ಬೆಂಗಳೂರು, ಸೆ.6- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನೆಯಿಂದ ವಿಮಾನನಿಲ್ದಾಣದತ್ತ ತೆರಳುವ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬನ ಕೂಗಿಗೆ ಕಾರು ನಿಲ್ಲಿಸಿ, ಮನವಿ ಸ್ವೀಕರಿಸಿದ ಪ್ರಸಂಗ ನಡೆದಿದೆ.
ಕೊಪ್ಪಳ, ವಿಜಯಪುರ ಜಿಲ್ಲಾ ಪ್ರವಾಸಕ್ಕಾಗಿ ಎಚ್‌ಎಎಲ್ ವಿಮಾನ ನಿಲ್ದಾಣದತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನ್ವೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಯ ಹೊರಭಾಗದಲ್ಲಿ ಕಾಯುತ್ತಿದ್ದ ವ್ಯಕ್ತಿಯೊಬ್ಬರು ಅಣ್ಣಾ… ಅಣ್ಣಾ… ಎಂದು ಕೂಗಿದರು. ವೇಗವಾಗಿ ತೆರಳುತ್ತಿದ್ದ ಕಾನ್ವೆಯನ್ನು ತಕ್ಷಣ ನಿಲ್ಲಿಸಿದ ಮುಖ್ಯಮಂತ್ರಿಯವರ ಬಳಿ ಮದ್ದೂರಿನಿಂದ ಆಗಮಿಸಿದ್ದ ವ್ಯಕ್ತಿಯೊಬ್ಬರು ಮನವಿ ಸಲ್ಲಿಸಿದರು.
ತಾವು ಫುಲ್ ಬಡವರಿದ್ದು, ಪತ್ನಿಯ ಆಸ್ಪತ್ರೆಯ ಚಿಕಿತ್ಸಾ ವೆಚ್ಚ 5 ಲಕ್ಷ ರೂ. ದಾಟಿದೆ. ದೈಹಿಕ ಸಹಾಯ ಮಾಡಿ ಎಂದು ಮನವಿ ಮಾಡಿದರು. ಫುಲ್ ಬಡವರು ಎಂದರೆ ಏನು? ಬಡವರೆಂದರೆ ಸಾಕು ಎಂದು ಹೇಳಿದ ಸಿದ್ದರಾಮಯ್ಯ ಮನವಿ ಸ್ವೀಕರಿಸಿದರು.ಗರಿಷ್ಠ ಮೊತ್ತದ ಸಹಾಯ ಮಾಡುವಂತೆ ವ್ಯಕ್ತಿ ಮನವಿ ಮಾಡಿದರು. ಅದಕ್ಕೆ ಸಕಾರಾತಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಯವರು ಪ್ರಯಾಣ ಮುಂದುವರೆಸಿದರು.