ಮೈಸೂರು,ಜು.19- ನಾಯಕತ್ವದ ಬದಲಾವಣೆ, ಸಂಪುಟ ಪುನರ್ ರಚನೆಯಂತಹ ಅನಗತ್ಯ ವಿಚಾರಗಳ ಚರ್ಚೆ ತಣ್ಣಗಾದ ಬಳಿಕ ರಾಜ್ಯಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವಂತಹ ಸಾಧನಾ ಸಮಾವೇಶದ ಮುಂದುವರೆದ ಭಾಗ ಮೈಸೂರಿನಲ್ಲಿ ನಡೆಯಿತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೈಸೂರಿನ ಮಹಾರಾಜ ಕಾಲೇಜ್ ಮೈದಾನದ ಆವರಣದಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ರಾಜ್ಯಸರ್ಕಾರದ ಸಾಧನೆಗಳು ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಯಾದಿಯಾಗಿ ನಾಯಕರು ಜನರಿಗೆ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದರು. ಇದೇ ಮೊದಲ ಬಾರಿಗೆ ಸಾರ್ವಜನಿಕರ ನಡುವೆ ನಾಯಕರು ಹಾದುಹೋಗಲು 200 ಮೀಟರ್ ಉದ್ದದ ರ್ಯಾಂಪ್ ಅನ್ನು ನಿರ್ಮಿಸಲಾಗಿತ್ತು. ಅದರಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಎಚ್.ಸಿ.ಮಹದೇವಪ್ಪ ಜನರತ್ತ ಕೈಬೀಸುತ್ತಾ ನಡೆದು ಬಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮುನ್ನೆಲೆಗೆ ನಡೆದುಬಂದರು. ಅವರನ್ನು ಸಮಾವೇಶದಲ್ಲಿ ಭಾಗವಹಿಸಿದ ಜನ ಕೇಕೆ, ಸಿಳ್ಳೆ, ಚಪ್ಪಾಳೆಯ ಮೂಲಕ ಸ್ವಾಗತಿಸಿದರು. ಪುಷ್ಪವೃಷ್ಟಿ ಮೂಲಕ ಅಭಿನಂದಿಸಿದರು.ಕಾರ್ಯಕ್ರಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನದ ವೇದಿಕೆಯಾಗಿತ್ತು. ಸಾಗರೋಪಾದಿಯಲ್ಲಿ ಜನ ಬಂದಿದ್ದರು.
ಸಭಾಂಗಣದಲ್ಲಿ ಹಾಕಲಾಗಿದ್ದ ಪ್ರತಿಯೊಂದು ಕುರ್ಚಿಗೂ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಇಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಸಿದ್ದರಾಮಯ್ಯನವರ ಫೋಟೊ ಹಿಡಿದು ಬೆಂಬಲ ಸೂಚಿಸುವ ಮೂಲಕ ನಾಯಕತ್ವದ ಬದಲಾವಣೆಯ ಚರ್ಚೆ ಮಾಡುತ್ತಿದ್ದವರಿಗೆ ಸಿದ್ದರಾಮಯ್ಯನವರ ಬೆಂಬಲಿಗರು ತಕ್ಕ ಪ್ರತ್ಯುತ್ತರ ನೀಡಿದರು.
ಸಿದ್ದರಾಮಯ್ಯನವರ ತವರು ಜಿಲ್ಲೆಯಲ್ಲಿ ನಡೆದ ಬೃಹತ್ ಸಮಾವೇಶ ಸರ್ಕಾರದ ಸಾಧನೆಗಳ ಅನಾವರಣವಷ್ಟೇ ಅಲ್ಲದೆ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಗಿತ್ತು.
ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗಳು ಇತ್ತೀಚೆಗೆ ರಾಜ್ಯ ರಾಜಕೀಯವನ್ನು ಕಾವೇರಿಸಿದ್ದವು. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನಡುವೆ ಪರಸ್ಪರ ಬಂಡಾಯದ ಪರಿಸ್ಥಿತಿ ಇದೆ.
ನಾಯಕತ್ವ ಬದಲಾವಣೆಗೆ ಡಿ.ಕೆ.ಶಿವಕುಮಾರ್ ಬಣ ಪಟ್ಟು ಹಿಡಿದರೆ ಪಕ್ಷದ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸಿದ್ದರಾಮಯ್ಯನವರ ಬಣ ತೆರೆಮರೆಯ ಒತ್ತಡ ಹೇರುತ್ತಿದೆ ಎಂಬ ಆರೋಪಗಳಿವೆ. ಇದನ್ನು ವ್ಯಾಪಕವಾಗಿ ಬಿಂಬಿಸಲಾಗುತ್ತಿದೆ. ಆದರೆ ಎಲ್ಲಾ ಚರ್ಚೆಗಳಿಗೂ ತೆರೆ ಎಳೆಯುವಂತೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರಸ್ಪರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಆತೀಯ ವರ್ತನೆಗಳ ಮೂಲಕ ವಿರೋಧಿಗಳ ಟೀಕೆಗೆ ಉತ್ತರ ನೀಡಿದ್ದಾರೆ.
ರಾಜ್ಯ ಸರ್ಕಾರ ರಚನೆಯಾಗಿ ಎರಡೂವರೆ ವರ್ಷವಾಗುತ್ತಾ ಬಂದಿದ್ದು, ಅರ್ಧ ಅವಧಿಯನ್ನು ಪೂರ್ಣಗೊಳಿಸಲಾಗಿದೆ. ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಲಾಗಿದ್ದ ಪ್ರಮುಖ ಭರವಸೆಗಳಾದ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಜೊತೆಗೆ ಹಲವಾರು ಜನಪರ ಕಾರ್ಯಕ್ರಮಗಳ ಮೂಲಕ ಮುಂದಡಿ ಇಟ್ಟಿದೆ.
ನುಡಿದಂತೆ ನಡೆದಿದ್ದೇವೆ ಎಂಬುದು ಕಾಂಗ್ರೆಸ್ ನಾಯಕರ ಹೆಮೆಯ ಘೋಷಣೆಯಾಗಿದೆ. ಇದಕ್ಕೆ ಪ್ರತಿಯಾಗಿ ವಿರೋಧಪಕ್ಷಗಳು ನಾಯಕತ್ವದ ಗೊಂದಲವಿದೆ, ಸರ್ಕಾರದಲ್ಲಿ ಹಣವಿಲ್ಲ ಎಂಬೆಲ್ಲಾ ಟೀಕೆಗಳನ್ನು ಮಾಡುತ್ತಲೇ ಇದೆ. ಇದಕ್ಕೆ ಸಾಧನಾ ಸಮಾವೇಶದ ಮೂಲಕ ಪ್ರತ್ಯುತ್ತರ ನೀಡಲು ಸರ್ಕಾರ ಸಾಧನಾ ಸಮಾವೇಶವನ್ನು ಆಯೋಜಿಸಿತ್ತು.
ಈಗಾಗಲೇ ವಿಜಯನಗರ ಹಾಗೂ ಕಲಬುರಗಿಯಲ್ಲಿ ಸಾಧನಾ ಸಮಾವೇಶ ನಡೆದಿತ್ತು. ಈಗ ಮೈಸೂರು ಭಾಗದಲ್ಲಿ ಸಮಾವೇಶ ನಡೆಸಿದ್ದು, ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಾಗಿದೆ.ಕಾರ್ಯಕ್ರಮದಲ್ಲಿ 2,578 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ ಹಾಗೂ ಉದ್ಘಾಟನೆ ನೆರವೇರಿಸಲಾಯಿತು. ಸಚಿವರಾದ ಕೆ.ಜೆ.ಜಾರ್ಜ್, ಕೆ.ವೆಂಕಟೇಶ್, ರಹೀಂಖಾನ್, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.
- ತುಮಕೂರಿನಲ್ಲಿ ತ್ಯಾಜ್ಯ ಸಂಗ್ರಹಣೆಗೆ ಸ್ವಿಗ್ಗಿ, ಜುಮೊಟೊ, ಬಿಂಕ್ಲಿಟ್ ಮಾದರಿಯ ಹೊಸ ಯೋಜನೆ
- ಎಲ್ಲಾ ಪಕ್ಷಗಳ ಶಾಸಕರಿಗೂ ಸಮಾನ ಅನುದಾನ ನೀಡದಿದ್ದರೆ ಉಗ್ರ ಹೋರಾಟ : ಸಿ.ಬಿ.ಸುರೇಶ್ಬಾಬು ಎಚ್ಚರಿಕೆ
- ಬೆಂಗಳೂರು ವಿಮಾನ ನಿಲ್ದಾಣದಲ್ಲಿ 40 ಕೋಟಿ ಮೌಲ್ಯದ ಕೊಕೇನ್ ಜಪ್ತಿ
- ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರಿಗೆ ಸೂಚನೆ
- ಕನ್ನಡಿಗರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ತ್ರಿಪುರ ರಾಜ್ಯದ ವ್ಯಕ್ತಿ ಅಂದರ್