ಬೆಂಗಳೂರು, ನ.21– ಕಾಂಗ್ರೆಸ್ ಪಕ್ಷದಲ್ಲಿ ಕುರ್ಚಿಯ ಕದನ ಮತ್ತೊಂದು ಮಗ್ಗಲಿಗೆ ತಲುಪಿದ್ದು, ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಬೆಂಬಲಿಗ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದರೆ. ಇತ್ತ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತಬಣದಲ್ಲಿರುವ ಸಚಿವರು ಮತ್ತು ಪ್ರಮುಖ ನಾಯಕರು ಭೋಜನಕೂಟದ ನೆಪದಲ್ಲಿ ರಹಸ್ಯ ಸಭೆ ನಡೆಸಿ ಪ್ರತಿ ತಂತ್ರ ರೂಪಿಸಲಾರಂಭಿಸಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಎರಡುವರೆ ವರ್ಷ ಪೂರ್ಣಗೊಂಡ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದಲ್ಲಿ ಕೆಲಸ ಮಾಡುವವರು ಬೇರೆ, ಅಧಿಕಾರ ಅನುಭವಿಸುವವರು ಮತ್ತೊಬ್ಬರು ಎಂದು ಹೇಳಿ, ಹಲವಾರು ರೀತಿಯ ಮಾರ್ಮಿಕ ಮಾತುಗಳನಾಡಿದ್ದರು.
ಅದರ ಬೆನ್ನೆಲೆ ಮಾಜಿ ಸಂಸದ ಡಿ.ಕೆ. ಸುರೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು. ಈ ಬೆಳವಣಿಗೆಯ ಬೆನ್ನೆಲು ಕಾಂಗ್ರೆಸ್ ನ ಸಚಿವರಾದ ಚೆಲುವರಾಯಸ್ವಾಮಿ, ಶಾಸಕರಾದ ಎಸ್.ಆರ್.ಶ್ರೀನಿವಾಸ್, ಎಚ್.ಡಿ.ರಂಗನಾಥ್, ರವಿಗಣಿಗ, ಬಿ.ಶಿವಣ್ಣ ಸೇರಿದಂತೆ ಆರುಕ್ಕೂ ಹೆಚ್ಚು ಶಾಸಕರು ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ.
ಅಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಡಿ.ಕೆ.ಶಿವಕುಮಾರ್ ಅವರನ್ನು ಬಾಕಿ ಉಳಿದ ಎರಡುವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಮೇಲ್ನೋಟಕ್ಕೆ ತಾವು ವೈಯಕ್ತಿಕ ಕೆಲಸಗಳಿಗಾಗಿ ದೆಹಲಿಗೆ ಬಂದಿದ್ದೇವೆ ಎಂದು ಶಾಸಕರ ಬಣ ಹೇಳಿಕೊಳ್ಳುತ್ತಿದೆ. ಆದರೆ ಒಳಗೊಳಗೆ ರಹಸ್ಯ ಕಾರ್ಯತಂತ್ರಗಳನ್ನು ಮುಂದುವರೆಸಿದ್ದಾರೆ.
ಮೊದಲ ಹಂತದಲ್ಲಿ ಆರು ಮಂದಿ ಶಾಸಕರು ತೆರಳಿದ್ದು, ಶನಿವಾರ ಮತ್ತು ಭಾನುವಾರ ಕೂಡ ಹಲವಾರು ಮಂದಿ ಶಾಸಕರು ತಂಡೋಪ ತಂಡವಾಗಿ ದೆಹಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ. ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲೇ ಉಳಿದು ತೆರೆಮರೆಯಲ್ಲಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಇದ್ದು, ಡಿ.ಕೆ.ಸುರೇಶ್ ಕಾರ್ಯತಂತ್ರದ ನೇತೃತ್ವವನ್ನು ವಹಿಸಿರುವುದಾಗಿ ಹೇಳಲಾಗುತ್ತಿದೆ.
ಕೃಷಿ ಸಚಿವ ಚೆಲುವರಾಯಸ್ವಾಮಿ, ಮೆಕ್ಕೆಜೋಳ ಸೇರಿದಂತೆ ಇತರ ಉತ್ಪನ್ನಗಳ ಬೆಲೆ ಕುಸಿತವಾಗಿದ್ದು, ಬೆಂಬಲ ಬೆಲೆ ಹೆಚ್ಚಳ ಹಾಗೂ ಮಾರುಕಟ್ಟೆ ಮಧ್ಯಪ್ರವೇಶದ ಬಗ್ಗೆ ಕೇಂದ್ರ ಸರ್ಕಾರದ ಕೃಷಿ ಸಚಿವರು ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಲು ದೆಹಲಿಗೆ ಬಂದಿರುವುದಾಗಿ ಹೇಳಿದ್ದಾರೆ. ತಾವು ಯಾವುದೇ ರಾಜಕೀಯ ಚರ್ಚೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಕೆಲಸ ಮುಗಿದ ತಕ್ಷಣ ವಾಪಸ್ ತೆರಳುತ್ತೇನೆ ಎಂದಿದ್ದಾರೆ.
