Sunday, September 8, 2024
Homeರಾಜ್ಯಚಡ್ಡಿ ಹಾಕಿಕೊಂಡು ಬರುವವರಿಗೂ ಸಹಕಾರಿ ಬ್ಯಾಂಕ್‌ಗಳು ಸಾಲ ಕೊಡಬೇಕು : ದಿನೇಶ್‌ ಗೂಳಿಗೌಡ

ಚಡ್ಡಿ ಹಾಕಿಕೊಂಡು ಬರುವವರಿಗೂ ಸಹಕಾರಿ ಬ್ಯಾಂಕ್‌ಗಳು ಸಾಲ ಕೊಡಬೇಕು : ದಿನೇಶ್‌ ಗೂಳಿಗೌಡ

ಬೆಂಗಳೂರು,ಜು.16- ಚಡ್ಡಿ ಹಾಕಿಕೊಂಡು ಬರುವವರಿಗೂ ಸಹಕಾರಿ ಬ್ಯಾಂಕ್‌ಗಳು ಸಾಲ ನೀಡುವಂತೆ ಸರ್ಕಾರ ಸಂಬಂಧಪಟ್ಟವರಿಗೆ ಸೂಕ್ತ ನಿರ್ಧಾರ ನೀಡಬೇಕೆಂದು ಕಾಂಗ್ರೆಸ್‌‍ ಸದಸ್ಯ ದಿನೇಶ್‌ ಗೂಳಿಗೌಡ ಪರಿಷತ್‌ನಲ್ಲಿ ಆಗ್ರಹಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಸಹಕಾರಿ ಬ್ಯಾಂಕ್‌ಗಳು ಇಂದು ಸಿ.ಟಿ.ರವಿ, ಭೋಜೇಗೌಡ ಅಂಥವರಿಗೆ ಮಾತ್ರ ಸಾಲ ಕೊಡುತ್ತಾರೆ. ಚಡ್ಡಿ ಹಾಕಿಕೊಂಡು ಬರುವವರಿಗೂ ಸಾಲ ಕೊಡಬೇಕು. ಈ ಹಿನ್ನಲೆಯಲ್ಲಿ ಸರ್ಕಾರ ಸಹಕಾರಿ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.

ಸರ್ಕಾರ ಸಹಕಾರಿ ಬ್ಯಾಂಕ್‌ಗಳ ಮೂಲಕ ರೈತರಿಗೆ ಶೇ.95ರಷ್ಟು ಸಾಲ ನೀಡಿದ್ದೇವೆ ಎಂದು ಹೇಳುತ್ತಿದೆ. ಕಳೆದ ವರ್ಷ ಕೃಷಿ ಇಲಾಖೆಯು 148 ಲಕ್ಷ ಟನ್‌ ಆಹಾರ ಉತ್ಪಾದಿಸುವ ಗುರಿ ಹೊಂದಿತ್ತು. ವಾಸ್ತವವಾಗಿ 128 ಲಕ್ಷ ಟನ್‌ ಆಹಾರ ಉತ್ಪಾದನೆಯಾಯಿತು. 20 ಲಕ್ಷ ಟನ್‌ ಉತ್ಪಾದನೆಯಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ವಿವರಿಸಿದರು.

ಅದೇ ರೀತಿ ಪ್ರಸಕ್ತ ವರ್ಷ 80 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಅವರು ಇಟ್ಟುಕೊಂಡಿದ್ದರು. ವಾಸ್ತವವಾಗಿ ಈವರೆಗೂ 60 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ನಮ ರೈತರಿಗೆ ಸಕಾಲಕ್ಕೆ ಸರಿಯಾಗಿ ಬೀಜ, ಗೊಬ್ಬರ, ಯಂತ್ರೋಪಕರಣಗಳು ಸಿಗುವಂತೆ ಸರ್ಕಾರ ಮುಂದಾಗಲಿ ಎಂದು ಒತ್ತಾಯಿಸಿದರು.

ಆಗ ಸಹಕಾರ ಸಚಿವ ರಾಜಣ್ಣ, ಪ್ರತಿ ವರ್ಷ ಸಹಕಾರಿ ಇಲಾಖೆಯಿಂದ ಇಂತಿಷ್ಟು ಸಾಲ ನೀಡಬೇಕೆಂಬ ಗುರಿ ಇಟ್ಟುಕೊಂಡಿದ್ದೇವೆ. ಈ ಬಾರಿ ಶೇ.95ರಷ್ಟು ಗುರಿ ಮುಟ್ಟಿದ್ದೇವೆ. ಇದಕ್ಕಾಗಿ ಸದಸ್ಯರು ನನಗೆ ಅಭಿನಂದನೆ ಸಲ್ಲಿಸಬೇಕೆಂದು ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಅವರು ಶೇ.100ರಷ್ಟು ಗುರಿ ತಲುಪಿಲ್ಲ ಎಂದು ಹೇಳುತ್ತಿರುವುದು ಆಶ್ಚರ್ಯವಾಗುತ್ತಿದೆ ಎಂದು ಹಾಸ್ಯ ಮಾಡಿದರು.

ರೈತರಿಗೆ ಅಲ್ಪಾವಧಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ 3ರಿಂದ 5 ಲಕ್ಷದವರೆಗೆ ಹಾಗೂ ಮಧ್ಯಮಾವಧಿ ಸಾಲವನ್ನ 10ರಿಂದ 15 ಲಕ್ಷ ನೀಡುತ್ತೇವೆ. ಅರ್ಜಿ ಹಾಕಿದ ಎಲ್ಲರಿಗೂ ಸಾಲ ನೀಡುವುದಿಲ್ಲ. ರೈತರಿಗೆ ಸಾಲ ನೀಡಬೇಕಾದರೆ ಕೆಲವು ಮಾನದಂಡಗಳಿರುತ್ತವೆ. ಅದರ ಪ್ರಕಾರವೇ ಅಧಿಕಾರಿಗಳು ಸಾಲ ನೀಡುತ್ತಾರೆ ಎಂದು ರಾಜಣ್ಣ ಸದನಕ್ಕೆ ತಿಳಿಸಿದರು.

ಸದಸ್ಯ ಶಾಂತರಾಮ್‌ ಸಿದ್ದಕ್ಕಿ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಲ್ಯಾಂಡ್‌ ಬ್ಯಾಂಕ್‌ ಮೂಲಕ ಅರಣ್ಯ ಪ್ರದೇಶಗಳಲ್ಲಿ ಕಿರು ಉತ್ಪನ್ನ ಬೆಳೆಯುವ ಅರಣ್ಯವಾಸಿಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಲು ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು.

ಅರಣ್ಯದಲ್ಲಿ ಸಿಗುವ ಕಿರು ಉತ್ಪನ್ನಗಳನ್ನು ಬಳಸಿಕೊಂಡು ಸಹಕಾರಿ ಬ್ಯಾಂಕ್‌ನಲ್ಲಿ ಮಾರಾಟ ಮಾಡಲು ಅವಕಾಶವಿದೆ. ಪ್ರಸ್ತುತ 11 ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಇದೆ. ಅರಣ್ಯಗಳಲ್ಲಿ ಉತ್ಪನ್ನಗಳನ್ನು ಬಳಸಲು ಕೆಲವು ನಿಬಂಧನೆಗಳು ಇವೆ. ಇದು ನಮ ವ್ಯಾಪ್ತಿಗೆ ಬರುವುದಿಲ್ಲ. ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಲು ಅವಕಾಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News