Friday, December 20, 2024
Homeರಾಜ್ಯ87ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಭಾಷಣ, ಇಲ್ಲಿದೆ ಹೈಲೈಟ್ಸ್

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಭಾಷಣ, ಇಲ್ಲಿದೆ ಹೈಲೈಟ್ಸ್

CM Siddaramaiah's speech at 87th Kannada Sahitya Sammelana

ಹಿಂದಿ ಹೇರಿಕೆ ಪ್ರತಿಭಟಿಸದಿದ್ದರೆ ನಮ ಭಾಷೆಗಳಿಗೆ ಗಂಡಾಂತರ : ಸಿಎಂ ಎಚ್ಚರಿಕೆ
ಮಂಡ್ಯ,ಡಿ.20- ಹಿಂದಿ ಹೇರಿಕೆಯ ಮೂಲಕ ಕನ್ನಡ ಹಾಗೂ ಇತರ ದೇಶ ಭಾಷೆಗಳನ್ನು ದಮನಿಸುವ ಪ್ರಯತ್ನಗಳಾಗುತ್ತಿದ್ದು, ಇದನ್ನು ಪ್ರತಿಭಟಿಸದೇ ಇದ್ದರೆ ನಮ ಭಾಷೆಗಳು ಗಂಡಾಂತರಕ್ಕೆ ಸಿಲುಕಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡಕ್ಕೆ ಒದಗಿರುವ ಕಂಟಕಗಳ ಬಗ್ಗೆ ಚರ್ಚೆಯಾಗಬೇಕಿದೆ. ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ಸಾಕಷ್ಟು ಅನ್ಯಾಯವಾಗಿದೆ. ಶ್ರೀಮಂತರ ಕಾರ್ಪೊರೇಟ್‌ ಕಂಪನಿಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದ್ದರಿಂದ ಜನರ ಕೈಯಲ್ಲಿ ಹಣ ಇಲ್ಲದೆ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಇದಕ್ಕಾಗಿ ನಮ ಸರ್ಕಾರ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತರಬೇಕಾಯಿತು ಎಂದು ಹೇಳಿದರು.

ಸಂವಿಧಾನದ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಯುತ್ತಿದೆ. ಅದರ ವಿರುದ್ಧ ಹೋರಾಡಬೇಕಾಗಿರುವುದು ನಮೆಲ್ಲರ ಜವಾಬ್ದಾರಿ ಎಂದ ಮುಖ್ಯಮಂತ್ರಿಗಳು ಮಂಡ್ಯ ನೆಲದಲ್ಲಿ ಕೆಲವು ದ್ವೇಷವಾದಿ, ಹಿಂಸಾವಾದಿ ಶಕ್ತಿಗಳು ಜನರ ಮನಸ್ಸಿನಲ್ಲಿ ವಿಷ ಬಿತ್ತಲು ಪ್ರಯತ್ನಿಸುತ್ತಿವೆ. ಸಿಹಿ ಬೆಳೆಯುವ ಜನ ಅವರನ್ನು ಒಳಗೆ ಬಿಟ್ಟುಕೊಂಡಿಲ್ಲ. ಇದಕ್ಕಾಗಿ ಅಭಿನಂದನೆಗಳು ಎಂದು ಹೇಳಿದರು.

ಈ ಸಮೇಳನ ನಾಡಿನ ಸಮಸ್ಯೆಗಳಿಗೆ ಉತ್ತರ ಹುಡುಕಬೇಕು. ನಾಡಿನ ಬೌದ್ಧಿಕ ದಾಸ್ಯಕ್ಕೆ ಕಾರಣಗಳೇನು?, ಅದನ್ನು ಮೀರುವ ಬಗೆ ಹೇಗೆ? ಎಂಬುದನ್ನು ಕುವೆಂಪು ವಿವರಿಸಿದ್ದಾರೆ. ಸಾವಿರಾರು ವರ್ಷಗಳಿಂದ ಪುರೋಹಿತಶಾಹಿ ನಮನ್ನು ದಾಸ್ಯದಲ್ಲಿ ಹೇಗೆ ಮುಳುಗಿಸಿದೆ ಎಂಬ ಸಮಗ್ರ ಮಾಹಿತಿಯನ್ನು ಅವರು ನೀಡಿದ್ದಾರೆ ಎಂದರು.