ಎರಡನೇ ಮತ್ತು ಮೂರನೇ ಹಂತದ ಪ್ರವಾಸದಲ್ಲಿ ಡಿ.ಕೆ.ಶಿವಕುಮಾರ್ ಬೆಂಬಲಿಗರಾದ ಎಚ್.ಸಿ.ಬಾಲಕೃಷ್ಣ, ಇಕ್ಬಾಲ್ ಹುಸೇನ್, ಬಸವರಾಜ ಶಿವಗಂಗಾ, ಕದಲೂರು ಉದಯ್, ಎನ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸೇರಿದಂತೆ ಹಲವಾರು ಮಂದಿ ದೆಹಲಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತದೆ.
ಈ ಬೆಳವಣಿಗೆಯನ್ನು ಡಿ.ಕೆ.ಶಿವಕುಮಾರ್ ಅವರ ಬಲ ಪ್ರದರ್ಶನ ಎಂದು ಬಿಂಬಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಬೆಳಗ್ಗೆಯೇ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಬೇಕಿತ್ತು. ಆದರೆ ಅವರ ಕಾರ್ಯಕ್ರಮ ಮಧ್ಯಾಹ್ನಕ್ಕೆ ಮುಂದೂಡಿಕೆಯಾಗಿದೆ. ದೆಹಲಿಯಲ್ಲಿ ಬಿಡು ಬಿಟ್ಟಿರುವ ಶಾಸಕರನ್ನು ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುಜೆರ್ವಾಲ, ಕೆ.ಸಿ.ವೇಣುಗೋಪಾಲ್ ಅವರನ್ನು ಕೂಡ ಶಾಸಕರ ತಂಡ ಭೇಟಿ ಮಾಡುವ ಪ್ರಯತ್ನ ಮಾಡುತ್ತಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಮಯ ಕೇಳಲಾಗಿದೆ.
ಬಾಕಿ ಉಳಿದಿರುವ ಬಾಕಿ ಉಳಿದಿರುವ ಎರಡುವರೆ ವರ್ಷಗಳ ಅವಧಿಗೆ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು ಈ ಬಣ್ಣಗಳ ಪ್ರಬಲವಾದ ಹಕ್ಕೋತ್ತಾಯವಾಗಿದೆ.
ರಾಮನಗರದ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್, ದೆಹಲಿಗೆ ತೆರಳುವ ಶಾಸಕರು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಿ, ಡಿಕೆ ಶಿವಕುಮಾರ್ ಅವರಿಗೆ ಬಾಕಿ ಉಳಿದ ಅವಧಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳಲಿದ್ದೇವೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಏನೇ ಹೇಳಿಕೆ ನೀಡಿದ್ದರೂ ಆಂತರಿಕವಾಗಿ ಬಣ ಬಡಿದಾಟವಂತೂ ಸ್ಪಷ್ಟವಾಗಿ ಕಾಣುತ್ತಿದೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಬಲವಾಗಿ ಬೆಂಬಲಿಸುವ ಸಚಿವರಾದ ಸತೀಶ್ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಕೆ.ವೆಂಕಟೇಶ್, ದಿನೇಶ್ ಗುಂಡರಾವ್, ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಬೆಂಗಳೂರಿನಲ್ಲಿ ಭೋಜನಕೂಟದ ಸಭೆ ನಡೆಸಿ, ರಹಸ್ಯ ಚರ್ಚೆ ನಡೆಸಿದ್ದಾರೆ. ದೆಹಲಿಯಲ್ಲಿ ಅವರು ಏನೇ ಚರ್ಚೆ ಮಾಡಲಿ ನಾವು ಅದಕ್ಕೆ ಪ್ರತಿತಂತ್ರ ರೂಪಿಸಬೇಕು ಎಂದು ಭೋಜನಕೂಟದಲ್ಲಿ ಸಿದ್ದರಾಮಯ್ಯ ಆಪ್ತರು ಸಮಾಲೋಚನೆ ನಡೆದಿದ್ದಾರೆ ಎನ್ನಲಾಗಿದೆ.
ದೆಹಲಿ ಯಾತ್ರೆ ಮತ್ತು ಭೋಜನಕೂಟದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇಂದು ಬೆಳಗ್ಗೆ ಆಪ್ತ ಸಚಿವರ ಜೊತೆ ಪ್ರತ್ಯೇಕ ಮಾತೆಕತೆ ನಡೆಸಿ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿದ್ದಾರೆ. ನವೆಂಬರ್ ಕ್ರಾಂತಿ ನಡೆಯುವುದಿಲ್ಲ ಎಂದು ಕಾಂಗ್ರೆಸ್ಸಿಗರು ಪದೇ ಪದೇ ಹೇಳುತ್ತಿದ್ದ ಸಂದರ್ಭದಲ್ಲೇ ಡಿಕೆ ಶಿವಕುಮಾರ್ ಬಣದ ಶಾಸಕರ ದೆಹಲಿಯಾತ್ರೆ ಕ್ರಾಂತಿಯ ಮುನ್ಸೂಚನೆ ನೀಡಿದೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಆಭಾದಿತ ಎನ್ನುವ ಸನ್ನಿವೇಶದಿಂದ ಅಸ್ಥಿರತೆಯ ಅಲುಗಾಟ ಆರಂಭವಾದಂತಿದೆ.
