ಬೆಂಗಳೂರು, ಸೆ. 10- ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಾಥ ವಾಹನಗಳನ್ನು ಗುರುತಿಸಿ ಸಂಚಾರಿ ಇಲಾಖೆಗೆ ಪಟ್ಟಿ ನೀಡಲು ಆಯುಕ್ತ ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ತುಂಬಾ ದಿನಗಳಿಂದ ರಸ್ತೆ ಬದಿಯೇ ನಿಂತಿರುವಂತಹ ಅನಾಥ ವಾಹನಗಳಿಂದ ಸುಗಮ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಆಗಲಿದೆ. ಈ ನಿಟ್ಟಿನಲ್ಲಿ ರಸ್ತೆಗಳ ಮೇಲೆ ಇರುವ ಅನಾಥ ವಾಹನಗಳ ಪಟ್ಟಿಯನ್ನು ತಯಾರಿಸಿ, ಆ ಪಟ್ಟಿಯನ್ನು ಸಂಚಾರಿ ಇಲಾಖೆಗೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಸ್ಟರಿಂಗ್ ಸೆಂಟರ್ ಗೆ ಭೇಟಿ: ವಸಂತ ನಗರದ ಮೌಂಟ್ ಕಾರ್ಮೆಲ್ ಬಳಿಯಿರುವ ಆಟೋ ಟಿಪ್ಪರ್ ಮಾಸ್ಟರಿಂಗ್ ಪಾಯಿಂಟ್‌ಗೆ ಭೇಟಿ ನೀಡಿ 22 ಆಟೋಗಳು, 5 ಕಾಂಪ್ಯಾಕ್ಟರ್‌ಗಳ ಚಾಲಕ ಮತ್ತು ಸಿಬ್ಬಂದಿಗಳ ಜೊತೆ ಮಾತನಾಡಿ, ಸುರಕ್ಷಾ ಸಾಮಗ್ರಿಗಳನ್ನು ಬಳಸಿಕೊಂಡು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸೂಚನೆ ನೀಡಿದರು.
ಸ್ವಚ್ಛವಾಗಿಡದ ವಾಣಿಜ್ಯ ಸಂಸ್ಥೆಗಳಿಗೆ ನೋಟೀಸ್ ನೀಡಿ:
ಹೋಟೆಲ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ತಮ್ಮ ಆವರಣದಲ್ಲಿ ಯಾವುದೇ ಕಸ ಅಥವಾ ಡೆಬ್ರಿಸ್ ಇರದಂತೆ ಸ್ವಚ್ಛವಾಗಿಟ್ಟುಕೊಳ್ಳಲು ಜಾಗೃತಿ ಮೂಡಿಸಬೇಕು. ಅದನ್ನು ಪಾಲಿಸದಿದ್ದರೆ ಕಠಿಣವಾಗಿ ದಂಡ ವಿಧಿಸಬೇಕು. ಅದರ ಜೊತೆಗೆ ಎಲ್ಲಾ ವಾಣಿಜ್ಯ ಸಂಸ್ಥೆಗಳಿಗೆ ತಮ್ಮ ಆವರಣವನ್ನು ಸ್ವಚ್ಛವಾಗಿ ಕಾಯ್ದುಕೊಳ್ಳುವಂತೆ ನೋಟಿಸ್‌ಗಳನ್ನು ನೀಡಬೇಕು ಎಂದು ಅವರು ಸಲಹೆ ನೀಡಿದರು.
ಪಾಲಿಕೆ ಆಸ್ತಿ ಹಾನಿಗೊಳಿಸಿದವರಿಗೆ ದಂಡ ವಿಧಿಸಿ:ಕಟ್ಟಡ ನಿರ್ಮಾಣ ಮಾಡುವವರು ಪಾದಚಾರಿ ಮಾರ್ಗದ ಮೇಲೆ ಕಟ್ಟಡ ಭಗ್ನಾವಶೇಷಗಳು ಅಥವಾ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹಾಕಬಾರದು. ಪಾದಚಾರಿ ಮಾರ್ಗದಲ್ಲಿ ಹಾಕಿ ಪಾಲಿಕೆ ಆಸ್ತಿಯನ್ನು ಹಾನಿಗೊಳಿಸಿದವರಿಗೆ ದಂಡ ವಿಧಿಸಲು ಸೂಚನೆ ನೀಡಿದರು.
