ಮೈಸೂರು, ಮೇ 25- ವಿಚಾರಣೆಗಾಗಿ ಕರೆತಂದಿದ್ದ ವ್ಯಕ್ತಿ ಪೊಲೀಸರ ವಶದಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರದೂ ತಪ್ಪಿದ್ದು, ಡಿವೈಎಸ್ಪಿ ಮತ್ತು ಇನ್ಸ್ ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆಯ ಪ್ರಕರಣದ ಬಗ್ಗೆ ತಾವು ವಿಚಾರಿಸಿ ಮಾಹಿತಿ ಪಡೆದುಕೊಂಡಿದ್ದು, ಅದು ಲಾಕಪ್‌ಡೆತ್ ಅಲ್ಲ, ಮೃತಪಟ್ಟ ಆದಿಲ್‌ಗೆ ಪಿಡ್ಸ್ ಇತ್ತು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿದ್ದಾನೆ ಎಂದು ಹೇಳಿದರು.
ಎಫ್‌ಐಆರ್ ದಾಖಲಾಗದೆ ವ್ಯಕ್ತಿಯನ್ನು ವಿಚಾರಣೆಗೆ ಕರೆತಂದು ಠಾಣೆಯಲ್ಲಿ ಕೂರಿಸಿಕೊಳ್ಳುವುದು ನಿಯಮಬಾಹಿರ. ಈ ಕಾರಣಕ್ಕಾಗಿ ಸಂಬಂಧಪಟ್ಟ ಉಪವಿಭಾಗದ ಡಿವೈಎಸ್ಪಿ ಹಾಗೂ ಚನ್ನಗಿರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ರನ್ನು ಅಮಾನತುಗೊಳಿಸಲಾಗಿದೆ ಎಂದರು. ಯಾವುದೇ ವ್ಯಕ್ತಿಯ ಮೇಲೆ ದೂರು ದಾಖಲಾಗದೇ ಇದ್ದರೆ, ವಿಚಾರಣೆ ನಡೆಸಿ ವಾಪಸ್ ಕಳುಹಿಸಬೇಕು. ಅನಧಿಕೃತವಾಗಿ ಠಾಣೆಯಲ್ಲಿರಿಸಿ ಕೊಂಡಿರುವುದು ಅಪರಾಧ ಎಂದು ಹೇಳಿದರು.
ಪ್ರತ್ಯೇಕ ಕ್ರಿಮಿನಲ್ ಕಾನೂನುಗಳಿದ್ದರೆ ತಿಳಿಸಲಿ :
ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ವಿಡಿಯೋಗಳನ್ನು ವೈರಲ್ ಮಾಡಿರುವುದು ಅತ್ಯಾಚಾರಕ್ಕಿಂತಲೂ ಮಹಾಪರಾಧ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಿದ್ದಾರೆ. ಇದು ಯಾವ ಸೆಕ್ಷನ್‌ನಲ್ಲಿ ಮಹಾಪರಾಧ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು.
ಮುಖ ಕಾಣುವ ಹಾಗೆ ವಿಡಿಯೋಗಳನ್ನು ಬಹಿರಂಗಗೊಳಿಸಿರುವುದು ಸರಿಯಲ್ಲ. ಅದು ಅಪರಾಧ ಎಂಬುದಕ್ಕೆ ನನ್ನ ಸಹಮತ ಇದೆ. ಆದರೆ ಯಾವುದೇ ಅಪರಾಧಕ್ಕೆ ಶಿಕ್ಷೆಯಾಗಬೇಕಾದರೆ ಭಾರತ ದಂಡಸಂಹಿತೆಯ ಸೆಕ್ಷನ್‌ಗಳು ಇರುತ್ತವೆ.
