Tuesday, November 4, 2025
Homeಬೆಂಗಳೂರುಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಪರಿಹಾರೋಪಾಯ ರೂಪಿಸುವಂತೆ ಆಯುಕ್ತರ ಸೂಚನೆ

ಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಪರಿಹಾರೋಪಾಯ ರೂಪಿಸುವಂತೆ ಆಯುಕ್ತರ ಸೂಚನೆ

Commissioner instructs to devise solutions to ease traffic congestion in Bengaluru

ಬೆಂಗಳೂರು, ನ.4- ಸಂಚಾರ ದಟ್ಟಣೆ ನಿವಾರಣೆಗೆ ಪಾಲಿಕೆ, ಮೆಟ್ರೋ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳು ಸಮನ್ವಯದಿಂದ ಪರಿಹಾರೋಪಾಯಗಳನ್ನು ರೂಪಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದರು.

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಬಳ್ಳಾರಿ ರಸ್ತೆಯ ಮೆಟ್ರೋ ಕಾಮಗಾರಿ ಪೂರ್ಣಗೊಂಡ ಪ್ರದೇಶಗಳಲ್ಲಿ ಇರುವ ಭಗ್ನಾವಶೇಷಗಳು ಮತ್ತು ಅನುಪಯುಕ್ತ ಕಬ್ಬಿಣ ವಸ್ತುಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಮೆಟ್ರೋ ಅಧಿಕಾರಿಗಳಿಗೆ ಸೂಚಿಸಿದರು.

- Advertisement -

ಹೆಬ್ಬಾಳ ಮೇಲ್ಸೇತುವೆಗೆ ಡಾಂಬರೀಕರಣ ಮಾಡಿ: ಹೆಬ್ಬಾಳ ಮೇಲ್ಸೇತುವೆಯ ಮೇಲ್ಭಾಗ ಹಾಳಾಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಆದ್ದರಿಂದ ತಕ್ಷಣವೇ ಸಂಪೂರ್ಣ ಮೇಲ್ಸೇತುವೆಗೆ ಡಾಂಬರೀಕರಣ ಮಾಡಿ ವಾಹನ ಸಂಚಾರ ಸುಗಮಗೊಳಿಸಲು ಆದೇಶಿದರು.

ರಸ್ತೆ ಮಧ್ಯಭಾಗದ ಸ್ಲ್ಯಾಬ್‌ ಸರಿಪಡಿಸಿ:ಹೆಬ್ಬಾಳ ದಿಂದ ಕೊಡಿಗೆಹಳ್ಳಿ ಕಡೆಗೆ ಸಂಪರ್ಕ ನೀಡುವ ಹಯಾತ್‌ ಸೆಂಟರ್‌ ಮುಂಭಾಗದ ರಸ್ತೆಯ ಮಧ್ಯಭಾಗದಲ್ಲಿರುವ ಸ್ಲ್ಯಾಬ್‌ ಸರಿಯಾಗಿ ಅಳವಡಿಸದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಅದನ್ನು ತಕ್ಷಣ ಸರಿಪಡಿಸಲು ಸೂಚಿಸಲಾಯಿತು.ಕೊಡಿಗೆಹಳ್ಳಿ ಸಿಗ್ನಲ್‌ನ ನಂತರ ಕ್ರಾಸ್‌‍ ಕಲ್ವರ್ಟ್‌ ಬಳಿ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು ಸಮಸ್ಯೆ ಉಂಟಾಗುತ್ತದೆ. ಕಲ್ವರ್ಟ್‌ನ ಹೂಳನ್ನು ತೆಗೆದು, ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚಿಸಿದರು.