ಸಡಿಲ ಕಲ್ಲುಗಳು, ಪಾದಚಾರಿ ಮಾರ್ಗದ ಮೇಲೆ ಇಟ್ಟಿರುವ ಕಲ್ಲುಗಳನ್ನು ತೆಗೆದು ಹಾಕಬೇಕು.ಪ್ರಮುಖ ಜಂಕ್ಷನ್ ಗಳ ಸುತ್ತಲಿನ 200 ಮೀಟರ್ ರಸ್ತೆ ಸುಸ್ತಿತಿಯಲ್ಲಿಡಬೇಕು:ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಸಂಚಾರಿ ಜಂಕ್ಷನ್‌ನಲ್ಲಿ ಸುಗಮವಾದ ಸಂಚಾರ ಇರಬೇಕು. ಈ ಸಂಬಂಧ ಎಲ್ಲಾ ಪ್ರಮುಖ ಜಂಕ್ಷನ್ ಗಳಿಗೆ ಸಂಪರ್ಕ ಕಲ್ಪಿಸಿವ ರಸ್ತೆಗಳ 200 ಮೀಟರ್ ದೂರದವರೆಗೆ ಗುಂಡಿಗಳು, ಮೇಲ್ಮೈ ಪದರ ಹಾಗೂ ಯಾವುದೇ ಅಸಮತೋಲನಗಳಿಲ್ಲದಂತೆ ವಾಹನಗಳು ಸುಗಮವಾಗಿ ಸಂಚರಿಸುವಂತೆ ಮಾಡಲು ಸೂಚನೆ ನೀಡಿದರು.
ಪೇ ಅಂಡ್ ಪಾರ್ಕ್ ವ್ಯವಸ್ಥೆಯನ್ನು ಜಾರಿಗೆ ಕ್ರಮ:ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ ಮತ್ತು ಜಾಸ್ಮಾ ದೇವಿ ಭವನ ರಸ್ತೆಗಳಲ್ಲಿ ಕಾರು ಪಾರ್ಕಿಂಗ್ ಮಾಡಿರುವುದನ್ನು ಗಮನಿಸಿದರು. ಇಂತಹ ದೀರ್ಘವಾಗಿ ಪಾರ್ಕಿಂಗ್ ಮಾಡಿರುವ ರಸ್ತೆಗಳ ಪಟ್ಟಿಯನ್ನು ಗುರುತಿಸಿ, ಪಾರ್ಕಿಂಗ್ ನೀತಿಯನ್ನು ಬಳಸಿಕೊಂಡು ಪೇ ಅಂಡ್ ಪಾರ್ಕ್ ವ್ಯವಸ್ಥೆಯನ್ನು ಜಾರಿಗೆ ತರಲು ಕ್ರಮವಹಿಸುವಂತೆ ಸೂಚಿಸಿದರು.
ಇಂದಿರಾ ಅಡುಗೆ ಕೋಣೆಯಲ್ಲಿ ಶುಚಿತ್ವ ಕಾಪಾಡಿ: ಜಸ್ಮಾ ಭವನ ರಸ್ತೆಯಲ್ಲಿರುವ ಇಂದಿರಾ ಅಡುಗೆ ಕೋಣೆಗೆ ಭೇಟಿ ನೀಡಿ, ಅಡುಗೆ ಮಾಡುವ ಕಂಟೇನರ್‌ಗಳು ನಿತ್ಯ ಮುಚ್ಚಿಡಬೇಕು. ಅಡುಗೆ ಮಾಡುವ ಸ್ಥಳದಲ್ಲಿ ಶುಚಿತ್ವ ಕಾಯ್ದುಕೊಳ್ಳಲು ಸೂಚನೆ ನೀಡಿದರು.