ಕಲಬುರಗಿ, ಸೆ.27- ಕಾಂಗ್ರೆಸ್ ಪಕ್ಷ ಹಿಂದಿನಿಂದಲ್ಲೂ ಮೋಸದ ರಾಜಕಾರಣ ಮಾಡಿಕೊಂಡೇ ಬಂದಿದೆ ಎಂದು ರಾಜ್ಯ ಕೋರ್ ಕಮಿಟಿ ಅಧ್ಯಕ್ಷರೂ ಆದ ಶಾಸಕ ಜಿ.ಟಿ.ದೇವೇಗೌಡ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಲಬುರಗಿಯಲ್ಲಿ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ಜೆಡಿಎಸ್ ಪುನಶ್ಚೇತನ ಪರ್ವ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಅವರದೇ ನಾಯಕರ ಮೇಲೆ ನಂಬಿಕೆಯಿಲ್ಲ.
ಕಾಂಗ್ರೆಸ್‍ನಿಂದ ಮೋಸಕ್ಕೆ ಒಳಗಾದವರ ಪಟ್ಟಿ ನೋಡಿದರೆ ಅದು ಉದ್ದವಿದೆ. ಮಾಜಿ ಪ್ರಧಾನಿ ಚರಣ್‍ಸಿಂಗ್, ಚಂದ್ರಶೇಖರ್, ಎಚ್.ಡಿ.ದೇವೇಗೌಡ ಎಲ್ಲರೂ ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾದವರೇ ಎಂದು ಉದಾಹರಣೆ ಸಹಿತ ವಿವರಿಸಿದರು.
ಕಲ್ಯಾಣ ಕರ್ನಾಟಕ ಭಾಗದ ವೈಜನಾಥ್ ಪಾಟೀಲ್ ಅವರು, ಬಾಪೂಗೌಡ ದರ್ಶನಾಪುರ, ವಿಶ್ವನಾಥ್ ರೆಡ್ಡಿ ಮುದ್ನಾಳ್, ಚಂದ್ರಶೇಖರ್ ರೆಡ್ಡಿ ದೇಶಮುಖ್, ಎಸ್.ಕೆ.ಕಾಂತಾ ಅವರು ಜನತಾ ಪಕ್ಷ, ಜನತಾ ದಳದಲ್ಲೇ ಬೆಳೆದು ಮುಂಚೂಣಿ ನಾಯಕರಾಗಿದ್ದರು. ಜನರು ಜೆಡಿಎಸ್ ಪಕ್ಷ ಕೇವಲ ದಕ್ಷಿಣ ಕರ್ನಾಟಕ್ಕೆ ಮಾತ್ರ ಸೀಮಿತ ಎಂದು ಬಿಂಬಿಸುತ್ತಿದ್ದು, ನಮ್ಮ ಪಕ್ಷ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲೂ ಗಟ್ಟಿಯಾಗಿದೆ ಎಂದರು.
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-09-2023)
ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಪುನರುಜ್ಜೀವನ ಆಗಬೇಕಾಗಿರುವುದರಿಂದ ಪುನಶ್ಚೇತನ ಪರ್ವ ಎನ್ನುವ ಕಾರ್ಯಕ್ರಮದ ಮೂಲಕ ನಿರಂತರವಾಗಿ ರಾಜ್ಯದ ಎಲ್ಲಾ ಕಡೆ ಪ್ರವಾಸ ಮಾಡಿ ಪಕ್ಷ ಬಲವರ್ಧನೆ ಮಾಡಲು ಕೋರ್ ಕಮಿಟಿ ತೀರ್ಮಾನಿಸಿರುವುದಾಗಿ ