ಬೆಂಗಳೂರು, ಏ.29– ಹೊರ ರಾಜ್ಯದ ಕಟ್ಟಡ ಕೂಲಿ ಕಾರ್ಮಿಕನೊಬ್ಬ ಕ್ಷುಲ್ಲಕ ವಿಚಾರಕ್ಕೆ ತನ್ನ ಸಹೋದ್ಯೋಗಿಯ ಎದೆ ಮತ್ತು ಪಕ್ಕೆಲುಬುಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಜಾರ್ಖಂಡ್ ಮೂಲದ ಪವನ್ (55) ಎಂದು ಗುರುತಿಸಲಾಗಿದೆ. ಅದೇ ರಾಜ್ಯದ ಆರೋಪಿ ಗಣೇಶ್‌ಧಾರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಇಬ್ಬರು ಜಾರ್ಖಂಡ್ ರಾಜ್ಯದ ಒಂದೇ ಊರಿನವರು. ಇಬ್ಬರು ಕಾಡುಗೋಡಿ ಸಮೀಪದ ಸೀಗೇಹಳ್ಳಿಯಲ್ಲಿ ಕಿಯಾ ಹೋಮ್ಸೌ ಅಪಾರ್ಟ್‌ಮೆಂಟ್ ನಿರ್ಮಾಣ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರಾಗಿದ್ದರು.
ನಿನ್ನೆ ಇಬ್ಬರಿಗೂ ವಾರದ ರಜೆ ಇದ್ದ ಪರಿಣಾಮ ಹೊರ ಹೋಗಿ ಮದ್ಯ ಸೇವನೆ ಮಾಡಿ ಬಂದು ಸಂಜೆ 4 ಗಂಟೆ ಸುಮಾರಿಗೆ ಲೇಬರ್ ಶೆಡ್‌ನಲ್ಲಿ ವಿರಮಿಸುತ್ತ ಮೊಬೈಲ್‌ನಲ್ಲಿ ಸಿನಿಮಾ ನೋಡುತ್ತಿದ್ದರು.
ಈ ಸಂದರ್ಭದಲ್ಲಿ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿ ಪವನ್ ಗಣೇಶ್‌ಧಾರ್ ಕೆನ್ನೆಗೆ ಬಾರಿಸಿದ್ದ ಇದರಿಂದ ಕೋಪಗೊಂಡ ಗಣೇಶ್ ಚಾಕು ತಂದು ಪವನ್ ಎದೆ ಮತ್ತು ಪಕ್ಕೆಲುಬಿಗೆ ಚುಚ್ಚಿ ಪರಾರಿಯಾಗಿದ್ದ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಪವನ್‌ನನ್ನು ಅಲ್ಲಿದ್ದ ಕಾರ್ಮಿಕರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತಂತೆ ಕಟ್ಟಡ ನಿರ್ಮಾಣ ಕಾಮಗಾರಿಯ ಸೂಪರ್‌ವೈಸರ್ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಕಾಡುಗೋಡಿ ಪೊಲೀಸರು ಗಣೇಶ್‌ಧಾರ್‌ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಕಾಡುಗೋಡಿ ಠಾಣೆ ಪೊಲೀಸರು ತನಿಖೆಕೈಗೊಂಡಿದ್ದಾರೆ.