Friday, November 22, 2024
Homeರಾಜ್ಯಪ್ರಜ್ವಲ್‌ ಪಾಸ್‌‍ಪೋರ್ಟ್‌ ರದ್ದು ಮಾಡುವಂತೆ ಪ್ರಧಾನಿಗೆ ಸಿಎಂ 2ನೇ ಬಾರಿ ಪತ್ರ

ಪ್ರಜ್ವಲ್‌ ಪಾಸ್‌‍ಪೋರ್ಟ್‌ ರದ್ದು ಮಾಡುವಂತೆ ಪ್ರಧಾನಿಗೆ ಸಿಎಂ 2ನೇ ಬಾರಿ ಪತ್ರ

ಬೆಂಗಳೂರು, ಮೇ 23- ಪೆನ್‌ಡ್ರೈವ್‌ ಪ್ರಕರಣದ ಕೇಂದ್ರಬಿಂದು ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌‍ಪೋರ್ಟ್‌ ಅನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿಯವರಿಗೆ ಎರಡನೇ ಬಾರಿ ಪತ್ರ ಬರೆದಿದ್ದಾರೆ.

ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌‍ಪೋರ್ಟ್‌ ರದ್ದುಗೊಂಡರೆ ಅವರು ಭಾರತಕ್ಕೆ ಮರಳಬೇಕಾಗುತ್ತದೆ. ಅವರನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ವಿವರಿಸಿದ್ದಾರೆ. ಗಂಭೀರ ಸ್ವರೂಪದ ಸರಣಿ ಕೃತ್ಯಗಳಲ್ಲಿ ಪ್ರಜ್ವಲ್‌ ರೇವಣ್ಣ ಭಾಗಿಯಾಗಿರುವುದು ಜನರಿಗೆ ಘಾಸಿಯುಂಟು ಮಾಡಿರುವುದಷ್ಟೇ ಅಲ್ಲ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ.

ಪ್ರಜ್ವಲ್‌ ರೇವಣ್ಣ ಅವರ ಕೃತ್ಯ ನಾಚಿಕೆಗೇಡು. ಮಾಜಿ ಪ್ರಧಾನಿಗಳ ಮೊಮಗ ಮತ್ತೊಮೆ ಮರು ಆಯ್ಕೆ ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ.

ಕೃತ್ಯಕ್ಕೆ ಸಂಬಂಧಪಟ್ಟಂತೆ ಎಫ್‌ಐಆರ್‌ ದಾಖಲಾಗುವ ಕೆಲವೇ ಗಂಟೆಗಳ ಮೊದಲು ಹಾಗೂ ಲೋಕಸಭಾ ಚುನಾವಣೆ ಮುಗಿದ ಬಳಿಕ ಏ.22 ರಂದು ರಾಜತಾಂತ್ರಿಕ ಪಾಸ್‌‍ಪೋರ್ಟ್‌ (ಸಂಖ್ಯೆ ಬಿ 1135500) ಬಳಸಿ ಜರ್ಮನಿಗೆ ಪರಾರಿಯಾಗಿದ್ದಾರೆ. ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಅವರು ದೇಶ ಬಿಟ್ಟು ಪರಾರಿಯಾಗಲು ಮತ್ತು ಅಪರಾಧ ಪ್ರಕರಣಗಳ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ.

ಕರ್ನಾಟಕ ಸರ್ಕಾರ ಪ್ರಾಮಾಣಿಕ ಕ್ರಮ ಕೈಗೊಂಡು ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ ಮಾಡಿದೆ. ಮಹಿಳೆಯರ ಮೇಲೆ ಪ್ರಜ್ವಲ್‌ ರೇವಣ್ಣ ನಡೆಸಿದ್ದಾರೆ ಎನ್ನಲಾದ ದೌರ್ಜನ್ಯವನ್ನು ಎಸ್‌‍ಐಟಿ ತನಿಖೆ ನಡೆಸುತ್ತಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಬ್ಲೂ ಕಾರ್ನರ್‌ ನೋಟೀಸ್‌‍ ಕೂಡ ಜಾರಿಯಾಗಿದೆ.

ತನಿಖಾಧಿಕಾರಿಗಳು ಸೆಕ್ಷನ್‌ 41 ಎ ಸಿಆರ್‌ಪಿಸಿ ಅಡಿ ಎರಡು ನೋಟೀಸ್‌‍ಗಳನ್ನು ಜಾರಿಗೊಳಿಸಿದ್ದಾರೆ. ಪ್ರಜ್ವಲ್‌ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯರ ಘನತೆಗೆ ಕುಂದು ತಂದಿರುವುದು, ಅಶ್ಲೀಲ ವಿಡಿಯೋ ಸೇರಿದಂತೆ ಹಲವು ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತರಿಗೆ ಬೆದರಿಕೆ ಹಾಕಿರುವ ಆರೋಪವೂ ಸೇರಿದೆ.

ಆರೋಪಿಯನ್ನು ಬಂಧಿಸಿ ಕರೆತರಲು ಕೇಂದ್ರಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ. ಅನಗತ್ಯವಾದ ಶಿಷ್ಟಾಚಾರಗಳನ್ನು ಪ್ರಸ್ತಾಪಿಸಿ ಉದ್ದೇಶಪೂರಕವಾಗಿಯೇ ವಿಳಂಬ ಮಾಡಲಾಗುತ್ತಿದೆ. ಈ ಹಿಂದೆಯೇ ತಾವು ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿ ತಮಗೆ ಪತ್ರ ಬರೆದಿದ್ದು, ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೆ. ಕೃತ್ಯದ ಗಂಭೀರತೆಯನ್ನು ಅರ್ಥೈಸಿಕೊಂಡು ಆ ಕ್ಷಣಕ್ಕೆ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಮುಖ್ಯಮಂತ್ರಿ ಅಸಹನೆ ವ್ಯಕ್ತಪಡಿಸಿದ್ದಾರೆ.

ಈಗಲಾದರೂ ಇದನ್ನು ಅತ್ಯಂತ ಗಂಭೀರ ಎಂದು ಭಾವಿಸಿ ಕಾನೂನು ಕ್ರಮಗಳನ್ನು ಕೈಗೊಂಡು ಪಾಸ್‌‍ಪೋರ್ಟ್‌ ಆ್ಯಕ್ಟ್‌ 1967 ಸೆಕ್ಷನ್‌ 10 (3) (ಎಚ್‌) ಅಡಿ ಪ್ರಜ್ವಲ್‌ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌‍ಪೋರ್ಟ್‌ ಅನ್ನು ರದ್ದುಗೊಳಿಸಿ ಸಾರ್ವಜನಿಕ ಹಿತಾಸಕ್ತಿಯಿಂದ ಆತ ರಾಜ್ಯಕ್ಕೆ ಮರಳುವಂತೆ ಮಾಡಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

RELATED ARTICLES

Latest News