ಬೆಂಗಳೂರು,ಫೆ.22– ಬರುವ ದಿನಗಳಲ್ಲಿ ರಾಜಭವನ ಮತ್ತು ಸರ್ಕಾರದ ನಡುವೆ ಮತ್ತಷ್ಟು ಸಂಘರ್ಷ ನಡೆಯುವ ಸೂಚನೆಗಳು ಗೋಚರವಾಗಿದ್ದು, ಶಾಸಕಾಂಗ ಹಾಗೂ ಕಾರ್ಯಾಂಗದ ನಡುವೆ ನೀನಾ-ನಾನಾ? ಎಂಬ ಪರಿಸ್ಥಿತಿ ನಿರ್ಮಾಣವಾಗುವ ಸಂಭವವಿದೆ.
ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರ ಅಧಿಕಾರವನ್ನು ಅಂದರೆ ಬಹುತೇಕ ರೆಕ್ಕೆಪುಕ್ಕವನ್ನೇ ಕತ್ತರಿಸಿರುವ ಸರ್ಕಾರ ಕೆಲ ವಿಶ್ವವಿದ್ಯಾನಿಲಯಗಳ ಘಟಿಕೋತ್ಸವದ ಮುಖ್ಯ ಅತಿಥಿಗಳಿಗೆ ಸೀಮಿತಗೊಳಿಸಿದೆ. ಇದರಿಂದ ಕೆಂಡಾಮಂಡಲವಾಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಸರ್ಕಾರದ ಕಳುಹಿಸಿದ್ದ ಮೂರು ಮಸೂದೆಗಳನ್ನು ಹಿಂತಿರುಗಿಸಿದ್ದಾರೆ.
ರಾಜ್ಯ ಸರ್ಕಾರ ಕಳುಹಿಸಿದ್ದ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ 2024ನ್ನು ಸರ್ಕಾರಕ್ಕೆ ಹಿಂತಿರುಗಿಸಿರುವ ರಾಜ್ಯಪಾಲರು, ಈ ತಿದ್ದುಪಡಿಯು ದಾರಿ ತಪ್ಪಿಸುವಂತಿದೆ. ಬದಲಾವಣೆ ತರುವ ಉದ್ದೇಶಕ್ಕಿಂತಲೂ ಹೆಚ್ಚಾಗಿ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನವಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ.
ಅವರು ವಾಪಸ್ ಕಳುಹಿಸಿದ ಇತರ ಎರಡು ಮಸೂದೆಗಳೆಂದರೆ ಮೈಸೂರು ಪ್ರಾಧಿಕಾರ ಅಭಿವೃದ್ಧಿ ಮಸೂದೆ- 2024 ಮತ್ತು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ರಕ್ಷಣೆ (ತಿದ್ದುಪಡಿ) -2024.ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಯನ್ನು ತಡೆಗಟ್ಟುವ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ಅಂಕಿತ ಹಾಕದೆ ಹಲವು ಸ್ಪಷ್ಟನೆ ಕೇಳಿ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ವಾಪಸ್ ಕಳುಹಿಸಿದ್ದರು.
ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರವೇ ಗಮನ ಹರಿಸಲಾಗಿದೆ. ಸಹಜ ನ್ಯಾಯದಡಿ ಸಾಲ ಕೊಟ್ಟವರಿಗೆ ರಕ್ಷಣೆ ಕಾಣಿಸುತ್ತಿಲ್ಲ. ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ. ಮೈಕ್ರೋ ಫೈನಾನ್ಸ್ 3 ಲಕ್ಷಕ್ಕಿಂತ ಜಾಸ್ತಿ ಸಾಲ ಕೊಡುವುದಿಲ್ಲ. ನೀವು ಐದು ಲಕ್ಷ ದಂಡ ಹೇಗೆ ಹಾಕುತ್ತೀರಾ ಎಂದು ರಾಜ್ಯಪಾಲರು ಸರ್ಕಾರವನ್ನು ಪ್ರಶ್ನೆ ಮಾಡಿದ್ದರು.
ಸಾಮಾನ್ಯವಾಗಿ ಪ್ರತಿಯೊಂದು ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ರಾಜ್ಯಪಾಲರೇ ಕುಲಾಧಿಪತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಉಪಕುಲಪತಿಗಳ ನೇಮಕಾತಿ, ಸಿಂಡಿಕೇಟ್ ಸದಸ್ಯರ ನೇಮಕಾತಿ, ವಿವಿಗಳಲ್ಲಿ ಕಾಮಗಾರಿ ನಿರ್ವಹಣೆ ಸೇರಿದಂತೆ ಕೆಲವು ಆಡಳಿತಾತ್ಮಕ ನಿರ್ಧಾರಗಳನ್ನು ರಾಜ್ಯಪಾಲರೇ ನಿರ್ವಹಿಸುತ್ತಿದ್ದರು.
ಸರ್ಕಾರ ಯಾವಾಗ ರಾಜ್ಯಪಾಲರ ಅಧಿಕಾರಕ್ಕೆ ಹಂತ ಹಂತವಾಗಿ ಕತ್ತರಿ ಪ್ರಯೋಗ ಮಾಡಲು ಮುಂದಾಯಿತೋ ರಾಜ್ಯಪಾಲರು ಕೂಡ ತಮಗಿರುವ ಅಧಿಕಾರವನ್ನು ಚಲಾಯಿಸಲು ಮುಂದಾಗಿರುವುದು ಸ್ಪಷ್ಟವಾಗಿದೆ.
ಅಷ್ಟಕ್ಕೂ ರಾಜ್ಯಪಾಲರು ಕಳುಹಿಸಿರುವ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ ತಿದ್ದುಪಡಿಯನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿರೋಧಪಕ್ಷಗಳ ವಿರೋಧದ ನಡುವೆಯೂ ಅಂಗೀಕಾರ ಮಾಡಲಾಗಿತ್ತು.
ಈವರೆಗೂ ವಿವಿಗಳಿಗೆ ರಾಜ್ಯಪಾಲರು ಕುಲಾಧಿಪತಿಗಳಾಗುತ್ತಿದ್ದರು. ಆದರೆ ಬದಲಾದ ತಿದ್ದುಪಡಿಯಲ್ಲಿ ಮುಖ್ಯಮಂತ್ರಿಗಳೇ ವಿವಿ ಕುಲಾಧಿಪತಿಗಲಾಗಿದ್ದು, ಸಿಂಡಿಕೇಟ್ ಸದಸ್ಯರು ಸೇರಿದಂತೆ ಪ್ರತಿಯೊಂದು ಆಡಳಿತಾತ್ಮಕ ನಿರ್ಧಾರವು ಇವರ ಹೊಣೆಯಾಗಿರುತ್ತದೆ. ಅಂದರೆ ರಾಜ್ಯಪಾಲರಿಗೆ ಇದ್ದ ಅಧಿಕಾರವನ್ನು ಹಂತ ಹಂತವಾಗಿ: ↑ ವರೋಕ್ಷವಾಗಿ ಸರ್ಕಾರ ಕಿತ್ತುಕೊಂಡು ಕೇವಲ ಈ ವಿಶ್ವವಿದ್ಯಾನಿಲಯಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಘಟಿಕೋತ್ಸವದಲ್ಲಿ
ಪದಕ ಮತ್ತು ಪದವಿಪತ್ರ ಪ್ರಮಾಣಕ್ಕೆ ಸೀಮಿತಗೊಳಿಸಲು ಮುಂದಾಗಿತ್ತು ಎಂಬ ಆಪಾದನೆಯೂ ಇದೆ.
