ಬೆಂಗಳೂರು,ಡಿ.18- ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿದೆ. ನೇರವಾಗಿ ಅಧಿಕೃತ ಖಾತೆಗಳಲ್ಲಿ ಪರಸ್ಪರ ಆರೋಪ, ಕೆಸರೆರಚಾಟಗಳು ಅಸಹನೀಯ ಮಟ್ಟಕ್ಕೆ ತಲುಪಿವೆ. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯ ಕುರಿತಂತೆ ನಡೆದ ಚರ್ಚೆಗೆ ಉತ್ತರ ನೀಡುವಾಗ ಬಿಜೆಪಿ ನಾಯಕರ ಸಾಲಮನ್ನಾ ಒತ್ತಾಯಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದರು.
2018 ರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 1 ಲಕ್ಷ ರೂ. ರೈತರ ಸಾಲವನ್ನು ಮನ್ನಾ ಮಾಡುವುದಾಗಿ ತಿಳಿಸಿತ್ತು. ಆದರೆ ಅಧಿಕಾರಕ್ಕೆ ಬರುತ್ತಿದ್ದಂತೆ ಅದನ್ನು ಈಡೇರಿಸಲಿಲ್ಲ. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಸಾಲಮನ್ನಾ ಮಾಡುವ ಕುರಿತಂತೆ ವಿಧಾನಪರಿಷತ್‍ನ ಸದಸ್ಯರಾಗಿದ್ದ ವಿ.ಎಸ್.ಉಗ್ರಪ್ಪ ಅವರು ಕೇಳಿದ ಪ್ರಶ್ನೆಗೆ, ನಾವು ನೋಟು ಪ್ರಿಂಟು ಮಾಡುವ ಯಂತ್ರ ಇಟ್ಟಿಲ್ಲ ಎಂದು ಹೇಳಿದ್ದರು. ಅದೇ ಯಡಿಯೂರಪ್ಪ ಬೆಳಗಾವಿಯಲ್ಲಿ ಸಮಾವೇಶ ಮಾಡಿ ಕಾಂಗ್ರೆಸ್ ಸರ್ಕಾರ ಸಾಲಮನ್ನಾ ಮಾಡದೇ ಇದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳುತ್ತಿದ್ದಾರೆ.
ಅಧಿಕಾರದಲ್ಲಿದ್ದಾಗ ಭರವಸೆ ಈಡೇರಿಸದೆ ಚುನಾವಣೆಯ ಕಾರಣಕ್ಕೆ ಏನೋ ಹೇಳಿರು ತ್ತೇವೆ. ಅದನ್ನೆಲ್ಲಾ ಜಾರಿಗೊಳಿಸಲಾಗುವುದಿಲ್ಲ ಎಂದಿದ್ದ ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸುವ ನೈತಿಕತೆ ಇಲ್ಲ ಎಂದು ಹೇಳಿದರು. ಈ ವಿಡಿಯೋವನ್ನು ತಿರುಚಿ ಕಾಂಗ್ರೆಸ್ ಪಕ್ಷವೇ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದಂತೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಮುಖಂಡರಾದ ಸಿ.ಟಿ.ರವಿ, ಅಶ್ವತ್ಥ ನಾರಾಯಣ ಸೇರಿದಂತೆ ಅನೇಕ ನಾಯಕರು ಸಿದ್ದರಾಮಯ್ಯ ಅವರ ತಿರುಚಿದ ಹೇಳಿಕೆಯನ್ನು ಹಂಚಿಕೊಂಡಿದ್ದರು.
