಾಡಿ ಸಮೀಕ್ಷೆಯನ್ನು ಸುಲಭವಾಗಿ ಮಾಡಲು ಅವಕಾಶವಿದೆ ಎಂದರು.
ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶ ಹಿಂದೆ ಕೆರೆಯಾಗಿತ್ತು. ಭೂದಾಖಲೆಗಳ ಇಲಾಖೆ ಸರಿಯಾಗಿ ನಿರ್ವಹಣೆ ಮಾಡದೇ ಇದ್ದಿದ್ದರಿಂದ ಈಗ ಆ ಪ್ರದೇಶ ಬಸ್‌ಸ್ಟಾಂಡಾಗಿದೆ. ಮುಂದಿನ 2 ವರ್ಷದಲ್ಲಿ ಕರ್ನಾಟಕದಲ್ಲಿ ಸರ್ವೆ ಕಾರ್ಯಗಳು ಪೂರ್ಣಗೊಳ್ಳಬೇಕು. ಪೋಡಿ ಮುಕ್ತ ರಾಜ್ಯವಾಗಬೇಕು ಎಂದು ಸೂಚನೆ ನೀಡಿದರು.
ಇಲಾಖೆಗೆ ಬಲ ತುಂಬಲು 750 ಸರ್ವೆಯರ್‌ಗಳು ಹಾಗೂ 36 ಎಡಿಎಲ್‌ಆರ್‌ಗಳ ನೇಮಕಾತಿ ಪ್ರಗತಿಯಲ್ಲಿದೆ. 2 ತಿಂಗಳಲ್ಲಿ ಅವರಿಗೆ ನೇಮಕಾತಿ ಆದೇಶ ನೀಡಲಾಗುತ್ತದೆ. ನೇಮಕಾತಿ ಪಾರದರ್ಶಕವಾಗಿರಬೇಕು. ಮಧ್ಯವರ್ತಿಗಳ ಹಾವಳಿ ಇರಬಾರದು. ಯಾರು, ಯಾರಿಗೂ ಹಣ ನೀಡಬಾರದು. ಕಂದಾಯ ಇಲಾಖೆ ಅನ್ನದಾತ ರೈತನಿಗೆ ಸೇವೆ ಒದಗಿಸುತ್ತದೆ. ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಂತೆ ಸುಲಭ ಸರಳವಾಗಿ ಸೇವೆ ನೀಡಬೇಕು ಎಂದರು.
1227 ಪರವಾನಗಿ ಪಡೆದ ಸರ್ವೆಯರ್‌ಗಳನ್ನು ಖಾಯಂಗೊಳಿಸುವ ಕುರಿತು ಗಂಭೀರವಾಗಿ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.
ಕಂದಾಯ ಸಚಿವ ಕೃಷ್ಣಭೈರೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಶಾಸಕರಾದ ಪಿ.ಎಂ.ಅಶೋಕ್, ವಿನಯ್ ಕುಲಕರ್ಣಿ, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.