Sunday, May 4, 2025
Homeರಾಜ್ಯನಕ್ಸಲ್‌ ನಿಗ್ರಹ ಪಡೆ ಮಾದರಿಯಲ್ಲಿ ಕೋಮು ಗಲಭೆ ನಿಗ್ರಹ ಪಡೆ ರಚನೆ : ಗೃಹ ಸಚಿವ...

ನಕ್ಸಲ್‌ ನಿಗ್ರಹ ಪಡೆ ಮಾದರಿಯಲ್ಲಿ ಕೋಮು ಗಲಭೆ ನಿಗ್ರಹ ಪಡೆ ರಚನೆ : ಗೃಹ ಸಚಿವ ಪರಮೇಶ್ವರ್‌

Communal Riot Control Force formed on the model of Naxal Control Force: Parameshwar

ಬೆಂಗಳೂರು, ಮೇ 3- ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೋಮು ಸೌಹಾರ್ದ ರಕ್ಷಣೆಗಾಗಿ ನಕ್ಸಲ್‌ ನಿಗ್ರಹ ಪಡೆಯ ಮಾದರಿಯಲ್ಲಿ ಪ್ರತ್ಯೇಕವಾದ ಕೋಮು ಗಲಭೆ ನಿಗ್ರಹ ಪಡೆಯನ್ನು ರಚನೆ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಮಂಗಳೂರಿನಲ್ಲಿಂದು ಪೊಲೀಸ್‌‍ ಅಧಿಕಾರಿಗಳು ಹಾಗೂ ಕಾಂಗ್ರೆಸ್‌‍ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕಾಂಗ್ರೆಸ್‌‍ ಪಕ್ಷ ಕರಾವಳಿ ಭಾಗದಲ್ಲಿ ಶಾಂತಿ, ಸೌಹಾರ್ದಕ್ಕಾಗಿ ಪಾದಯಾತ್ರೆ ನಡೆಸಿತ್ತು. ಅದರ ಬಳಿಕ ಅನೇಕ ವರ್ಷ ಶಾಂತಿಯ ವಾತಾವರಣ ಇತ್ತು. ಈಗ ಮತ್ತೆ ಕೋಮು ಘಟನೆಗಳು ಮರುಕಳಿಸುತ್ತಿವೆ. ಇದರ ಹಿಂದೆ ಅನೇಕ ಶಕ್ತಿಗಳು ಅಡಗಿವೆ, ಅವುಗಳನ್ನು ಹುಟ್ಟಡಗಿಸದೇ, ಬಿಡುವುದಿಲ್ಲ ಎಂದರು.

ಇನ್ನೂ ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಕಾರಣಕ್ಕೆ ಹೊಸದಾಗಿ ಕೋಮುವಾದಿ ಚಟುವಟಿಕೆಗಳ ನಿಯಂತ್ರಣಕ್ಕಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗುತ್ತದೆ. ರಾಜ್ಯದಲ್ಲಿ ನಕ್ಸಲರು ಶರಣಾಗತರಾಗಿದ್ದಾರೆ. ಈಗ ನಕ್ಸಲ್‌ ನಿಗ್ರಹ ಪಡೆ ಅಗತ್ಯ ಇಲ್ಲ. ಅದಕ್ಕಾಗಿ ಅದನ್ನು ರದ್ದು ಮಾಡುತ್ತಿದ್ದೇವೆ. ಅದೇ ಮಾದರಿಯಲ್ಲಿ ಆಂಟಿ ಕಮ್ಯೂನಲ್‌ ಪೋರ್ಸ್‌ ಅನ್ನು ಪ್ರತ್ಯೇಕವಾಗಿ ರಚಿಸಲಾಗುತ್ತದೆ. ಆ ಪಡೆ ರೆಗ್ಯೂಲರ್‌ ಪೊಲೀಸ್‌‍ ಜೊತೆಯಲ್ಲಿ ಕೆಲಸ ಮಾಡಲಿದೆ ಎಂದು ಹೇಳಿದರು.

