Friday, November 22, 2024
Homeರಾಜ್ಯಕೋಚಿಂಗ್ ಸೆಂಟರ್‌ಗಳನ್ನು ನಿಯಂತ್ರಿಸಲು ನಿಯಮಗಳನ್ನು ರೂಪಿಸುವುದು ಸೂಕ್ತವಲ್ಲ : ಶಾಸಕ ಪ್ರದೀಪ್ ಈಶ್ವರ್

ಕೋಚಿಂಗ್ ಸೆಂಟರ್‌ಗಳನ್ನು ನಿಯಂತ್ರಿಸಲು ನಿಯಮಗಳನ್ನು ರೂಪಿಸುವುದು ಸೂಕ್ತವಲ್ಲ : ಶಾಸಕ ಪ್ರದೀಪ್ ಈಶ್ವರ್

ಶಿವಮೊಗ್ಗ,ಜ.19- ಖಾಸಗಿ ಮನೆಪಾಠ ಸಂಸ್ಥೆಗಳು ಸರ್ಕಾರಕ್ಕೆ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದೆ. ಇವುಗಳ ವಿರುದ್ಧ ಕಠಿಣ ನಿಯಮಾವಳಿ ರೂಪಿಸುವುದು ಸೂಕ್ತವಲ್ಲ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕೋಚಿಂಗ್ ಸೆಂಟರ್‍ಗಳು ವಾರ್ಷಿಕ 6 ಸಾವಿರ ಕೋಟಿ ರೂ.ಗಳ ವಹಿವಾಟು ನಡೆಸುತ್ತಿದೆ. ಶೇ.18 ರಂತೆ ವರ್ಷಕ್ಕೆ ಸರಿಸುಮಾರು 1,100 ಕೋಟಿ ರೂ.ಗಳ ಜಿಎಸ್‍ಟಿ ಪಾವತಿಸುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಂದ 1 ಲಕ್ಷ ರೂ. ಶುಲ್ಕ ಪಡೆದರೆ ಅದರಲ್ಲಿ ತೆರಿಗೆ ಪಾವತಿಯ ನಂತರ 82 ಸಾವಿರ ರೂ. ಉಳಿಯಲಿದೆ. 70 ಸಾವಿರ ರೂ.ಗಳನ್ನು ವಿದ್ಯಾರ್ಥಿಗಳ ಕಲಿಕೆ ಮತ್ತು ಶ್ರೇಯೋಭಿವೃದ್ಧಿಗೆ ಬಳಸಲಾಗುತ್ತದೆ. ಉದಾಹರಣೆಗೆ 12 ಸಾವಿರ ರೂ. ಉಳಿದರೆ ಅದರ ಮೇಲೂ ಶೇ. 25ರಷ್ಟು ಆದಾಯ ತೆರಿಗೆ ಪಾವತಿಸಬೇಕು. ಹೀಗೆ ಲೆಕ್ಕ ಹಾಕಿದರೆ 100 ರೂ. ಲೆಕ್ಕಾಚಾರದಲ್ಲಿ 40 ರೂ.ಗಳನ್ನು ಕೋಚಿಂಗ್ ಸೆಂಟರ್‍ಗಳು ಸರ್ಕಾರಕ್ಕೆ ಮರುಪಾವತಿಸುತ್ತವೆ. ಆದರೆ ಶಾಲಾ-ಕಾಲೇಜುಗಳು ಟ್ರಸ್ಟ್‍ನಡಿ ನಡೆಯುವುದರಿಂದ ಸರ್ಕಾರಕ್ಕೆ ಯಾವುದೇ ತೆರಿಗೆ ಪಾವತಿಸುವುದಿಲ್ಲ ಎಂದರು.