ಸರ್ವೀಸ್‌‍ ರಸ್ತೆಯಿಂದ ಮುಖ್ಯ ರಸ್ತೆಗೆ ಸಂಪರ್ಕ ನೀಡಿ:ಬಳ್ಳಾರಿ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ಸರ್ವೀಸ್‌‍ ರಸ್ತೆಯಿಂದ ಮುಖ್ಯ ರಸ್ತೆಗೆ ಒಳಹೊಕ್ಕು-ಹೊರಹೊಮ್ಮುವ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಬ್ಯಾಟರಾಯನಪುರದಲ್ಲಿ ಅನುಷ್ಠಾನಗೊಂಡಿದೆ. ಇದೇ ಮಾದರಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿಯೂ ಇದೇ ರೀತಿಯ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಅನುಷ್ಠಾನಗೊಳಿಸಲು ಸೂಚಿಸಿದರು.
ಸೈನೇಜ್‌ ಬೋರ್ಡ್‌ಗಳನ್ನು ಅಳವಡಿಸಿ:ಸರ್ವೀಸ್‌‍ ರಸ್ತೆ ಮತ್ತು ಮುಖ್ಯ ರಸ್ತೆ ಸಂಪರ್ಕ ಬಿಂದುಗಳಲ್ಲಿಯೂ ನಾಗರಿಕರ ಸೌಲಭ್ಯಕ್ಕಾಗಿ ಸೂಚನಾ ಫಲಕಗಳನ್ನು (ಸೈನೇಜ್‌
ಬೋರ್ಡ್‌ಗಳು) ಅಳವಡಿಸಲು ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಕೈವಾಕ್‌ ನಿರ್ಮಾಣ ಸಾಧ್ಯತೆ ಪರಿಶೀಲಿಸಿ:ಬ್ಯಾಟರಾಯನಪುರ ಜಂಕ್ಷನ್‌ನಲ್ಲಿ ಸರ್ವೀಸ್‌‍ ರಸ್ತೆ ಮತ್ತು ಮುಖ್ಯ ರಸ್ತೆ ನಡುವೆ ಬ್ಯಾರಿಕೇಡ್‌ ಇರುವುದರಿಂದ ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಅಲ್ಲಿ ಸ್ಕೈವಾಕ್‌ ನಿರ್ಮಿಸಲು ಸಾಧ್ಯತೆಯನ್ನು ಪರಿಶೀಲಿಸಲು ಸೂಚಿಸಿದರು.

ಮುಖ್ಯ ರಸ್ತೆ ಮತ್ತು ಸರ್ವೀಸ್‌‍ ರಸ್ತೆಯ ಮಧ್ಯದಲ್ಲಿರುವ ಚರಂಡಿಯ ಬಹುತೇಕ ಭಾಗದಲ್ಲಿ ಸ್ಲ್ಯಾಬ್‌ಗಳು ಹಾಳಾಗಿವೆ. ಅವುಗಳನ್ನು ದುರಸ್ತಿ ಮಾಡಿ, ಚರಂಡಿಯಲ್ಲಿರುವ ಹೂಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸೂಚಿಸಿದರು.

ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ:ಯಲಹಂಕ ರೈಲ್ವೆ ಸೇತುವೆ ಬಳಿ ಸೈಡ್‌ ಡ್ರೈನ್‌ ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿರುವುದರಿಂದ ಮಳೆಯ ಸಮಯದಲ್ಲಿ ನೀರು ರಸ್ತೆಯಲ್ಲಿ ನಿಂತುಕೊಳ್ಳುತ್ತದೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಪರಿಶೀಲನೆಯ ವೇಳೆ ಯಲಹಂಕ ರೈತರ ಸಂತೆ ಬಳಿ ಸೈಡ್‌ ಡ್ರೈನ್‌ ನಿರ್ಮಿಸಲು, ಬಾಗಲೂರು ಕ್ರಾಸ್‌‍ನಲ್ಲಿ ಜಲಾವೃತ, ರಸ್ತೆ ದುರಸ್ತಿ ಹಾಗೂ ಡ್ರೈನ್‌ ಸ್ವಚ್ಛತೆಗೆ, ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು, ಅಲ್ಲಾಳಸಂದ್ರ ಗೇಟ್‌ ಬಳಿ ಎನ್‌ಎಚ್‌ಎಐ ಮೇಲ್ಸೇತುವೆ ಕೆಳಭಾಗದ ಖಾಲಿ ಜಾಗವನ್ನು ಸುಂದರೀಕರಣಗೊಳಿಸಲು ಇದೇ ಸಂದರ್ಭದಲ್ಲಿ ತಿಳಿಸಿದರು.

- Advertisement -
RELATED ARTICLES

Latest News