ಯಾರು ಕೋಮುವಾದಿ ಚಟುವಟಿಕೆ ತೊಡಗಿಸಿಕೊಳ್ಳುತ್ತಾರೋ ಹಾಗೂ ಯಾರು ಪ್ರಚೋದನೆ ನೀಡುತ್ತಾರೋ ಅವರ ವಿರುದ್ದ ಕ್ರಮ ಕೈಗೊಳ್ಳಲು ಪ್ರತ್ಯೇಕ ಪಡೆಗೆ ಎಲ್ಲಾ ರೀತಿಯ ಅಧಿಕಾರಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಶಾಂತಿ ಹಾಳು ಮಾಡುವ ದುಷ್ಟ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ. ಎರಡು ಜಿಲ್ಲೆಯಲ್ಲಿ ಶಾಂತಿ ಕಾಪಾಡಲಾಗುವುದು. ಯಾರು ಎಷ್ಟೇ ದೊಡ್ಡವರು ಇರಲಿ, ಯಾವ ಪಕ್ಷದವರೇ ಇರಲಿ ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಇನ್ನೂ ಮುಂದೆ ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧವೂ ನಿರ್ಧಾಕ್ಷ್ಯಿಣ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಒಂದು ಕಾಲದಲ್ಲಿ ಕರಾವಳಿ ಜಿಲ್ಲೆಗಳಿಗೆ ಪ್ರವಾಸಿಗರಿಗೆ ಬರಲು ಖುಷಿಯಾಗುತ್ತಿತ್ತು, ಈಗ ಅಂತಹ ವಾತಾವರಣ ಕಾಣುತ್ತಿಲ್ಲ. ಮತ್ತೆ ಅದೇ ಪರಿಸ್ಥಿತಿಯನ್ನು ಮರಳಿ ತರಲು ಉಕ್ಕಿನ ಹಸ್ತದೊಂದಿಗೆ ಕಾರ್ಯಚರಣೆ ನಡೆಸುತ್ತೇವೆ ಎಂದರು.

ಇದೇ ಕಾರ್ಯಪಡೆಯನ್ನು ಮಂಗಳೂರು ನಗರ ವ್ಯಾಪ್ತಿಗೆ ಸೀಮಿತವಾಗಿ ಘೋಷಣೆ ಮಾಡಲಾಗಿತ್ತು. ಈಗಾಗಲೇ ಠಾಣೆಗಳಲ್ಲಿ ಕೆಲಸ ಮಾಡುವವರನ್ನೇ ಬಳಕೆ ಮಾಡಿಕೊಂಡು ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದ್ದೇವು. ಈಗ ಹೊಸದಾಗಿ ಎರಡು ಜಿಲ್ಲೆಗಳಿಗೆ ಪ್ರತ್ಯೇಕ ಪಡೆಯನ್ನೇ ಒಂದೆರಡು ವಾರಗಳ ಒಳಗಾಗಿ ರಚಿಸಲಾಗುತ್ತದೆ. ಬೇರೆ ಜಿಲ್ಲೆಗಳಲ್ಲಿ ಈ ರೀತಿಯ ಕಾರ್ಯಾಪಡೆಯ ಅಗತ್ಯ ಕಂಡು ಬಂದಿಲ್ಲ ಎಂದರು.

ಐಜಿ ಹಂತದ ಅಧಿಕಾರಿ ಪಡೆಯ ನೇತೃತ್ವದಲ್ಲಿ ಕಾರ್ಯಪಡೆ ಕೆಲಸ ಮಾಡಲಿದೆ. ನಕ್ಸಲ್‌ ನಿಗ್ರಹ ಪಡೆಯ ಕೆಲಸ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೋಮು ನಿಗ್ರಹ ಪಡೆಗೆ ಆಯ್ದುಕೊಳ್ಳಲಾಗುವುದು, ಉಳಿದ ಅಧಿಕಾರಿಗಳನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.
ರೆಗ್ಯೂಲರ್‌ ಪೊಲೀಸರು ಕಾರ್ಯಪಡೆ ಜೊತೆಗೆ ಕೆಲಸ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸುವುದು, ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳುತ್ತಾರೆ.

ಕೊಲೆಯಾದ ಸುಹಾಸ್‌‍ ಶೆಟ್ಟಿ ರೌಡಿಶೀಟರ್‌ನನ್ನು ಹಿರೋ ಮಾಡುವ ಕೆಲಸವನ್ನು ಸರ್ಕಾರ ಅಥವಾ ಪೊಲೀಸರು ಮಾಡಿಲ್ಲ. ಅವರು ಯಾವ ಪಕ್ಷಕ್ಕೆ ಸೇರಿದ್ದಾರೋ ಆ ಪಕ್ಷದವರು ಹೀರೋ ಮಾಡಿದ್ದಾರೆ. ಎರಡು ಕೊಲೆ ಪ್ರಕರಣ ಸೇರಿದಂತೆ ಐದು ಪ್ರಕರಣಗಳ ಆರೋಪಿಯಾಗಿದ್ದ ಕ್ರಿಮಿನಲ್‌ನನ್ನು ವೈಭವೀಕರಿಸಬೇಕೇ ಬೇಡವೇ ಎಂಬ ಬಗ್ಗೆ ಆ ಪಕ್ಷದವರಿಗೆ ಅರಿವಿರಬೇಕು ಎಂದು ಬಿಜೆಪಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಷೇಧಾಜ್ಞೆ ಜಾರಿ ಮಾಡಿ, ಶವದ ಹಿಂದೆ ಮುಂದೆ ಪೊಲೀಸ್‌‍ ಕಾವಲು ಹಾಕಲಾಗಿತ್ತು. ಇನ್ನೂ ಮುಂದೆ ಯಾವುದೇ ಪಕ್ಷದವರಾಗಲಿ, ಧರ್ಮದವರಾಗಲಿ ಪ್ರಚೋದನಕಾರಿ ಹೇಳಿಕೆ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಹಿಂದೆ ಆಗಿರುವುದು ಬೇರೆ, ಆದರೆ ಇನ್ನೂ ಮುಂದೆ ಈ ರೀತಿ ನಡೆಯಲು ಬಿಡುವುದಿಲ್ಲ ಎಂದರು.