ಆಧುನಿಕತೆಯ ಕಾಲದಲ್ಲೂ ನಾವು ವೈಚಾರಿಕತೆ ಹಾಗೂ ವೈಜ್ಞಾನಿಕತೆಯನ್ನು ಮೈಗೂಡಿಸಿಕೊಂಡಿಲ್ಲ. ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ರಂಗಗಳನ್ನು ವೈಚಾರಿಕ ದೃಷ್ಟಿಯಿಂದ ನೋಡದೇ ಇದ್ದರೆ ಕೇಡು ತಪ್ಪುವುದಿಲ್ಲ. ಯಾವ ಸಂಪ್ರದಾಯವೂ ಸಂಕೋಚಕ್ಕೆ ಸಿಲುಕಬಾರದು. ಸರ್ವಧರ್ಮಗಳ ಸಾರ, ಉದಾರದರ್ಶನವನ್ನು ಕಂಡು ಬಾಳನ್ನು ಕಟ್ಟಿಕೊಳ್ಳಬೇಕು. ಜಾತಿ, ಮತ, ದೇಶ, ಕಾಲಗಳ ಭೇದವಿಲ್ಲದೆ ಎಲ್ಲಾ ಮಹಾಪುರುಷರ ಜ್ಞಾನಗಂಗೆಗಳನ್ನು ಸಂಪೂರ್ಣವಾಗಿ ಅನುಭವಿಸಬೇಕು ಎಂದು ಹೇಳಿದರು.

ಇಂಗ್ಲಿಷ್‌ ಸೇರಿದಂತೆ ಪ್ರಮುಖ ಭಾಷೆಗಳ ಕೃತಿಗಳು ಡಿಜಿಟಲೀಕರಣದಿಂದ ಜಗತ್ತಿನ ಎಲ್ಲೆಡೆ ಎಲ್ಲರಿಗೂ ಮುಕ್ತವಾಗಿ ದೊರೆಯುತ್ತದೆ. ಕನ್ನಡದ ಸಮಗ್ರ ಸಾರಸ್ವತ ಲೋಕದ ಡಿಜಿಟಲೀಕರಣ ಕಾರ್ಯವನ್ನು ಆರಂಭಿಸಲಾಗಿದೆ. ಜಗತ್ತಿನಲ್ಲಿರುವ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಜ್ಞಾನವನ್ನು ವೃದ್ಧಿಸುವ ಕೆಲಸವಾಗಬೇಕು.

ಮೈಸೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದಲ್ಲಿ ಕನ್ನಡ ಸಮಗ್ರ ನಾಗರಿಕತೆಯ ವಿಕಾಸ, ಸಂಸ್ಕೃತಿಯ ಇತಿಹಾಸಗಳನ್ನು ಬಿಂಬಿಸುವ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು ಎಂದರು.

ಸಂಕಷ್ಟದ ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ಹೇಳಲಾಗುತ್ತಿದೆ. ಇದಕ್ಕೆ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲ ಸಮಸ್ಯೆಗಳಿವೆ. ಮಕ್ಕಳಿಗೆ ಹೆಡ್‌, ಹಾರ್ಟ್‌ ಮತ್ತು ಹ್ಯಾಂಡ್‌ ಎಂಬ 3-ಎಚ್‌ ಸೂತ್ರವನ್ನು ಅಳವಡಿಸಬೇಕು. ಮೆದುಳು, ಕರುಣೆ, ಕೌಶಲ್ಯ ಒಳಗೊಂಡ ಶಿಕ್ಷಣ ವ್ಯವಸ್ಥೆ ನಮದಾಗಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ಸಕ್ಕರೆ ಸೀಮೆ ಮಂಡ್ಯದಲ್ಲಿ ನಡೆಯುತ್ತಿರುವ ಸಮೇಳನಕ್ಕೆ ದೇಶ, ವಿದೇಶಗಳಿಂದಲೂ ಸಾಹಿತ್ಯಾಭಿಮಾನಿಗಳು ಬಂದಿದ್ದಾರೆ. ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ, ಶಿಂಷಾ, ಲೋಕಪಾವನಿ ಮುಂತಾದ ಜೀವನದಿಗಳು ಹರಿಯುತ್ತವೆ. ಸದಾಕಾಲ ಕನ್ನಡ ಸಾಹಿತ್ಯ ಪರಂಪರೆಯನ್ನು ಮೆರೆಸಿರುವ ಮಂಡ್ಯ ಅಪ್ಪಟ ಕನ್ನಡದ ನೆಲ. ಭತ್ತದ ಕಣಜ. ಸಕ್ಕರೆನಾಡು. ಯಾವುದೇ ಭಾಷಿಗರು ಬಂದರೂ ಒಂದು ತಿಂಗಳಲ್ಲಿ ಕನ್ನಡ ಕಲಿಸುವ ದಿಟ್ಟತನ ಹಾಗೂ ಭಾಷಾಭಿಮಾನ ಮಂಡ್ಯದ ಜನರದು ಎಂದು ಹೇಳಿದರು.

