ಬೆಂಗಳೂರು,ಆ.6- ಮತಗಳ್ಳತನ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ನೇತೃತ್ವದಲ್ಲಿ ಆ.8ರಂದು ನಡೆಯಲಿರುವ ಪ್ರತಿಭಟನೆಯ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲೇ ಗೊಂದಲಗಳಿದ್ದು, ಒಂದು ವೇಳೆ ಗಂಭೀರ ಸ್ವರೂಪದ ಪುರಾವೆಗಳನ್ನು ಬಹಿರಂಗಪಡಿಸದೇ ಇದ್ದರೆ, ದೇಶಾದ್ಯಂತ ಮತ್ತೆ ನಗೆಪಾಟಲಿಗೀಡಾಗುವ ಅತಂಕ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ.
ಬಿಹಾರದ ವಿಧಾನಸಭೆಯ ಚುನಾವಣೆಯ ಪ್ರಯುಕ್ತ ಕೇಂದ್ರ ಚುನಾವಣಾ ಆಯೋಗ ನಡೆಸಿದ್ದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ವಿರೋಧಿಸಿ, ಲೋಕಸಭೆಯ ಮಹಾತಗಾಂಧಿ ಪ್ರತಿಮೆ ಮುಂದೆ ಇಂಡಿಯಾ ರಾಜಕೀಯ ನಾಯಕರ ಒಕ್ಕೂಟ ಪ್ರತಿಭಟನೆ ನಡೆಸುವ ವೇಳೆ ರಾಹುಲ್‌ಗಾಂಧಿ, ದೇಶಾದ್ಯಂತ ಮತಗಳ್ಳತನವಾಗುತ್ತಿದೆ. ಕರ್ನಾಟಕದಲ್ಲಿ ಈ ಬಗ್ಗೆ ಆಧ್ಯಯನ ನಡೆಸಿ ಕಾಂಗ್ರೆಸ್ ಪಕ್ಷ ಭಯಾನಕ ಸತ್ಯವನ್ನು ಕಂಡುಕೊಂಡಿದೆ ಎಂದು ಹೇಳಿದರು.
ಭಯಾನಕ ಸತ್ಯಗಳ ಬಗ್ಗೆ ಆರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸ್ಪಷ್ಟತೆಯಿರಲಿಲ್ಲ. ರಾಹುಲ್‌ಗಾಂಧಿ ಯಾವ ಚುನಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿಳಿಯದೆ ಗೊಂದಲಕ್ಕೊಳಗಾಗಿದ್ದರು. ಈ ಬಗ್ಗೆ ಹೇಳಿಕೆ ನೀಡಲು ಹಿಂದೇಟು ಹಾಕಿದ್ದರು. ನಿಧಾನಕ್ಕೆ ಮಾಹಿತಿ ಪಡೆದುಕೊಂಡು ಒಬ್ಬೊಬ್ಬರೂ ಒಂದೊಂದು ರೀತಿಯ ಮಾತನಾಡಲಾರಂಭಿಸಿದರು.
ಡಿ.ಕೆ. ಶಿವಕುಮಾರ್ ತಮ ಸಹೋದರ ಸೋಲು ಕಂಡಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳಾಗಿದೆ ಎಂದು ಹೇಳಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಮಹದೇವಪುರ ಹಾಗೂ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮಗಳಾಗಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡರು.
ಈ ಹಿಂದೆ ಕರ್ನಾಟಕದ ವಿಧಾನಸಭೆ ಚುನಾವಣೆಗೂ ಮುನ್ನ ಹಲವು ರೀತಿಯ ಆರೋಪಗಳು ಕೇಳಿ ಬಂದಿದ್ದವು. ಚಿಲುಮೆ ಸಂಸ್ಥೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹಸ್ತಕ್ಷೇಪ ಮಾಡಿದೆ. ಹಾಗೇ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ಬಿಬಿಎಂಪಿ ಚಿಲುಮೆ ಸಂಸ್ಥೆ ನಿಯೋಜಿಸಿದ್ದ ಖಾಸಗಿ ವ್ಯಕ್ತಿಗಳಿಗೆ ಮತಗಟ್ಟೆ ಅಧಿಕಾರಿಗಳು ಎಂಬ ಗುರುತಿನ ಚೀಟಿ ನೀಡಲಾಗಿತ್ತು ಎಂಬ ಆರೋಪಗಳಿವೆ. ಅದರ ತನಿಖೆ ನಡೆದು ಬಿಬಿಎಂಪಿಯ ಕೆಲವು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿತ್ತು. ಈ ಪ್ರಕರಣ ವಿಚಾರಣೆ ನ್ಯಾಯಾಲಯದ ಹಂತದಲ್ಲಿದೆ.
ಅದಕ್ಕೂ ಮೊದಲಿನ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿ ನಕಲಿ ಮತದಾರರ ಸೇರ್ಪಡೆ ಕುರಿತು ಟೀಕೆಗಳಿದ್ದವು. ಆಗ ಕಾಂಗ್ರೆಸ್ ಪಕ್ಷದಲ್ಲೇ ಶಾಸಕರಾಗಿದ್ದ ಮುನಿರತ್ನ ವಿರುದ್ಧ ದೂರು ದಾಖಲಾಗಿದ್ದವು. ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು, ತಮ ಕಾರ್ಯಕ್ರಮವೊಂದರಲ್ಲಿ ಮುನಿರತ್ನ ಅವರ ಹೆಸರನ್ನು ಉಲ್ಲೇಖಿಸಿ, ವಾಗ್ಧಾಳಿ ನಡೆಸಿದ್ದರು. ರಾಹುಲ್‌ಗಾಂಧಿ ಈ ಹಿಂದಿನ ಎಲ್ಲಾ ಪ್ರಕರಣಗಳನ್ನು ಒಟ್ಟು ಗೂಡಿಸಿ ಪ್ರಸ್ತಾಪ ಮಾಡುವುದೇ ಆದರೆ, ಅದು ನಗೆಪಾಟಲಿಗೀಡಾಗುವ ಸಾಧ್ಯತೆಯಿದೆ. ಇದನ್ನು ಹೊರತು ಪಡಿಸಿ ಮತದಾನದ ವೇಳೆ ಕಾಂಗ್ರೆಸ್ ಪಕ್ಷದ ಏಜೆಂಟರು, ನಕಲಿ ಮತದಾರನ್ನು ಗುರುತಿಸಿದ್ದರೆ ಅದನ್ನು ಬಹಿರಂಗಪಡಿಸಲು ಇಷ್ಟು ದಿನ ಸುಮನಿದ್ದದ್ದು ಏಕೆ ಎಂಬ ಪ್ರಶ್ನೆಗಳು ಕಾಡಲಾರಂಭಿಸುತ್ತಿವೆ.
ತಮ ಪಕ್ಷ ಅಧ್ಯಯನ ನಡೆಸಿ, ಮತಗಳ್ಳತನದ ಭಯಂಕರ ಸತ್ಯಗಳನ್ನು ಕಂಡುಕೊಂಡಿದೆ ಎಂದು ರಾಹುಲ್‌ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮಾಹಿತಿ ಸಂಗ್ರಹ ಹಾಗೂ ಸಂಶೋಧನಾ ಪ್ರತ್ಯೇಕವಾದ ಘಟಕ ಇದೆ. ಆದರೆ ಆ ಘಟಕ ಯಾವ ರೀತಿಯ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ ಎಂಬ ಬಗ್ಗೆ ಈವರೆಗೂ ಯಾರಿಗೂ ಮಾಹಿತಿ ಇಲ್ಲ. ಬಿಜೆಪಿ ಮುಖಂಡರಿಗೆ ದೊರೆಯುವಂತಹ ದತ್ತಾಂಶ ಹಾಗೂ ಮಾಹಿತಿಗಳಲ್ಲಿ ಶೇ. 5ರಷ್ಟನ್ನು ಕಾಂಗ್ರೆಸ್ ನಾಯಕರಿಗೆ ಆ ಪಕ್ಷದ ಸಂಶೋಧನಾ ಘಟಕ ಒದಗಿಸುತ್ತಿಲ್ಲ ಎಂಬ ಆರೋಪಗಳಿವೆ.
ಹೀಗಿರುವಾಗ ಮತದಾರರ ಪಟ್ಟಿಯಂತಹ ಸೂಕ್ಷ್ಮ ವಿಚಾರವನ್ನು ಕಾಂಗ್ರೆಸ್‌ನ ಸಂಶೋಧನ ಘಟಕ ಅದ್ಯಾವ ಮಟ್ಟಿಗೆ ಅಧ್ಯಯನ ನಡೆಸುತ್ತಿದೆ ಎಂಬುದು ಗೊತ್ತಿಲ್ಲ ಎಂದು ಆ ಪಕ್ಷದ ಮುಖಂಡರೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.ರಾಹುಲ್‌ಗಾಂಧಿ ತಮ ಪ್ರತಿಭಟನೆಯಲ್ಲಿ ಗಂಭೀರಸ್ವರೂಪದ ಮಾಹಿತಿಯನ್ನು ಹೊರಹಾಕದಿದ್ದರೆ, ಇಡೀ ಕಾಂಗ್ರೆಸ್ ಪಕ್ಷದ ನಂಬಿಕಾರ್ಹ ವ್ಯವಸ್ಥೆಯೇ ಅನುಮಾಕ್ಕೀಡಾಗಲಿದೆ ಎಂಬ ಆತಂಕ ಒಳಗೊಳಗೆ ಕಾಡುತ್ತಿದೆ.
ಈ ಕಾರಣಕ್ಕಾಗಿಯೇ ಆ. 5ರಂದು ಬೆಂಗಳೂರು ಫ್ರೀಡಂಪಾರ್ಕ್‌ನಲ್ಲಿ ನಡೆಯಬೇಕಿದ್ದ ಪ್ರತಿಭಟನೆಯನ್ನು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಶಿಬುಸೋರೆನ್ ಅವರ ನಿಧನದ ಕಾರಣಕ್ಕೆ ಮುಂದೂಡಿದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ರಾಹುಲ್ ಗಾಂಧಿ ಬೆಚ್ಚಿಬೀಳಿಸುವಂತಹ ಮಾಹಿತಿಯನ್ನು ಹೊರ ಹಾಕಲಿದ್ದಾರೆ ಎಂಬ ಮಾಹಿತಿಯನ್ನು ಕಾಂಗ್ರೆಸ್ಸಿಗರು ಪದೇಪದೇ ಹೇಳುತ್ತಿದ್ದಾರೆ. ಯಾವ ಮಾಹಿತಿ ಎಂದು ಕಾಂಗ್ರೆಸ್ಸಿಗರ ಬಳಿ ವಿವರಗಳು ಇಲ್ಲದೇ ಇರುವುದು ಹಲವು ಅನುಮಾನಗಳನ್ನು ಮೂಡಿಸಿದೆ.