Wednesday, May 21, 2025
Homeರಾಜ್ಯಹೊಸಪೇಟೆಯಲ್ಲಿ 2 ವರ್ಷದ ಸಾಧನೆಗಳನ್ನು ಸಂಭ್ರಮಿಸಿದ ಕಾಂಗ್ರೆಸ್, ಶಕ್ತಿಪ್ರದರ್ಶನ

ಹೊಸಪೇಟೆಯಲ್ಲಿ 2 ವರ್ಷದ ಸಾಧನೆಗಳನ್ನು ಸಂಭ್ರಮಿಸಿದ ಕಾಂಗ್ರೆಸ್, ಶಕ್ತಿಪ್ರದರ್ಶನ

Congress celebrates 2 years of achievements in Hospet,

ಹೊಸಪೇಟೆ,ಮೇ 20- ರಾಜ್ಯದ ಕಾಂಗ್ರೆಸ್‌‍ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಬೆನ್ನಲ್ಲಿ ಹೊಸಪೇಟೆಯಲ್ಲಿ ಆಯೋಜಿಸಲಾಗಿದ್ದ ಸಮರ್ಪಣೆ ಸಂಕಲ್ಪ ಸಮಾವೇಶ ಶಕ್ತಿ ಹಾಗೂ ಒಗ್ಗಟ್ಟಿನ ಪ್ರದರ್ಶನದ ವೇದಿಕೆಯಾಗಿತ್ತು.

ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಸಚಿವರಾದ ಎಚ್‌.ಕೆ.ಪಾಟೀಲ್‌, ಚಲುವರಾಯಸ್ವಾಮಿ, ಡಾ.ಜಿ.ಪರಮೇಶ್ವರ್‌, ಕೆ.ಜೆ.ಜಾರ್ಜ್‌, ಜಮೀರ್‌ ಅಹಮದ್‌ಖಾನ್‌, ಈಶ್ವರ್‌ಖಂಡ್ರೆ, ಲಕ್ಷ್ಮೀಹೆಬ್ಬಾಳ್ಕರ್‌, ಸತೀಶ್‌ ಜಾರಕಿಹೊಳಿ, ಕೃಷ್ಣಭೈರೇಗೌಡ, ದಿನೇಶ್‌ಗುಂಡೂರಾವ್‌, ಎಂ.ಬಿ.ಪಾಟೀಲ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು. ಬಿರು ಮಳೆಯ ನಡುವೆಯೂ ಛತ್ರಿ ಹಿಡಿದುಕೊಂಡು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದರು. ಬೃಹತ್‌ ಪ್ರಮಾಣದ ಜಪಾನ್‌ ಟೆಂಟ್‌ ಅನ್ನು ನಿರ್ಮಿಸಲಾಗಿತ್ತು. ಲಕ್ಷಾಂತರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್‌‍ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಭಾಗವಹಿಸಿದ್ದ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ ವೇದಿಕೆಯ ಕೇಂದ್ರಬಿಂದುವಾಗಿದ್ದರು.ಸುಮಾರು ಒಂದೂವರೆ ಗಂಟೆ ತಡವಾಗಿ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದರು. ಅವರೊಂದಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ಸದಾ ತಮೊಂದಿಗೆ ಬಹುಮುಖ್ಯ ಕಡತಗಳನ್ನು ಹಿಡಿದುಕೊಂಡೇ ವೇದಿಕೆಯುದ್ದಕ್ಕೂ ಅಡ್ಡಾಡಿದ್ದು ಕಂಡುಬಂದಿತು. ರಾಹುಲ್‌ಗಾಂಧಿ ವೇದಿಕೆ ಹತ್ತುತ್ತಿದ್ದಂತೆ ಜಯಘೋಷಗಳು ಮೊಳಗಿದವು.