ತಕ್ಷಣವೇ ಮುಖ್ಯಮಂತ್ರಿ ಕಚೇರಿ ಹಾಗೂ ಸಾಮಾಜಿಕ ಜಾಲತಾಣ ವಾಸ್ತವಾಂಶದ ಮತ್ತು ಸಿದ್ದರಾಮಯ್ಯ ಅವರ ಮಾತಿನ ಪೂರ್ತಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಬಿಜೆಪಿಯ ತಪ್ಪು ಮಾಹಿತಿಯನ್ನು ಜನರ ಮುಂದಿಡಲಾಯಿತು. ಅದರ ಬಳಿಕ ಬಿಜೆಪಿ ಮತ್ತೊಂದು ಪೋಸ್ಟ್ ಮಾಡಿ ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ಮಾಡಿಲ್ಲ ಎಂದು ಆರೋಪಿಸಿತ್ತು. ಅದಕ್ಕೆ ಕಾಂಗ್ರೆಸ್ ಸ್ಪಷ್ಟನೆ ನೀಡಿದ್ದು, ಲಕ್ಷ್ಮೀಹೆಬ್ಬಾಳ್ಕರ್ ಸಂತ್ರಸ್ತೆ ಮತ್ತು ಆಕೆಯ ಕುಟುಂಬವನ್ನು ಭೇಟಿ ಮಾಡಿದ ಫೋಟೊವನ್ನು ಹಂಚಿಕೊಂಡಿದೆ.
ಕಾಂಗ್ರೆಸ್ ಆಡಳಿತದಲ್ಲಿ ಬೆಂಗಳೂರು ಉಗ್ರರ ಸ್ಲೀಪರ್‌ಸೆಲ್ ಆಗಿದೆ : ಯತ್ನಾಳ್
ಸುಳ್ಳು ಮೊದಲು ಹುಟ್ಟಿದ್ದೋ, ಬಿಜೆಪಿ ಮೊದಲು ಹುಟ್ಟಿದ್ದೋ ಎನ್ನುವುದನ್ನು ವಿಶ್ಲೇಷಿಸಿದರೆ ಬಿಜೆಪಿಯೇ ಹುಟ್ಟಿದ್ದು ಎಂಬ ಸತ್ಯ ಗೋಚರಿಸುತ್ತದೆ. ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ತಲೆಮಾಸಿದ ಎಳಸುಗಳನ್ನು ಕೂರಿಸಿದಂತಿದೆ. ಸುಳ್ಳು ಸಂಗತಿಯನ್ನು ಟ್ವೀಟ್ ಮಾಡಿ ಕೆಲ ಹೊತ್ತಿನಲ್ಲೇ ಡಿಲೀಟ್ ಮಾಡಿದ ಬಿಜೆಪಿಯವರಿಗೆ ತಮ್ಮದೇ ಪೋಸ್ಟ್‍ಗಳನ್ನು ಸತ್ಯ ಎಂದು ನಿರೂಪಿಸುವ ಧಮ್ಮು, ತಾಕತ್ತು ಇರಲಿಲ್ಲವೇ ಎಂದು ಪ್ರಶ್ನಿಸಿದೆ.
ವಂಟಮೂರಿ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತ್ರಸ್ತೆಯನ್ನು ಭೇಟಿ ಮಾಡಿಲ್ಲ ಎಂಬ ತಪ್ಪು ಮಾಹಿತಿ ನೀಡಲಾಗಿದೆ. ಪ್ರತಿ ಬಾರಿಯೂ ತಿರುಚಿದ ಮಾಹಿತಿಯನ್ನೇ ಬಿಜೆಪಿಯವರು ಜನರಿಗೆ ನೀಡುತ್ತಾರೆಂದು ಕಾಂಗ್ರೆಸ್ ಕಿಡಿಕಾರಿದೆ. ಇದಕ್ಕೆ ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ಮಹಿಳೆಯ ವಿವಸ್ತ್ರ ಪ್ರಕರಣಗಳು, ವಿದ್ಯಾರ್ಥಿಗಳಿಂದ ಶೌಚ ಗುಂಡಿ ಸ್ವಚ್ಛಗೊಳಿಸುವ ದುರ್ಘಟನೆಗಳು ನಡೆಯುತ್ತಿರುವುದೇಕೆ ಎಂದು ಪ್ರಶ್ನಿಸಿದೆ.