Tuesday, September 16, 2025
Homeರಾಜ್ಯಜಾತಿ ಗಣತಿಗೂ ಮುನ್ನ ಒಗ್ಗೂಡಲು ಮುಂದಾದ ಪ್ರಬಲ ಸಮುದಾಯಗಳು

ಜಾತಿ ಗಣತಿಗೂ ಮುನ್ನ ಒಗ್ಗೂಡಲು ಮುಂದಾದ ಪ್ರಬಲ ಸಮುದಾಯಗಳು

communities set to unite before caste census

ಬೆಂಗಳೂರು, ಸೆ.16-ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ.22ರಿಂದ ನಡೆಸಲಾಗುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಿದ್ಧತೆ ಒಂದೆಡೆ ಸಾಗಿದ್ದರೆ, ಮತ್ತೊಂದೆಡೆ ಪ್ರಬಲ ಸಮುದಾಯಗಳಲ್ಲಿ ತಳಮಳವನ್ನುಂಟು ಮಾಡಿದೆ. ಇದರಿಂದ ಜಾತಿ, ಉಪ ಜಾತಿಗಳನ್ನು ಒಗ್ಗೂಡಿಸಿ ಪ್ರಮುಖ ಜಾತಿಯಡಿ ಗುರುತಿಸಿಕೊಳ್ಳುವ ಪ್ರಯತ್ನ ಬಿರುಸಾಗಿದೆ.

ಪ್ರಮುಖ ಜಾತಿಗಳು ಉಪ ಜಾತಿಗಳನ್ನು ಒಗ್ಗೂಡಿಸಿ ಒಂದೇ ಜಾತಿಯಡಿ ತರಲು ಹರ ಸಾಹಸ ಪಡಲಾಗುತ್ತಿದೆೆ. ಪ್ರಬಲ ಜಾತಿಗಳಲ್ಲಿನ ಹಲವು ಉಪ ಜಾತಿ ಹಾಗೂ ಪಂಗಡಗಳು ಆಯೋಗ ಬಿಡುಗಡೆ ಮಾಡಿರುವ ಜಾತಿವಾರು ಪಟ್ಟಿಯಲ್ಲಿ ಸೇರಿವೆ. ಒಂದು ವೇಳೆ ಅವು ಸ್ವತಂತ್ರ ಜಾತಿಗಳನ್ನಾಗಿ ಸಮೀಕ್ಷೆ ವೇಳೆ ದಾಖಲಿಸಿದರೆ, ಒಗ್ಗೂಡ ಬೇಕಾದ ಸಮುದಾಯಗಳು ಹರಿದು ಹಂಚಿ ಹೋಗಲಿವೆ. ಇದರಿಂದ ಸಂಖ್ಯಾಬಲದಲ್ಲಿ ಹೆಚ್ಚಿರಬೇಕಾದ ಜಾತಿಗಳು ಸಣ್ಣ, ಸಣ್ಣ ಜಾತಿಗಳಾಗಿ ಗುರುತಿಸಿಕೊಳ್ಳಬೇಕಾಗುತ್ತದೆ ಎಂಬ ಆತಂಕ ಎದುರಾಗಿದೆ.

ಅಲ್ಲದೆ, ಸರ್ಕಾರದ ಮೀಸಲಾತಿ, ಯೋಜನೆ, ಕಲ್ಯಾಣ ಕಾರ್ಯಕ್ರಗಳಲ್ಲಿ ನಿರೀಕ್ಷಿತ ಪ್ರಯೋಜನ ದೊರೆಯದಿರಬಹದು ಎಂಬ ಲೆಕ್ಕಾಚಾರವನ್ನು ಆಯಾ ಜಾತಿಯ ಪ್ರಮುಖರು ಮಾಡತೊಡಗಿದ್ದಾರೆ. ತಮ ತಮ ಜಾತಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಎಚ್ಚರ ವಹಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಜಾತಿ ಗಣತಿಗೂ ಮುನ್ನ ಎಚ್ಚೆತ್ತಿರುವ ಪ್ರಮುಖ ಸಮುದಾಯಗಳು ಸಮೀಕ್ಷೆ ಸಂದರ್ಭದಲ್ಲಿ ಎಚ್ಚರ ವಹಿಸುವಂತೆ ನಿರಂತರವಾಗಿ ತಿಳುವಳಿಕೆ ನೀಡುತ್ತಿವೆ. ಇದು ಆಯೋಗ ನಡೆಸುವ ಸಮೀಕ್ಷೆಗೂ ಸಹಕಾರಿಯಾಗಲಿದೆ.

ಒಂದು ವೇಳೆ ಸಮೀಕ್ಷೆಯ ನಂತರ ಸಂಖ್ಯಾಬಲದಲ್ಲಿ ಇಳಿಕೆಯಾದರೆ, ರಾಜಕೀಯದ ಮೇಲೂ ಪರಿಣಾಮ ಬೀರಬಹುದೆಂಬ ಆತಂಕ ಕಾಡತೊಡಗಿದ್ದು, ಆಯಾ ಸಮುದಾಯಗಳ ಪ್ರಮುಖರು, ಸಂಘಗಳು, ಮಠಾಧೀಶರು ತಮ ತಮ ಸಮುದಾಯಗಳ ಹಿತ ಕಾಪಾಡಲು ಮುಂದಾಗಿದ್ದಾರೆ. ಪ್ರಮುಖವಾದ ಒಂದೇ ಜಾತಿಯಡಿ ಎಲ್ಲರನ್ನೂ ಒಗ್ಗೂಡಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.

