ಬೆಂಗಳೂರು,ಜ.27- ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ಕುಮಾರ್ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಸಚಿವ ಭೈರತಿ ಸುರೇಶ್, ಶಾಸಕ ಎ.ಎಸ್.ಪೊನ್ನಣ್ಣ ಅವರೊಂದಿಗೆ ಇಂದು ಬೆಳಿಗ್ಗೆ ನಾಗವಾರದಲ್ಲಿರುವ ಡಾ.ಶಿವರಾಜ್ಕುಮಾರ್ ಅವರ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ ಗೀತಾ ಶಿವರಾಜ್ಕುಮಾರ್ ಉಪಸ್ಥಿತರಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಶಿವರಾಜ್ಕುಮಾರ್ರವರು ಅಮೆರಿಕೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾದ ಮಾರನೆಯ ದಿನ ನಾನು ಕರೆ ಮಾಡಿ ವಿಚಾರಿಸಿದ್ದೆ. ಯಾವುದೇ ತೊಂದರೆಯಿಲ್ಲ ಎಂದು ಹೇಳಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಶಿವರಾಜ್ಕುಮಾರ್ ಮುಂದಿನ ತಿಂಗಳಿನಿಂದ ಶೂಟಿಂಗ್ನಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಶಿವರಾಜ್ಕುಮಾರ್ ಈಗ ಆರೋಗ್ಯವಾಗಿದ್ದಾರೆ ಎಂದು ಹೇಳಿದರು.
ಶಿವರಾಜ್ಕುಮಾರ್ರವರು ಕ್ಯಾನ್ಸರ್ ಸಮಸ್ಯೆಯಿಂದಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಳೆದ ತಿಂಗಳು ಅಮೆರಿಕದಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಒಂದು ತಿಂಗಳ ಕಾಲ ಅಲ್ಲಿಯೇ ವಿಶ್ರಾಂತಿ ಪಡೆದು ನಿನ್ನೆಯಷ್ಟೇ ಶಿವರಾಜ್ಕುಮಾರ್ ತಾಯ್ನಾಡಿಗೆ ಮರಳಿದ್ದರು. ಅಭಿಮಾನಿಗಳು ಅವರಿಗೆ ಅದ್ಧೂರಿ ಸ್ವಾಗತ ಕೋರಿದರು. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಶಿವರಾಜ್ಕುಮಾರ್ರನ್ನು ಒಬ್ಬರಾದ ಮೇಲೆ ಒಬ್ಬರಂತೆ ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸುತ್ತಿದ್ದಾರೆ.