Saturday, August 2, 2025
Homeರಾಜ್ಯಶ್ರಾವಣಕ್ಕೆ ದುಬಾರಿಯಾದ ತೆಂಗಿನಕಾಯಿ

ಶ್ರಾವಣಕ್ಕೆ ದುಬಾರಿಯಾದ ತೆಂಗಿನಕಾಯಿ

Coconuts are expensive for Festival

ಬೆಂಗಳೂರು,ಜು.31– ಶ್ರಾವಣಮಾಸ ಆರಂಭವಾಗಿದ್ದು, ಸಾಲುಸಾಲು ಹಬ್ಬಗಳು ಬಂದಿದ್ದು, ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ತೆಂಗಿನಕಾಯಿ ಬೆಲೆ ಗ್ರಾಹಕರ ಕೈ ಸುಡುವಂತಾಗಿದೆ.

ವರಮಹಾಲಕ್ಷ್ಮಿ, ಶ್ರೀ ಕೃಷ್ಣ ಜನಾಷ್ಠಮಿ, ಗೌರಿ-ಗಣೇಶ ಹಬ್ಬ ಸೇರಿದಂತೆ ಶುಭ ಸಮಾರಂಭಗಳು ಹೆಚ್ಚು ನಡೆಯುತ್ತಿದ್ದು, ತೆಂಗಿನಕಾಯಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.ಗೃಹಿಣಿಯರು ವರಮಹಾಲಕ್ಷ್ಮಿ ಹಬ್ಬಕ್ಕೆ ತೆಂಗಿನಕಾಯಿ ಖರೀದಿಯಲ್ಲಿ ತೊಡಗಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿಗೆ 70 ರೂ.ಗೆ ಮಾರಾಟವಾಗುತ್ತಿದ್ದರೆ, ಬಿಡಿಬಿಡಿಯಾಗಿ 50-60 ರೂ.ಗೆ ಮಾರಾಟವಾಗುತ್ತಿದೆ. ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಮುಂಜಾಗ್ರತಾ ಕ್ರಮವಾಗಿ ಈಗಿನಿಂದಲೇ ಖರೀದಿ ಮಾಡಲಾಗುತ್ತಿದೆ.

ಆಷಾಢದಲ್ಲಿ ಕೊಂಚ ಇಳಿಕೆ ಕಂಡಿದ್ದು, ತೆಂಗಿನಕಾಯಿ ಶ್ರಾವಣ ಪ್ರಾರಂಭವಾಗುತ್ತಿದ್ದಂತೆ ಮತ್ತೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಸಗಟು ಖರೀದಿಯಲ್ಲಿ ಪ್ರತಿ ಕೆಜಿಗೆ 50 ರಿಂದ 60 ರೂ.ಗೆ ಮಾರಾಟವಾಗುತ್ತಿದೆ.

ಸಾಲುಸಾಲು ಹಬ್ಬಗಳಿಗೆ ತೆಂಗಿನಕಾಯಿ ಅನಿವಾರ್ಯವಾಗಿದ್ದು, ಬೇಡಿಕೆ ಹೆಚ್ಚಾಗಿದೆ. ತೋಟಗಳಲ್ಲಿ ಇಳುವರಿ ಕುಂಠಿತವಾಗಿ, ಬೇಡಿಕೆ ಹೆಚ್ಚಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಮಾಲು ಬಾರದಿರುವುದರಿಂದ ಸಾಮಾನ್ಯವಾಗಿ ಬೆಲೆ ಹೆಚ್ಚಳವಾಗಿದೆ.

ಬೆಲೆ ಹೆಚ್ಚಳಕ್ಕೆ ಕಾರಣ :
ತೆಂಗನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳಾದ ತುಮಕೂರು, ರಾಮನಗರ, ಹಾಸನ, ಅರಸೀಕೆರೆ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಕಳೆದ ಎರಡು ವರ್ಷದ ಹಿಂದೆ ಮಳೆ ಕೊರತೆಯಿಂದಾಗಿ ತೆಂಗಿನ ಮರಗಳು ಒಣಗಿ ಹೋಗಿ ಇಳುವರಿ ಕುಂಠಿತ ಒಂದೆಡೆಯಾದರೆ, ಮತ್ತೊಂದೆಡೆ ನುಸಿ ಪೀಡೆ, ಕಾಂಡ ಕೊರೆತ ವ್ಯಾಪಕವಾಗಿ ಹರಡುತ್ತಿದ್ದು, ಇಳುವರಿಯಲ್ಲಿ ಭಾರೀ ಇಳಿಕೆಯಾಗಿದೆ.

ಇದರ ಜೊತೆಗೆ ತೆಂಗು ಪ್ರದೇಶವನ್ನು ಅಡಿಕೆ ಗಿಡಗಳು ಆವರಿಸಿದ್ದು, ರೈತರು ಹೆಚ್ಚಾಗಿ ಅಡಿಕೆ ಗಿಡಗಳತ್ತ ಒಲವು ತೋರುತ್ತಿದ್ದು, ತೆಂಗಿನ ಗಿಡಗಳಿಗೆ ಆರೈಕೆ ಮಾಡದ ಕಾರಣ ಇಳುವರಿ ಕುಂಠಿತವಾಗಿದೆ.ಈ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ತೆಂಗಿನಕಾಯಿ, ಎಳನೀರು, ಕೊಬ್ಬರಿ ಹಾಗೂ ಚಿಪ್ಪಿಗೆ ಭಾರೀ ಬೆಲೆ ಬಂದಿದ್ದು, ಒಂದೆಡೆ ಇಳುವರಿ ಇಲ್ಲದೆ ಬೆಲೆ ಕೇಳಿಯೇ ರೈತರು ಖುಷಿ ಪಡುವಂತಾಗಿದೆ.

RELATED ARTICLES

Latest News