ಹಿಂದೂಗಳ ಭಾವನೆಗಳಿಗೆ ಧಕ್ಕೆ : ಕ್ಷಮೆ ಯಾಚಿಸಿದ ನಟಿ ನಯನತಾರಾ

ಕೋಚಿಂಗ್ ಸೆಂಟರ್‍ಗಳನ್ನು ನಿಯಂತ್ರಿಸಲು ಕಠಿಣ ನಿಯಮಾವಳಿಗಳನ್ನು ರೂಪಿಸುವುದು ಸೂಕ್ತವಲ್ಲ. ಆದರೂ ಸರ್ಕಾರ ನಿಯಮ ರೂಪಿಸಿದ್ದೇ ಆದರೆ ಅದನ್ನು ಪಾಲಿಸುವುದು ಎಲ್ಲರ ಕರ್ತವ್ಯವಾಗಲಿದೆ ಎಂದು ಹೇಳಿದರು. ಹಿಂದಿನ ಸರ್ಕಾರ ಪಠ್ಯ ಪರಿಷ್ಕರಣೆಗೆ ಕೈ ಹಾಕುವುದು ತಪ್ಪು. ತಮ್ಮ ಸರ್ಕಾರ ಆ ಲೋಪವನ್ನು ಸರಿಪಡಿಸಿದೆ.

ಶಿಕ್ಷಣ ವ್ಯವಸ್ಥೆಯಡಿ ರಾಜಕೀಯ ಬೆರೆಸುವುದು ಎಂದಿಗೂ ಒಳ್ಳೆಯದಲ್ಲ. ಸರ್ಕಾರಿ ಹಾಸ್ಟೆಲ್‍ಗಳಲ್ಲಿ ಓದುವವರನ್ನು ರ್ಯಾಂಕ್ ವಿದ್ಯಾರ್ಥಿಗಳನ್ನಾಗಿ ಮಾಡುವ ಸಾಧ್ಯತೆಯಿದೆ. ಆದರೆ ಅದಕ್ಕೂ ಮುನ್ನ ಮನೋಧೋರಣೆಯನ್ನು ಬದಲಾಯಿಸಬೇಕು. 1 ಲಕ್ಷ ರೂ. ಶುಲ್ಕ ಪಾವತಿಸಿ ಕೋಚಿಂಗ್ ಸೆಂಟರ್‍ಗೆ ಬರುವ ವಿದ್ಯಾರ್ಥಿಗಳನ್ನೇ ನಿಯಂತ್ರಿಸಲು ಅವಕಾಶವಿದ್ದಾಗ ಊಟ, ವಸತಿ ಎಲ್ಲವನ್ನೂ ಉಚಿತವಾಗಿ ನೀಡುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಏಕೆ ನಿಯಂತ್ರಿಸಲು ಸಾಧ್ಯವಿಲ್ಲ. ಹಾಸ್ಟೆಲ್ ವಾರ್ಡ್‍ನ್‍ಗಳು, ಶಿಕ್ಷಕರು ಈ ರೀತಿಯ ಧೋರಣೆಯಿಂದ ಹೊರಬರಬೇಕು ಎಂದು ಹೇಳಿದರು.

ತಮ್ಮ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಿಂದ ತಲಾ 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಸಿಇಟಿಯಲ್ಲಿ ರ್ಯಾಂಕ್ ಗಳಿಸುವಂತೆ ಮಾಡುವ ಸೂಪರ್-60 ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಮಕ್ಕಳು ಸರ್ಕಾರಿ ಶಾಲೆಗಳತ್ತ ಆಕರ್ಷಿತರಾಗಲಿದ್ದಾರೆ ಎಂದರು. ಮಕ್ಕಳು ಮನೆಯಲ್ಲಿ ಓದುವುದು ಕಡಿಮೆ. ಅದಕ್ಕಾಗಿ ಖಾಸಗಿ ಮಾದರಿಯಲ್ಲೇ ವಸತಿ ಸಹಿತ ತರಬೇತಿ ಹಾಗೂ ಕಲಿಕಾ ಕೇಂದ್ರಗಳನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

ಅಮೃತ ಕಾಲಕ್ಕಿಂತ ಶಿಕ್ಷಾ ಕಾಲ ಬೇಕಿದೆ : ಖರ್ಗೆ

ಐದಾರು ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ನಾಲ್ಕೈದು ಶಾಲೆಗಳನ್ನು ಒಟ್ಟುಗೂಡಿಸಿ, ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮಾಡಲಾಗುತ್ತಿದೆ. ವಿಲೀನಗೊಳ್ಳುವ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಭಾವಿಸಬಾರದು ಎಂದರು.

RELATED ARTICLES

Latest News