ಜಿಲ್ಲೆ, ತಾಲ್ಲೂಕು, ಹೋಬಳಿ, ಪಟ್ಟಣ ಮಟ್ಟದಲ್ಲಿ ಸಭೆ, ಸಮಾರಂಭಗಳನ್ನು ನಡೆಸುವ ಮೂಲಕ ತಮ ಜನಾಂಗದವರಿಗೆ ಜಾತಿ ಗಣತಿ ಕುರಿತು ಸೂಕ್ತ ಮಾಹಿತಿ ನೀಡಿ ಅರಿವು ಮೂಡಿಸಲಾಗುತ್ತಿದೆ. ಸಮೀಕ್ಷೆ ಸಂದರ್ಭದಲ್ಲಿ ವಾಸ್ತವ ಮಾಹಿತಿಯನ್ನು ಮಾತ್ರ ನೀಡಬೇಕು ಎಂದು ಮನವಿ ಮಾಡಲಾಗುತ್ತಿದೆ. ಸಮೀಕ್ಷೆ ಆರಂಭಕ್ಕೂ ಮುನ್ನ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬ ಕುರಿತು ವಿವಿಧ ಮಾಧ್ಯಮಗಳ ಮೂಲಕ ಅದರಲ್ಲೂ ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ.

ಕೆಲವೊಂದು ಒಳಪಂಗಡಗಳು ಮುಖ್ಯ ಜಾತಿಯಡಿ ಸೇರಲು ಇಚ್ಛಿಸಿವೆ, ಮತ್ತೆ ಕೆಲವೊಂದು ಜಾತಿಗಳು ಸ್ವತಂತ್ರವಾಗಿ ಗುರುತಿಸಿಕೊಳ್ಳುವ ಉದ್ದೇಶ ಹೊಂದಿವೆ. ಇದು ಆಯಾ ಜನಾಂಗದ ನಾಯಕರು, ಮುಖಂಡರಿಗೆ ತಲೆ ನೋವಾಗಿದ್ದು, ಮನವೊಲಿಕೆ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿವೆ.

ಅದರಲ್ಲೂ ಪ್ರಬಲ ಸಮುದಾಯವಾಗಿರುವ ಒಕ್ಕಲಿಗ ಮತ್ತು ಲಿಂಗಾಯತ-ವೀರಶೈವ, ಸಮುದಾಯಗಳು ಮುಂಚೂಣಿಯಲ್ಲಿದ್ದು, ಯಾರೊಬ್ಬರೂ ಸಮೀಕ್ಷೆಯಿಂದ ಹೊರಗುಳಿಯಬಾರದು ಎಂಬ ಗುರಿಯೊಂದಿಗೆ ಎಲ್ಲೆಡೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ.

ಲಿಂಗಾಯತ ಸಮುದಾಯದಲ್ಲಿ ನೋಳಂಬ, ಸಾದರ, ರೆಡ್ಡಿ, ಗಾಣಿಗ, ಪಂಚಮಸಾಲಿ, ಗೌಡಲಿಂಗಾಯಿತ ಸೇರಿದಂತೆ ಹತ್ತಾರು ಜಾತಿ-ಉಪಜಾತಿಗಳಿವೆ. ಅದೇ ರೀತಿ ಒಕ್ಕಲಿಗ ಸಮುದಾಯದಲ್ಲಿ ಕುಂಚಿಟಿಗ, ರೆಡ್ಡಿ, ದಾಸ, ಮರಸು, ಗಂಗಟಕಾರ್‌, ಹಳ್ಳಿಕಾರ್‌ ಸೇರಿದಂತೆ ಹಲವು ಜಾತಿ-ಉಪ ಜಾತಿಗಳಿವೆ. ಇದು ವಿಶ್ವಕರ್ಮ, ವಿಶ್ವ ಬ್ರಾಹಣ, ಆಚಾರಿ, ಬಡಿಗಾರ್‌, ಪತ್ತಾರ್‌, ಪಾಂಚಾಳ, ಅಕ್ಕಸಾಲಿಗ, ಕಮಾರ ಸೇರಿದಂತೆ ಹಲವು ಜಾತಿ-ಉಪಜಾತಿಗಳಿವೆ.

ಹೀಗೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರುವ ನೂರಾರು ಜಾತಿಗಳು ತಮ ತಮ ಜಾತಿಯ ಹಿತರಕ್ಷಣೆಗೆ ಮುಂದಾಗಿ ನಿರಂತರವಾಗಿ ಅರಿವು ಮೂಡಿಸಿ ಸಮೀಕ್ಷೆ ಸಂದರ್ಭದಲ್ಲಿ ಏನನ್ನು ದಾಖಲಿಸಬೇಕು, ಏನನ್ನು ದಾಖಲಿಸಬಾರದು ಎಂಬ ಜಾಗೃತಿ ಮೂಡಿಸತೊಡಗಿವೆ.
ಇತರೆ ಸಮುದಾಯಗಳು ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ತಮ ಸಮುದಾಯದ ಒಳಪಂಗಡದವರನ್ನು, ಉಪ ಜಾತಿಗಳನ್ನು ಸಂಘಟಿಸಲು ಸಕಾಲವೆಂದೇ ಭಾವಿಸಿ ಕಾರ್ಯೋನುಖವಾಗಿವೆ. ಸಮೀಕ್ಷೆಯ ದತ್ತಾಂಶದ ಆಧಾರದ ಮೇಲೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ನಿರ್ಧಾರವಾಗುವ ಸಾಧ್ಯತೆಗಳಿರುವುದರಿಂದ ಸಮೀಕ್ಷೆಗೂ ಮುನ್ನವೇ ತಮ ತಮ ಜನಾಂಗದವರನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ತೊಡಗಿವೆ.

RELATED ARTICLES

Latest News