ಚೆನ್ನೈ,ಮಾ.8-ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಅನ್ಯಾಯಯುತವಾಗಿದ್ದು, ಈ ವಿಚಾರದಲ್ಲಿ ರಾಜಿಯಾಗದೆ ಹೋರಾಡಲು ತಮಿಲುನಾಡು ಜೊತೆ ಕೈ ಜೋಡಿಸಲು ಹಾಗೂ ಜಂಟಿ ಕ್ರಿಯಾ ಸಮಿತಿ ಭಾಗವಾಗಲು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಹ್ವಾನಿಸಿದ್ದಾರೆ.
ಕೇರಳ, ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಒಡಿಶಾ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಮುಖ್ಯಸ್ಥರಿಗೆ ಪತ್ರ ಬರೆದಿರುವ ಸ್ಟಾಲಿನ್, ಮಾರ್ಚ್ 22ರಂದು ಚೆನ್ನೈನಲ್ಲಿ ಜಂಟಿ ಕ್ರಿಯಾ ಸಮಿತಿಯ ಉದ್ಘಾಟನಾ ಸಭೆ ನಡೆಯಲಿದ್ದು, ಒಗ್ಗಟ್ಟಿನಿಂದ ಮುಂದೆ ಸಾಗಲು ಅದರಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿದ್ದಾರೆ.ಜನಸಂಖ್ಯೆ ಆಧಾರದಲ್ಲಿ ಎರಡು ವಿಧಾನದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಮಾಡಲಾಗುತ್ತಿದ್ದು, ಮೊದಲ ಹಂತದಲ್ಲಿ ಈಗ ಇರುವ 543 ಕ್ಷೇತ್ರಗಳನ್ನು ರಾಜ್ಯಗಳ ನಡುವೆ ಪುನರ್ ಹಂಚಲಾಗುತ್ತದೆ.
ಎರಡನೇ ಹಂತದಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು 800ಕ್ಕೂ ಮೀರಿ ಹೆಚ್ಚಿಸಲಾಗುತ್ತದೆ. 2026ರ ನಂತರದ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ನಡೆದರೆ, ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಎಲ್ಲಾ ರಾಜ್ಯಗಳು ಗಮನಾರ್ಹವಾಗಿ ಕ್ಷೇತ್ರಗಳನ್ನು ಕಳೆದುಕೊಳ್ಳುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಜನಸಂಖ್ಯೆಯ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮತ್ತು ರಾಷ್ಟ್ರೀಯ ಅಭಿವೃದ್ಧಿ ಗುರಿ ಸಾಧಿಸಲು ನಾವು ದಂಡನೆಗೆ ಒಳಗಾಗಬಾರದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇಂತಹ ಮಹತ್ವದ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟತೆ ನೀಡುತ್ತಿಲ್ಲ ಅಥವಾ ಕಳವಳವನ್ನು ಬಗೆಹರಿಸುತ್ತಿಲ್ಲ. ಪ್ರಜಾಪ್ರಭುತ್ವದ ತಳಪಾಯ ಅಲುಗಾಡುತ್ತಿರುವಾಗ, ನಮ್ಮ ರಾಜ್ಯಗಳ ಭವಿಷ್ಯ ತೂಗುಯ್ಯಾಲೆಯಲ್ಲಿರುವಾಗ ಪಾರದರ್ಶಕ ಮಾತುಕತೆಗೆ ನಾವು ಅರ್ಹತೆ ಹೊಂದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ ವಿಂಗಡಣೆ ಯೋಜನೆ ಒಕ್ಕೂಟ ವ್ಯವಸ್ಥೆ ಮೇಲಿನ ಘೋರ ದಾಳಿ ಎಂದಿರುವ ಸ್ಟಾಲಿನ್, ಜನಸಂಖ್ಯೆ ನಿಯಂತ್ರಣ ಸಾಧಿಸಿ, ಉತ್ತಮ ಆಡಳಿತ ಹೊಂದಿರುವ ರಾಜ್ಯಗಳನ್ನು ಶಿಕ್ಷಿಸುತ್ತಿದ್ದಾರೆ. ಈ ಪ್ರಜಾಸತ್ತಾತ್ಮಕ ಅನ್ಯಾಯಕ್ಕೆ ಅವಕಾಶ ಕೊಡುವುದಿಲ್ಲ ಎಂದು ಕೇರಳ, ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಪಂಜಾಬ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ.
ಅಲ್ಲದೆ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಪಂಜಾಬ್‌ನ ಪಕ್ಷಗಳ ಮುಖ್ಯಸ್ಥರಿಗೂ ಪತ್ರ ಬರೆದಿದ್ದು, ಈ ಅನ್ಯಾಯದ ವಿರುದ್ದ ರಾಜಿಯಿಲ್ಲದ ಹೋರಾಟಕ್ಕೆ ಕರೆ ನೀಡಿದ್ದಾರೆ. ಮಾರ್ಚ್ 22ರಂದು ಚೆನ್ನೈನಲ್ಲಿ ಮೊದಲ ಜೆಎಸಿ ಸಭೆ ನಡೆಯಲಿದ್ದು, ನಾವು ಪ್ರತ್ಯೇಕ ರಾಜಕೀಯ ಘಟಕಗಳಾಗಿರದೆ ನಮ್ಮ ಜನರ ಭವಿಷ್ಯದ ರಕ್ಷಕರಾಗಿ ಒಟ್ಟಾಗಿ ನಿಲ್ಲೋಣ ಎಂದು ಸ್ಟಾಲಿನ್ ಕರೆ ನೀಡಿದ್ದಾರೆ.