ಮುಂಬೈ, ಮಾ. 24: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಹಾಸ್ಯನಟ ಕುನಾಲ್ ಕಮ್ರಾ ವಿರುದ್ಧ ಮುಂಬೈ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಮಾತ್ರವಲ್ಲ ತಡರಾತ್ರಿ, ಶಿವಸೇನೆ ಸದಸ್ಯರು ಖಾರ್ನ ಹ್ಯಾಬಿಟಾಟ್ ಕಾಮಿಡಿ ಕ್ಲಬ್ ಮೇಲೆ ದಾಳಿ ಮಾಡಿ ಹಾನಿ ಮಾಡಿದರು. ಅಲ್ಲಿ ಶಿಂಧೆ’ ವಿರುದ್ಧ ಗದ್ದರ್ (ದೇಶದ್ರೋಹಿ) ನಿಂದನೆಯೊಂದಿಗೆ ಕಮ್ರಾ ಅವರ ಪ್ರದರ್ಶನವನ್ನು ಚಿತ್ರೀಕರಿಸಲಾಯಿತು. ಜೊತೆಗೆ ಕ್ಲಬ್ ಇರುವ ಹೋಟೆಲ್ ಅನ್ನು ಹಾನಿಗೊಳಿಸಲಾಯಿತು.
ಕಮ್ರಾ ಅವರ ಪ್ರದರ್ಶನ ನಡೆದ ಹ್ಯಾಬಿಟೇಟ್, ವಿವಾದಾತ್ಮಕ ಇಂಡಿಯಾಸ್ ಗಾಟ್ ಲೇಟೆಂಟ್ ಪ್ರದರ್ಶನವನ್ನು ಚಿತ್ರೀಕರಿಸಿದ ಅದೇ ಸ್ಥಳವಾಗಿದೆ. ಶಿಂಧೆ ವಿರುದ್ಧ ಕಮ್ರಾ ಮಾನಹಾನಿಕರ ಪದಗಳನ್ನು ಬಳಸಿದ್ದಾರೆ ಎಂದು ತೋರಿಸುವ ವೀಡಿಯೊ ವೈರಲ್ ಆದ ನಂತರ, ಶಿವಸೇನೆ ಶಾಸಕ ಮುರ್ಜಿ ಪಟೇಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ, 353 (1) (ಬಿ) (ಸಾರ್ವಜನಿಕ ಕಿಡಿಗೇಡಿತನಕ್ಕೆ ಅನುಕೂಲವಾಗುವ ಹೇಳಿಕೆಗಳು) ಮತ್ತು 356 (2) (ಮಾನಹಾನಿ) ಸೇರಿದಂತೆ ವಿವಿಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಕ್ರಮಗಳ ಅಡಿಯಲ್ಲಿ ಕಮ್ರಾ ವಿರುದ್ಧ ಇಂದು ಮುಂಜಾನೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಂಐಡಿಸಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.