ಬೆಂಗಳೂರು,ಅ.1- ವಾಣಿಜ್ಯ ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 209 ರೂ. ದರ ಏರಿಕೆ ಮಾಡಲಾಗಿದೆ. ಒಟ್ಟಾರೆ ಬೆಲೆ 1731.50 ರೂ. ಆಗಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಓಎಂಸಿ) 19 ಕೆಜಿ ತೂಕದ ವಾಣಿಜ್ಯ ಎಲ್‍ಪಿಜಿ ಗ್ಯಾಸ್ ಸಿಲಿಂಡರ್‍ಗಳ ಬೆಲೆಯನ್ನು ದಿಢೀರ್ ಏರಿಕೆ ಮಾಡಿದ್ದು, ಇಂದಿನಿಂದಲೇ ಈ ಬೆಲೆಗಳು ಜಾರಿಗೆ ಬರಲಿವೆ.
ಸೆಪ್ಟೆಂಬರ್ 1ರ ಆರಂಭದಲ್ಲಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಯನ್ನು ಒಎಂಸಿ 158 ರೂ. ಕಡಿತಗೊಳಿಸಿತ್ತು. ಆದರೆ ಇದಾದ ಕೇವಲ ಒಂದು ತಿಂಗಳ ಬಳಿಕ ಈ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ಈ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,522 ರೂ.ನಿಂದ 1,731.50 ರೂ.ಗೆ ಏರಿಕೆಯಾಗಿದೆ.
ಅರಣ್ಯ ಇಲಾಖೆಯ ಕಾರ್ಯಕ್ಕೆ ರಾಜ್ಯಪಾಲರ ಮೆಚ್ಚುಗೆ
ವಾಣಿಜ್ಯ ಮತ್ತು ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ. ಇದಕ್ಕೂ ಮೊದಲು ಆಗಸ್ಟ್‍ನಲ್ಲಿಯೂ ಆಯಿಲ್ ಮಾರ್ಕೆಟಿಂಗ್ ಕಂಪನಿಯು ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಯನ್ನು 99.75 ರೂ. ಇಳಿಕೆ ಮಾಡಿತ್ತು. ಆದರೆ, ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.
ಇತ್ತೀಚೆಗಷ್ಟೇ ಮೋದಿ ಸರ್ಕಾರ ಜನಸಾಮಾನ್ಯರಿಗೆ ಗೃಹ ಬಳಕೆಯ ಸಿಲಿಂಡರ್ ದರ ಇಳಿಕೆ ಮಾಡಿ ಗುಡ್‍ನ್ಯೂಸ್ ನೀಡಿತ್ತು. ಆದರೆ ಈಗ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ದರವನ್ನು ಒಮ್ಮೆಲೇ 209 ರೂ.ನಷ್ಟು ಏರಿಕೆ ಮಾಡಿದ್ದು, ಇದರಿಂದ ಈಗಾಗಲೇ ದಿನಸಿ ಧಾನ್ಯಗಳ ಬೆಲೆ ಏರಿಕೆಯಿಂದ ಸಂಕಷ್ಟಕ್ಕೀಡಾಗಿರುವ ಹೊಟೇಲ್ ಹಾಗೂ ಇತರ ಆಹಾರೋದ್ಯಮ ನಡೆಸುತ್ತಿರುವವರಿಗೆ ಮತ್ತಷ್ಟು ಸಂಕಟವಾಗಲಿದೆ.