ಬೆಂಗಳೂರು,ಅ.21- ನಗರದಲ್ಲಿ ಮಳೆ ನೀರು ನಿಲ್ಲುವ ಪ್ರದೇಶಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಮಿತಿ ರಚಿಸುವುದಾಗಿ ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಳೆ ಬಂದು ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಸರಿಪಡಿಸಲು ಒಂದು ಸಮಿತಿಯನ್ನು ರಚಿಸಲಾಗುತ್ತಿದೆ.
ಭವಿಷ್ಯದಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಹೆಚ್ಚು ಮಳೆ ಬಂದು ಸಮಸ್ಯೆ ಎದುರಾಗುವ ಸ್ಥಳಗಳನ್ನು ನಾಗರಿಕರು ಅಧಿಕೃತವಾಗಿಯೇ ನಮಗೆ ತಿಳಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯರು ಲಿಖಿತವಾಗಿ ದೂರು ನೀಡಿ ಸ್ಥಳದ ವಿವರ ಮತ್ತು ಫೋಟೊಗಳನ್ನು ಲಗತ್ತಿಸಿದರೆ ಒಂದೊಂದಾಗಿ ಅದನ್ನು ಪರಿಶೀಲಿಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಕೆಳ ವರ್ಗದ ಪ್ರದೇಶಗಳಲ್ಲಿ ಈ ರೀತಿಯ ಸಮಸ್ಯೆಗಳು ಮುಂದೆ ಕೂಡ ಘಟಿಸುವ ಸಾಧ್ಯತೆ ಇದೆ. ಅದಕ್ಕಾಗಿ ನಾವು ಶಾಶ್ವತವಾದ ಪರಿಹಾರ ಹುಡುಕಬೇಕಿದೆ ಎಂದು ಹೇಳಿದರು.
ಇಂದು ಸಂಜೆ ತಾವು ಖುದ್ದಾಗಿ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಹೆಚ್ಚು ಮಳೆ ಬಂದ ಹಿನ್ನೆಲೆಯಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಇಲ್ಲಿ ಯಾರದು ತಪ್ಪು ಎಂದು ಹೊಣೆ ಮಾಡುವುದು ಸರಿಯಲ್ಲ. ಬಿಬಿಎಂಪಿಯ ನಿಯಂತ್ರಣ ಕೊಠಡಿಯಲ್ಲಿ ಸಿಬ್ಬಂದಿಗಳು ವಿಶ್ರಾಂತಿ ರಹಿತವಾಗಿ ಶ್ರಮಿಸುತ್ತಿದ್ದಾರೆ. ಭವಿಷ್ಯದಲ್ಲಿ ಯೋಜನಾಬದ್ಧವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ನಾಗರಿಕರು ಈ ವಿಷಯದಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮಗೊಂಡಿದೆ. ಸಚಿವರ ಅಭಿಪ್ರಾಯಗಳನ್ನು ಆಲಿಸಲಾಗಿದೆ. ಜವಾಬ್ದಾರಿಯನ್ನು ನೀಡಲಾಗಿದೆ. ಪಟ್ಟಿಯನ್ನು ಶೀಘ್ರವೇ ದೆಹಲಿಗೆ ಕಳುಹಿಸಲಾಗುವುದು. ಎಷ್ಟು ಜನರ ಹೆಸರುಗಳನ್ನು ಕಳುಹಿಸುತ್ತೇವೆ ಎಂದು ತಾವು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.