ಕುಮಾರಸ್ವಾಮಿಯವರು ಯಾವ ಸೆಕ್ಷನ್‌ನಡಿ ಅಪರಾಧ ಎಂದು ಹೇಳುತ್ತಿದ್ದಾರೆ? ಐಪಿಸಿ ಹೊರತುಪಡಿಸಿ ಅವರಿಗಾಗಿ ಪ್ರತ್ಯೇಕವಾದ ಕ್ರಿಮಿನಲ್ ಕಾನೂನುಗಳೇನಾದರೂ ಇವೆಯೇ? ಎಂದು ಮುಖ್ಯಮಂತ್ರಿ ವ್ಯಂಗ್ಯವಾಡಿದರು.
ಅವರ ಅಣ್ಣನ ಮಗ ಅತ್ಯಾಚಾರ ಮಾಡಿದ್ದಾನೆ. ಅದು ಮಹಾಪರಾಧ ಎಂದ ಮುಖ್ಯಮಂತ್ರಿಯವರು, ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವುದು ಜಠಿಲ ಪ್ರಕ್ರಿಯೆ ಎಂದು ಹೇಳಲು ಕುಮಾರಸ್ವಾಮಿಯವರೇನು ವಿದೇಶಾಂಗ ಸಚಿವರೇ? ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು, ಕೇಂದ್ರ ಸಚಿವರಾಗಿರಲಿಲ್ಲ ಎಂದು ತಿರುಗೇಟು ನೀಡಿದರು.
ತಮ ಪುತ್ರ ರಾಕೇಶ್ ಸಿದ್ದರಾಮಯ್ಯ 2016 ರಲ್ಲಿ ಮೃತಪಟ್ಟಿದ್ದಾನೆ. 8 ವರ್ಷಗಳ ಬಳಿಕ ಈಗ ಆ ವಿಚಾರವನ್ನು ಪ್ರಸ್ತಾಪಿಸುತ್ತಿರುವುದು ಕುಮಾರಸ್ವಾಮಿಯ ಮೂರ್ಖತನ. ತಮ ಪುತ್ರನ ಸಾವಿಗೂ, ಇಂದಿನ ಪೆನ್‌ಡ್ರೈವ್ ಪ್ರಕರಣಕ್ಕೂ ಏನು ಸಂಬಂಧ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಈಗಲಾದರೂ ರದ್ದುಪಡಿಸಲಿ :
ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡಿದ್ದು ಕೇಂದ್ರ ವಿದೇಶಾಂಗ ಸಚಿವರು. ಅದನ್ನು ರದ್ದುಪಡಿಸಬೇಕಾಗಿರುವುದೂ ಅವರದೇ ಕೆಲಸ. ಈ ನಿಟ್ಟಿನಲ್ಲಿ ತಾವು ಬರೆದ ಪತ್ರ ತಡವಾಗಿ ತಲುಪಿದೆ ಎಂದು ವಿದೇಶಾಂಗ ಸಚಿವ ಜಯಶಂಕರ್ ನೆಪ ಹೇಳುತ್ತಿದ್ದಾರೆ. ನಾನು 15 ದಿನಗಳ ಹಿಂದೆಯೇ ಮೊದಲ ಬಾರಿಗೆ ಪ್ರಧಾನಿಯವರಿಗೆ ಪತ್ರ ಬರೆದಿದ್ದೆ. ಅನಂತರ ಎಸ್‌ಐಟಿ ಅಧಿಕಾರಿಗಳೂ ಬರೆದಿದ್ದರು. ನಾನು ಎರಡನೇ ಸುತ್ತಿನಲ್ಲೂ ಪತ್ರ ಬರೆದಿದ್ದೇನೆ ಎಂದು ವಿವರಿಸಿದರು.
ಒಂದು ವೇಳೆ ಪತ್ರ ತಲುಪಿದ್ದು ತಡವಾಗಿದೆ ಎಂದು ವಾದವನ್ನು ಒಪ್ಪಿಕೊಂಡರೂ ಈಗಲಾದರೂ ಪತ್ರ ಸಿಕ್ಕಿದೆಯಲ್ಲಾ? ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ತಕ್ಷಣವೇ ರದ್ದುಗೊಳಿಸಲಿ ಎಂದು ಮುಖ್ಯಮಂತ್ರಿ ಆಗ್ರಹಿಸಿದರು.