ಬೆಂಗಳೂರು, ಮೇ.7- ಯುದ್ಧಕಾಲದಲ್ಲಿ ಶಾಂತಿಮಂತ್ರ ಪಠಿಸಿದ ಕಾಂಗ್ರೆಸ್ ಪಕ್ಷ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಅದನ್ನು ಸಮರ್ಥಿಸಿಕೊಳ್ಳಲು ನಾಯಕರು ಪರದಾಡಿದ್ದಾರೆ. ಇಂದು ಬೆಳಿಗ್ಗೆ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯನವರಿಗೆ ಈ ಪ್ರಶ್ನೆ ಎದುರಾಗುತ್ತಿದ್ದಂತೆ, ಅವರು ನಿರುಕ್ತರರಾಗಿ ಎದ್ದು ಹೋದರು. ಅವರ ಜೊತೆಯಲ್ಲಿದ್ದ ಸಚಿವ ಭೈರತಿ ಸುರೇಶ್, ಅದನ್ನೆಲ್ಲಾ ಈಗ ಚರ್ಚೆ ಮಾಡುವುದು ಬೇಡ, ಬಿಡಿ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.
ಗೃಹಸಚಿವ ಪರಮೇಶ್ವರ್, ಯಾರು, ಯಾವಾಗ, ಏನೆಂದು ಟ್ವಿಟ್ ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದರು. ಸಚಿವ ದಿನೇಶ್ ಗುಂಡೂರಾವ್, ನಾವು ಶಾಂತಿಪ್ರಿಯರು. ಯುದ್ಧದ ಉದ್ದೇಶವೇ ಶಾಂತಿ ಸ್ಥಾಪನೆಯಾಗಿದೆ. ನಮ್ಮದು ಶಾಂತಿಯುತ ದೇಶ. ಸಂಕಷ್ಟದ ಸಮಯದಲ್ಲಿ ಇಷ್ಟ ಇರಲಿ, ಇಲ್ಲದೇ ಇರಲಿ, ಎಲ್ಲರೂ ಒಟ್ಟಾಗಿರಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿಂದು ಸ್ಪಷ್ಟನೆ ನೀಡಿದ ಕಾಂಗ್ರೆಸ್ ವಕ್ತಾರ ವಿ.ಎಸ್.ಉಗ್ರಪ್ಪ, ಮಹಾತ್ಮಗಾಂಧೀಜಿಯವರು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷತೆ ವಹಿಸಿ 100 ವರ್ಷ ಕಳೆದ ಹಿನ್ನೆಲೆಯಲ್ಲಿ ಹಲವು ದಿನಗಳಿಂದಲೂ ಪ್ರತಿದಿನ ಕಾಂಗ್ರೆಸ್ ಎಕ್ಸ್ ಖಾತೆಯಲ್ಲಿ ಒಂದೊಂದು ಸಂದೇಶ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಹಾಕಲಾಗುತ್ತಿತ್ತು.
ಅದೇ ರೀತಿ ಇಂದು ಬೆಳಿಗ್ಗೆ ಕೂಡ ಒಂದು ಪೋಸ್ಟ್ ಹಾಕಲಾಗಿದೆ. ಅದಕ್ಕೂ ಆಪರೇಷನ್ ಸಿಂಧೂರ್‌ಗೂ ಸಂಬಂಧವಿಲ್ಲ. ಇದರಲ್ಲಿ ಯಾರನ್ನೂ ಅಥವಾ ಯಾವ ಕಾರ್ಯಾಚರಣೆಯನ್ನೂ ಅಗೌರವಿಸುವ ಉದ್ದೇಶ ಇರಲಿಲ್ಲ. ಎಂದಿನಂತೆ ಹಾಕಲಾಗಿರುವ ಸಂದೇಶವನ್ನು ಬೇರೆ ದೃಷ್ಟಿಕೋನದಿಂದ ನೋಡಬಾರದು ಎಂದು ಹೇಳಿದರು.

ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡ ಪ್ರಕಾಶ್ ರಾಥೋಡ್, ಕಾಂಗ್ರೆಸ್‌ನ ಎಐಸಿಸಿ ಮತ್ತು ಕೆಪಿಸಿಸಿಯಿಂದ ಆಪರೇಷನ್ ಸಿಂಧೂರ್ ಅನ್ನು ಬೆಂಬಲಿಸಿ ಈಗಾಗಲೇ ಹೇಳಿಕೆಗಳನ್ನು ನೀಡಲಾಗಿದೆ. ದೇಶ ರಕ್ಷಣೆಯ ವಿಚಾರದಲ್ಲಿ ಯಾವುದೇ ಒಡಕುಗಳಿಲ್ಲ. ಎಲ್ಲಾ ನಾಯಕರ ಎಕ್ಸ್ ಖಾತೆಗಳಲ್ಲೂ ಸೇನಾ ಕಾರ್ಯಾಚರಣೆಯನ್ನು ಬೆಂಬಲಿಸಿ ಸಂದೇಶಗಳು ರವಾನೆಯಾಗಿವೆ.
ದೇಶದ ಸಾರ್ವಭೌಮತೆಗೆ ನಮ್ಮ ಬೆಂಬಲ ವ್ಯಕ್ತಪಡಿಸಲಾಗಿದೆ ಎಂದು ಹೇಳಿದರು.
ಶಾಂತಿಯೇ ಪ್ರಬಲ ಅಸ್ತ್ರ ಎಂದು ಯುದ್ಧಕಾಲದಲ್ಲಿ ಶಾಂತಿಮಂತ್ರ ಪ್ರಕಟಿಸಿದ ಕಾಂಗ್ರೆಸ್‌ನ ಜಾಲತಾಣದ ಪೋಸ್ಟ್ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ತನ್ನ ಟ್ವಿಟ್ ಅನ್ನು ಡಿಲೀಟ್ ಮಾಡಿತ್ತು.