ರಾಹುಲ್‌ಗಾಂಧಿ ಎರಡು ಹೆಜ್ಜೆ ಮುಂದೆ ಬಂದು ನಂತರ ನಿಂತು ನಿಧಾನವಾಗಿ ಆಗಮಿಸುತ್ತಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನು ಜೊತೆಯಲ್ಲಿ ಕರೆದುಕೊಂಡು ಅವರ ಬೆನ್ನಿಗೆ ನಿಂತು ಮುಂದೆ ಸಾಗಿದರು. ವೇದಿಕೆಯಲ್ಲೂ ಖರ್ಗೆಯವರೊಂದಿಗೆ ಸುದೀರ್ಘ ಕಾಲ ಸಮಾಲೋಚನೆ ನಡೆಸಿದರು.

ರಾಹುಲ್‌ಗಾಂಧಿಯವರೊಂದಿಗೆ ಚರ್ಚಿಸಿದ ಬಳಿಕ ಖರ್ಗೆಯವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರನ್ನು ತಮ ಬಳಿ ಕರೆದು ಕೆಲವು ಸೂಚನೆಗಳನ್ನು ನೀಡಿದರು.ರಹಸ್ಯವಾದ ಈ ಸಮಾಲೋಚನೆಯಲ್ಲಿ ರಾಹುಲ್‌ಗಾಂಧಿ ಕೂಡ ಮಧ್ಯಪ್ರವೇಶಿಸಿದರು. ಈ ನಡುವೆ ಸಿದ್ದರಾಮಯ್ಯ ಏನೋ ಹೇಳಲು ಪ್ರಯತ್ನಿಸಿದರು, ರಾಹುಲ್‌ಗಾಂಧಿ ಅತ್ತ ಹೆಚ್ಚು ಗಮನ ಕೊಡಲಿಲ್ಲ.

ರಾಷ್ಟ್ರರಾಜಕಾರಣ ಕುರಿತಂತೆ ರಾಹುಲ್‌ಗಾಂಧಿ, ಖರ್ಗೆ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲ ವೇದಿಕೆಯಲ್ಲೇ ಸುದೀರ್ಘ ಸಮಾಲೋಚನೆ ನಡೆಸಿದರು.ಮೂವರ ಪ್ರಮುಖ ಮಾತುಕತೆಯನ್ನು ಮೂಕಪ್ರೇಕ್ಷಕನಂತೆ ಆಲಿಸುತ್ತಿದ್ದ ಡಿ.ಕೆ.ಶಿವಕುಮಾರ್‌ ಸ್ವಲ್ಪ ಹೊತ್ತಿನ ಬಳಿಕ ಅಲ್ಲಿಂದ ಎದ್ದು ಬೇರೆ ಕಡೆ ಸ್ಥಳಾಂತರಗೊಂಡರು. ರಣದೀಪ್‌ ಸಿಂಗ್‌ ಸುರ್ಜೇವಾಲರವರು ಡಿ.ಕೆ.ಶಿವಕುಮಾರ್‌ ಕುರ್ಚಿಯಲ್ಲಿ ಕುಳಿತು ಚರ್ಚೆಯಲ್ಲಿ ತೊಡಗಿಸಿಕೊಂಡರು.

ಸುಮಾರು ಹತ್ತು ನಿಮಿಷ ಕಾಲ ಗಂಭೀರ ಚರ್ಚೆ ಮುಂದುವರೆದಿತ್ತು. ರಾಹುಲ್‌ಗಾಂಧಿ ಕಾಗದಪತ್ರಗಳನ್ನು ಹಿಡಿದುಕೊಂಡು ವಿವರಣೆ ನೀಡುತ್ತಿದ್ದುದು ಕಂಡುಬಂದಿತು. ಒಂದು ಹಂತದಲ್ಲಿ ಡಿ.ಕೆ.ಶಿವಕುಮಾರ್‌ರವರು ಹೈಕಮಾಂಡ್‌ ನಾಯಕರ ಸಮೀಪ ನಿಂತು ಚರ್ಚೆಯನ್ನು ಕೇಳಿಸಿಕೊಳ್ಳುತ್ತಿದ್ದುದು ಕುತೂಹಲ ಕೆರಳಿಸಿತು.