ಸುಹಾಸ್‌‍ ಕೊಲೆ ಪ್ರಕರಣದಲ್ಲಿ ಬಂಧಿತರು ಯಾವ ರೀತಿ ಹೇಳಿಕೆ ನೀಡುತ್ತಾರೆ ಎಂದು ಕಾದು ನೋಡುತ್ತಿದ್ದೇವೆ. ನಾವೇ ಕೊಲೆ ಮಾಡಿದ್ದೇವೆ ಎನ್ನಬಹುದು ಅಥವಾ ಬೇರೆ ಯಾರೋ ಮಾಡಿಸಿದ್ದಾರೆ ಎನ್ನಬಹುದು ಅಥವಾ ದ್ವೇಷಕ್ಕಾಗಿ ಕೊಲೆ ಮಾಡಿದ್ದೇವೆ ಎಂದು ಹೇಳುತ್ತಾರೋ ನೋಡುತ್ತೇವೆ ಎಂದರು.

ಕೆಲ ದಿನಗಳ ಹಿಂದೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೂರು ಜನರನ್ನು ಬಂಧಿಸಲಾಗಿದೆ. ಗುಂಪು ಹಲ್ಲೆಯ ಮೂಲಕ ಹತ್ಯೆಯಾದ ಅಶ್ರಫ್‌ ಪ್ರಕರಣದಲ್ಲಿ 21 ಜನರನ್ನು ಬಂಧಿಸಲಾಗಿದೆ. ಈ ಪ್ರಕರಣದ ತನಿಖೆಗೆ ಎಸ್‌‍ ಐ ಟಿ ರಚನೆ ಮಾಡಬೇಕು ಎಂದು ಮಾಜಿ ಸಚಿವ ರಮಾನಾಥ್‌ ರೈ ಅವರ ಬೇಡಿಕೆಯನ್ನು ಪರಿಗಣಿಸಲಾಗಿದೆ. ಕೋಮು ನಿಗ್ರಹ ಪಡೆಯನ್ನು ಇದೇ ಕಾರಣಕ್ಕೆ ರಚನೆ ಮಾಡಲಾಗುತ್ತದೆ ಎಂದರು.

ಸುಹಾಸ್‌‍ ಶೆಟ್ಟಿ ರೌಡಿಶೀಟರ್‌ ಆಗಿದ್ದರಿಂದ ಆತನಿಗೆ ಜೀವ ಬೆದರಿಕೆ ಇತ್ತು ಎಂದು ಪೊಲೀಸರು ಆತನನ್ನು ಕರೆದುಎಚ್ಚರಿಕೆ ನೀಡಿದ್ದರು. ಅಶ್ರಫ್‌ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಲೆ ಆರೋಪಿ ನೀಡಿದ ಹೇಳಿಕೆಯಲ್ಲಿ ಆಶ್ರಫ್‌ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದ ಎಂದು ಹೇಳಿದ್ದಾನೆ. ಆದರೆ ಆತ ಕೂಗಿದ್ದಾನೋ ಇಲ್ಲವೋ ಗೊತ್ತಿಲ್ಲ, ತನಿಖೆ ನಡೆಯುತ್ತಿದೆ ಎಂದರು.ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಸುಭದ್ರವಾಗಿದೆ. ಈ ವರ್ಷ ನಡೆದಿರುವ ಕೊಲೆಗಳಲ್ಲಿ ಶೇ.99ರಷ್ಟು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಮೇ 5ರವರೆಗೆ ನಿಷೇಧಾಜ್ಞೆ ಮುಂದುವರಿಕೆ
ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆಯಿಂದಾಗಿ ಪ್ರಕ್ಷುಬ್ಧ ಸ್ಥಿತಿಯಲ್ಲಿದ್ದ ಮಂಗಳೂರು ಇಂದು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಬೆಳಗ್ಗೆಯಿಂದ ಬಸ್‌, ಆಟೋರಿಕ್ಷಾ ಸಂಚಾರ ಎಂದಿನಂತೆ ಸಂಚರಿಸುತ್ತಿದ್ದುದು ಕಂಡುಬಂತು. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಾರಿಗೆ ತಂದಿರುವ ನಿಷೇಧಾಜ್ಞೆಯನ್ನು ಮೇ 5ರವರೆಗೆ ಮುಂದೂಡಲಾಗಿದೆ ಎಂದು ಜಿಲ್ಲಾ ಕಾರಿ ಮುಲ್ಲೈ ಮುಗಿಲನ್‌ ಅವರು ಆದೇಶ ಹೊರಡಿಸಿದ್ದಾರೆ.

RELATED ARTICLES

Latest News