ನವದೆಹಲಿ,ಜೂ.1-ತೈಲ ಮಾರುಕಟ್ಟೆ ಕಂಪನಿಗಳು ಜುಲೈ 1ರಿಂದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ (ವಾಣಿಜ್ಯ ಗ್ಯಾಸ್‌ಸಿಲಿಂಡರ್)ಗಳ ಬೆಲೆಯನ್ನು ಕಡಿಮೆ ಮಾಡಿದೆ. ಹೊಸ ದರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದರೊಂದಿಗೆ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 30 ರೂ. ಕಡಿತಗೊಂಡು 1,726 ರೂ.ಗೆ ತಲುಪಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಸಿದ್ದರಿಂದ ಹೋಟೆಲ್ ಉದ್ಯಮಿಗಳಿಗೆ ಅನುಕೂಲವಾಗಿದೆ. ಆದರೆ ಗೃಹ ಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಣಿಜ್ಯ ಎಲ್‌ಪಿಜಿ ಬೆಲೆಗಳ ಕಡಿತವು ಈ ಸಿಲಿಂಡರ್‌ಗಳನ್ನೇ ಅವಲಂಬಿಸಿರುವ ವ್‌ಯವಹಾರಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜಾಗತಿಕ ತೈಲ ಮಾರುಕಟ್ಟೆಯ ಪ್ರವೃತ್ತಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವುದಾಗಿ ಮತ್ತು ದೇಶಾದ್ಯಂತದ ಗ್ರಾಹಕರಿಗೆ ನ್ಯಾಯಯುತ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಹೊಂದಾಣಿಕೆಗಳನ್ನು ಮಾಡುವುದಾಗಿ ಒಎಂಸಿಗಳು ಭರವಸೆ ನೀಡಿವೆ.
ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಬೆಲೆ 1,646 ರೂ. ಇದೆ. ಅಂದರೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 30 ರೂ. ಇಳಿಕೆಯಾಗಿದೆ. ಮುಂಬೈ ಮತ್ತು ಚೆನ್ನೈನಲ್ಲಿ 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಕ್ರಮವಾಗಿ 1,598 ಮತ್ತು 1,809.5 ರೂ.ಗೆ ಇಳಿದಿದೆ. ಎರಡೂ ನಗರಗಳಲ್ಲಿ 31 ರೂ. ಇಳಿಕೆಯಾಗಿದೆ. ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಇಂಡಿಯನ್ ಆಯಿಲ್ ಪ್ರಕಾರ, ಕೋಲ್ಕತ್ತಾದಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆ 829 ರೂ. ಇದೆ. ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಕ್ರಮವಾಗಿ 803 ರೂ. 802.5 ರೂ. ಮತ್ತು 818.5 ರೂ. ಆಗಿದೆ. ಆದರೆ ಉಜ್ವಲ ಯೋಜನೆಯಡಿ ಫಲಾನುಭವಿಗಳು 14.2 ಕೆಜಿ ಅಡುಗೆ ಅನಿಲ ಸಿಲಿಂಡರ್‌ನ್ನು ಸ್ವಲ್ಪ ಕಡಿಮೆ ಬೆಲೆಗೆ ಖರೀದಿಸಬಹುದು.
ಅವರಿಗೆ 300 ರೂ. ಕಡಿಮೆ ಸಿಗುತ್ತದೆ. ಅಂದರೆ ಕೋಲ್ಕತ್ತಾ, ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಕ್ರಮವಾಗಿ ರೂ.529 503 ರೂ. 502.5 ಮತ್ತು 518.5 ರೂ. ಆಗಿದೆ.
ಸತತ ಇಳಿಕೆ: ಕಳೆದ ಕೆಲವು ತಿಂಗಳಿಂದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಲಾಗುತ್ತಿದೆ. ಜೂ.1ರಂದು ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 69.50 ರೂ. ಕಡಿಮೆ ಆಗಿತ್ತು. ಮೇ 1ರಂದು ದರ ಪರಿಷ್ಕರಿಸಿ 19 ರೂ. ಇಳಿಕೆ ಮಾಡಲಾಗಿತ್ತು. ಏಪ್ರಿಲ್‌ನಲ್ಲೂ 19 ಕೆಜಿಯ ಸಿಲಿಂಡರ್ ಬೆಲೆಯನ್ನು 30.50 ರೂ. ಇಳಿಸಲಾಗಿತ್ತು.
ತೈಲ ಮಾರುಕಟ್ಟೆ ಕಂಪನಿಗಳು ಹಿಂದಿನ ಘೋಷಣೆಯನ್ನು ಮಾರ್ಚ್ 1ರಂದು ಮಾಡಿದ್ದು, ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪ್ಪಿಜಿ) ಸಿಲಿಂಡರ್‌ಗಳ ದರಗಳನ್ನು ಹೆಚ್ಚಿಸಿದ್ದವು. ಆ ಸಮಯದಲ್ಲಿ, ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳನ್ನು 25 ರೂ. ಹೆಚ್ಚಿಸಿದ್ದವು.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಅಂತಾರಾಷ್ಟ್ರೀಯ ಇಂಧನದ ಸರಾಸರಿ ಬೆಲೆ ಮತ್ತು ವಿದೇಶಿ ವಿನಿಮಯ ದರದ ಆಧಾರದ ಮೇಲೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳು 1ನೇ ತಾರೀಖಿನಂದು ಪರಿಷ್ಕರಿಸುತ್ತವೆ.