ಈ ಹಿಂದೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳು ಮಾತ್ರ ಅಲ್ಲಿನ ಸರ್ಕಾರ ಹಾಗೂ ರಾಜಭವನದ ನಡುವೆ ಕಿತ್ತಾಟ ನಡೆಯುತ್ತಲೇ ಇತ್ತು. ಅದರಲ್ಲೂ ಹಾಲಿ ಉಪರಾಷ್ಟ್ರಪತಿಯೂ ಆಗಿರುವ ಜಗದೀಶ್ ಧನ್ಗರ್, ತಮಿಳುನಾಡಿನ ರವಿ, ಕೇರಳದ ಆರೀಫ್ ಮೊಹಮ್ಮದ್ ಖಾನ್ ಸೇರಿದಂತೆ ಕೆಲವು ರಾಜ್ಯಪಾಲರಂತೂ ತಾವು ಕಾರ್ಯಾಂಗದ ಮುಖ್ಯಸ್ಥರೆಂಬುದನ್ನು ಮರೆತು ಪಕ್ಷದ ಮುಖವಾಣಿಯಂತೆ ವರ್ತನೆ ಮಾಡಿರುವ ನಿದರ್ಶನವೂ ಇದೆ.
ಅದರಲ್ಲೂ ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರು ಸರ್ಕಾರ ಕಳುಹಿಸಿದ್ದ ಅನೇಕ ಮಸೂದೆಗಳನ್ನು ಸಹಿ ಹಾಕಲು ನಿರಾಕರಿಸಿ ಹಿಂತಿರುಗಿಸಿದ್ದರು. ಕೊನೆಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸರ್ಕಾರ ಸುಪ್ರೀಂಕೋಟ್೯ ಕದ ತಟ್ಟಿತ್ತು. ವಾದ ಆಲಿಸಿದ್ದ ನ್ಯಾಯಾಲಯ ಬೆಂಕಿಯ ಜೊತೆ ಸರಸವಾಡಬೇಡಿ ಎಂದು ರಾಜ್ಯಪಾಲರಿಗೆ ಪರೋಕ್ಷವಾಗಿ ಸಾಲಿಸಿಟರ್ ಜನರಲ್ ಮೂಲಕ ಎಚ್ಚರಿಕೆಯನ್ನು ಕೊಟ್ಟಿತ್ತು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ರಾಜ್ಯಪಾಲರು ಇತರರಿಗೆ ಮಾದರಿಯಾಗುವಂತಹ ಆಡಳಿತ ನಡೆಸಿರುವ ನಿದರ್ಶನಗಳು ಸಾಕಷ್ಟಿವೆ.
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದವೇಳೆ ಹಂಸರಾಜ್ ಭಾರದ್ವಾಜ್ ನಡವಳಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲೂ ಟೀಕೆ ವ್ಯಕ್ತವಾಗಿತ್ತು. ವಜೂಭಾಯಿ ವಾಲಾ, ಕೆ.ರೋಸಯ್ಯ, ರಾಮೇಶ್ವರ್ ಠಾಕೂರ್, ಟಿ.ಎನ್.ಚರ್ತುವೇದಿ, ರಮಾದೇವಿ, ಖುರ್ಷಿದ್ ಆಲಂಖಾನ್ ಸೇರಿದಂತೆ ಅನೇಕರು ಒಂದೇ ಒಂದೂ ವಿವಾದವಿಲ್ಲದೆ ಆಡಳಿತ ನಡೆಸಿ ಭೇಷ್ ಎನಿಸಿಕೊಂಡಿದ್ದರು.
ಯಾವಾಗ ಸಚಿವ ಸಂಪುಟ ನಿರ್ಧಾರವನ್ನು ಧಿಕ್ಕರಿಸಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರ ವಿರುದ್ಧ ಮುಡಾ ಪ್ರಕರಣದ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿದರೋ ಅಂದಿನಿಂದ ರಾಜಭವನ ಹಾಗೂ ಶಾಸಕಾಂಗದ ನಡುವೆ ಉಂಟಾಗಿರುವ ಸಂಘರ್ಷ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ,