ಬೆಂಗಳೂರು,ಫೆ.28- ತನ್ನ ಇಂಡಿ ಮಿತ್ರ ಪಕ್ಷ ಡಿಎಂಕೆ ಮೆಚ್ಚಿಸಲು ಕದ್ದುಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದ ರಾಜ್ಯ ಕಾಂಗ್ರೆಸ್‌ಗೆ ರಾತ್ರೋರಾತ್ರಿ ತೆಲಂಗಾಣ ರಾಜ್ಯದ ಮೇಲೆ ಪ್ರೇಮಾಂಕುರವಾಗಿದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ವಿಜಯಪುರದ ಆಲಮಟ್ಟಿ ಜಲಾಶಯದಿಂದ ಫೆ. 20 ಮತ್ತು 21 ರಂದು ತೆಲಂಗಾಣ ರಾಜ್ಯಕ್ಕೆ 1.27 ಟಿಎಂಸಿ ಅಡಿ ನೀರನ್ನು ಉಡುಗೊರೆಯಾಗಿ ನೀಡಿದೆ ಎಂದು ಆರೋಪಿಸಿದ್ದಾರೆ.
ತೆಲಂಗಾಣ ಮತ್ತು ತಮಿಳುನಾಡಿನ ಬಗ್ಗೆ ರಾಜ್ಯ ಸರ್ಕಾರದ ಒಲವು ತೋರಿದ್ದು ಮತ್ತೊಮ್ಮೆ ಕನ್ನಡಿಗರಿಗೆ ದ್ರೋಹ ಬಗೆದಿದೆ. ರಾಜ್ಯದ ರೈತರಿಗೆ ನೀರು ಬಿಡುವಲ್ಲಿ ಒಂದು ಸೆಕೆಂಡ್ ಕೂಡಾ ಹೆಚ್ಚಾಗದಂತೆ ಸಮಯ ಪಾಲನೆ ಮಾಡುವ ಅಧಿಕಾರಿಗಳು ಇದರ ಬಗ್ಗೆ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಜನತೆಗೆ ಮುಂದೆ ಕುಡಿಯುವ ನೀರು ಮತ್ತು ಬೇಸಿಗೆ ಬೆಳೆಗೆ ನೀರಿನ ಕೊರತೆಯಾದರೆ ಯಾರನ್ನು ದೂಷಿಸುವಿರಿ? ಎಂದು ಪ್ರಶ್ನಿಸಿರುವ ಅವರು, ಈ ಸರ್ಕಾರಕ್ಕೆ ರೈತರ ಶಾಪವಂತೂ ತಟ್ಟುವುದು ಶತ ಸಿದ್ದ ಎಂದಿದ್ದಾರೆ.