ನಾಡಿಗೆ ಗೋವಿನ ಹಾಡು ಎಂಬ ಶ್ರೇಷ್ಠ ಸಾಹಿತ್ಯ ಕೊಟ್ಟ ನೆಲವಿದು. ಪೊಲೀಸರ ಲಾಠಿ ಏಟನ್ನೂ ಲೆಕ್ಕಿಸದೆ ಟಿ.ಸಿದ್ಧಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ಕೆ.ಟಿ.ಭಾಷ್ಯಂ ಸೇರಿದಂತೆ ಸಾವಿರಾರು ಜನರು ತ್ರಿವರ್ಣ ಧ್ವಜವನ್ನು ಹಾರಿಸಿದ 1938 ರ ಶಿವಪುರ ಧ್ವಜ ಸತ್ಯಾಗ್ರಹ ಜಿಲ್ಲೆಯ ಜನರ ಧೈರ್ಯ, ಸಾಹಸಕ್ಕೆ ಪ್ರತಿಬಿಂಬ. ಸ್ವಾತಂತ್ರ್ಯ, ಭಾವೈಕ್ಯ, ಉದಾರತೆ, ಜಾತ್ಯತೀತ ಗುಣಗಳನ್ನು ಈ ನೆಲದ ಹಿರಿಯರು ಬಿತ್ತಿದ್ದು, ಹೊಸ ತಲೆಮಾರು ಅದನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಕರೆ ನೀಡಿದರು.

ಕುವೆಂಪು ಅವರಂತಹ ಪ್ರತಿಭಾವಂತ ರಾಷ್ಟ್ರಕವಿಯನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಕನ್ನಡದ ಕಣ್ವ ಬೆಳ್ಳೂರಿನ ಬಿ.ಎಂ.ಶ್ರೀಕಂಠಯ್ಯನವರು, ಎಂ.ಎನ್‌.ಶ್ರೀಕಂಠೇಗೌಡರು, ಎ.ಎನ್‌.ಮೂರ್ತಿರಾಯರು, ಪು.ತಿ.ನರಸಿಂಹಾಚಾರ್ಯ, ಕೆ.ಎಸ್‌‍.ನರಸಿಂಹಸ್ವಾಮಿ ಸೇರಿದಂತೆ ಅನೇಕರು ಈ ಜಿಲ್ಲೆಯವರಾಗಿದ್ದು, ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಜಾತ್ಯತೀತ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ.

ಕೃಷ್ಣರಾಜ ಮಹಾಸಾಗರ ಅಣೆಕಟ್ಟು ನಿರ್ಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮೈಸೂರಿನ ಅರಸರು. ಶ್ರೀರಂಗಪಟ್ಟಣದ ಹೈದರ್‌ ಮತ್ತು ಟಿಪ್ಪೂ ಮುಂತಾದವರನ್ನು ಮರೆಯುವಂತಿಲ್ಲ. ಎಚ್‌.ಕೆ.ವೀರಣ್ಣಗೌಡರು, ಕೆ.ವಿ.ಶಂಕರೇಗೌಡರು, ಎಸ್‌‍.ಸಿ.ಮಲ್ಲಯ್ಯ, ಜಿ.ಮಾದೇಗೌಡರು, ಎಂ.ಸಿ.ಬಂದೀಗೌಡರು, ಅಂಬರೀಶ್‌, ಎಸ್‌‍.ಎಂ.ಕೃಷ್ಣ ಮತ್ತಿತರರ ಕೊಡುಗೆಗಳು ಸರಣೀಯ.
3 ದಶಕಗಳ ಬಳಿಕ ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಡ್ಯದಲ್ಲಿ ಮೂರನೇ ಬಾರಿಗೆ ಕನ್ನಡ ಸಾಹಿತ್ಯ ಸಮೇಳನ ನಡೆಯುತ್ತಿದೆ.

ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಗೊ.ರು.ಚನ್ನಬಸಪ್ಪ ಅವರು ಸರ್ಕಾರಿ ಶಾಲೆಯ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮೇಳನವನ್ನು ಮೊಟ್ಟಮೊದಲ ಬಾರಿಗೆ ನಡೆಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ ಎಂದು ಹೇಳಿದರು.

RELATED ARTICLES

Latest News