ಹೈಕಮಾಂಡ್‌ ನಾಯಕರ ಸಮಾಲೋಚನೆ ನಡುವೆ ಸಿದ್ದರಾಮಯ್ಯ ತಮಗೂ ಅದಕ್ಕೂ ಸಂಬಂಧ ಇಲ್ಲ ಎಂಬಂತೆ ಕುಳಿತಿದ್ದರು. ಈ ನಡುವೆ ಕಂದಾಯ ಸಚಿವ ಕೃಷ್ಣಭೈರೇಗೌಡ ತಮ ಇಲಾಖೆಯ ಸಾಧನೆ ಕುರಿತು ಸುದೀರ್ಘ ವಿವರಣೆ ನೀಡುತ್ತಿದ್ದರು.ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ರವರು ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಮಲ್ಲಿಕಾರ್ಜುನ ಖರ್ಗೆಯವರ ಬಳಿ ಬಂದು ಕೆಲ ಸೂಚನೆಗಳನ್ನು ಪಡೆದುಕೊಂಡರು.ಸಿದ್ದರಾಮಯ್ಯ, ಸಚಿವ ಜಮೀರ್‌ ಅಹಮದ್‌ ಖಾನ್‌, ಶಾಸಕ ನ.ಭರತರೆಡ್ಡಿ ಸೇರಿದಂತೆ ಹಲವು ಸ್ಥಳೀಯ ಮುಖಂಡರ ಜೊತೆ ಚರ್ಚೆ ನಡೆಸಿದರು.

ಇತ್ತ ಬಳ್ಳಾರಿ ಮತ್ತು ಹೊಸಪೇಟೆ ಜಿಲ್ಲೆಯ ಹಿರಿಯ ಶಾಸಕರು ಕೂರಲು ಕುರ್ಚಿ ಇಲ್ಲದೆ ನಿಂತುಕೊಂಡೇ ಕಾರ್ಯಕ್ರಮದ ಉಸ್ತುವಾರಿಯನ್ನು ನಿರ್ವಹಿಸಿದರು.ವೇದಿಕೆಯಲ್ಲಿ ಗಣ್ಯರಿಗೆ ಕಾಫಿ, ತಿಂಡಿ ಸೇರಿದಂತೆ ಹಲವು ಉಪಚಾರಗಳು ಅಬಾಧಿತವಾಗಿ ನಡೆದವು. ಮಳೆಯಿಂದ ರಕ್ಷಣೆ ಪಡೆಯಲು ಬೃಹತ್‌ ಪ್ರಮಾಣದ ಜಪಾನ್‌ ಟೆಂಟ್‌ ಅಳವಡಿಸಲಾಗಿತ್ತು.

ಗಣ್ಯರು ಸಿರಿಧಾನ್ಯಗಳನ್ನು ಮಡಿಕೆಗಳಿಗೆ ಸುರಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ರಾಹುಲ್‌ಗಾಂಧಿ ಕಾಂಗ್ರೆಸ್‌‍ ಸರ್ಕಾರದ ಸಾಧನೆಗಳ ಪುಸ್ತಕ ಲೋಕಾರ್ಪಣೆ ಮಾಡಿದರೆ, ಕಂದಾಯ ಇಲಾಖೆಯ ಸಾಧನೆ ಕುರಿತ ಪುಸ್ತಕವನ್ನು ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದರು.

ನಗರಾಭಿವೃದ್ಧಿ, ಕನ್ನಡ ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಾಧನೆಯ ಪುಸ್ತಕಗಳು ಬಿಡುಗಡೆಗೊಂಡವು. ಸಾಂಕೇತಿಕವಾಗಿ ಐದು ಜನರಿಗೆ ಹಕ್ಕುಪತ್ರ ಸೇರಿದಂತೆ ಸಮಗ್ರ ಕಂದಾಯ ದಾಖಲೆಗಳನ್ನು ವಿತರಿಸಲಾಯಿತು. ಇದೇ ವೇಳೆ ರಾಹುಲ್‌ಗಾಂಧಿಯವರು ಇಂದಿರಾಗಾಂಧಿಯವರ ಪ್ರತಿಮೆಯನ್ನು ಅನಾವರಣ ಮಾಡಿದರು.

RELATED ARTICLES

Latest News