Friday, November 22, 2024
Homeರಾಜ್ಯದರ್ಶನ್‌ ಪ್ರಕರಣ ಕುರಿತು ಹೇಳಿಕೆ ನೀಡದಂತೆ ಕಾಂಗ್ರೆಸ್‌‍ ಮುಖಂಡರಿಗೆ ಸಿಎಂ ತಾಕೀತು

ದರ್ಶನ್‌ ಪ್ರಕರಣ ಕುರಿತು ಹೇಳಿಕೆ ನೀಡದಂತೆ ಕಾಂಗ್ರೆಸ್‌‍ ಮುಖಂಡರಿಗೆ ಸಿಎಂ ತಾಕೀತು

ಬೆಂಗಳೂರು,ಜೂ.13– ನಟ ದರ್ಶನ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಯಿ ತಪ್ಪಿದ ಹೇಳಿಕೆಗಳನ್ನು ನೀಡಬಾರದು ಹಾಗೂ ತನಿಖಾ ಸಂಸ್ಥೆಯ ಮೇಲೆ ಅನಗತ್ಯ ಒತ್ತಡ ಹೇರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ ಸಂಪುಟದ ಸದಸ್ಯರು ಹಾಗೂ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ.

ನಟ ದರ್ಶನ್‌ ಪ್ರಕರಣದಲ್ಲಿ ಕಾಂಗ್ರೆಸ್‌‍ನ ಹಲವು ಶಾಸಕರು, ನಾಯಕರು, ವಿರೋಧಪಕ್ಷಗಳ ಕೆಲವು ಶಾಸಕರು ಪ್ರಭಾವ ಬೀರಲು ಯತ್ನಿಸಿದರು ಎಂದು ಹೇಳಲಾಗಿದೆ. ಆದರೆ ಅದಕ್ಕೆ ಸೊಪ್ಪು ಹಾಕದ ಸಿದ್ದರಾಮಯ್ಯ, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸತ್ಯಾಸತ್ಯತೆ ಬೆಳಕಿಗೆ ಬರಲಿ. ಈ ವಿಷಯದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ದರ್ಶನ್‌ ಪ್ರಕರಣ ಬಿಟ್ಟರೆ ಸಚಿವರಿಗೆ, ಶಾಸಕರಿಗೆ ಮಾಡಲು ಬೇರೆ ಕೆಲಸಗಳಿವೆ. ಕಳೆದ ಮೂರು ತಿಂಗಳಿನಿಂದಲೂ ಚುನಾವಣಾ ನೀತಿ ಸಂಹಿತೆಯಿಂದಾಗಿ ಆಡಳಿತ ವ್ಯವಸ್ಥೆ ಸ್ಥಗಿತಗೊಂಡಿತ್ತು. ಈಗ ನೀತಿ ಸಂಹಿತೆ ತೆರವಾಗಿದೆ. ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಬೇಕು. ಈ ನಿಟ್ಟಿನಲ್ಲಿ ಆಯಾ ಇಲಾಖೆಯ ಸಚಿವರು ಹೆಚ್ಚಿನ ಗಮನ ಹರಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ದರ್ಶನ್‌ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳು ಹಾಗೂ ಸತ್ಯಾಂಶ ಆಧರಿಸಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ತಪ್ಪು ಮಾಡದವರು ಗಾಬರಿಗೊಳ್ಳುವ ಅಗತ್ಯವಿಲ್ಲ. ಈ ವಿಷಯದಲ್ಲಿ ಪೊಲೀಸರಿಗೆ ಒತ್ತಡ ಹೇರುವುದಾಗಲೀ, ಪ್ರಭಾವ ಬೀರುವುದಾಗಲೀ ಸರಿಯಲ್ಲ. ಅಂತಹ ವಿಚಾರಗಳು ತಮ ಗಮನಕ್ಕೆ ಬಂದರೆ ಸಹಿಸುವುದಿಲ್ಲ ಎಂದು ಖಡಕ್‌ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ನಟ ದರ್ಶನ್‌ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದರು. ಅದರ ಹಿಂದಿನ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍, ಬಿಜೆಪಿ ಎಂಬ ಭೇದ ಮಾಡದೇ ತಮ ಆಪ್ತ ಬಳಗದಲ್ಲಿರುವ ಅಭ್ಯರ್ಥಿಗಳ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು.

RELATED ARTICLES

Latest News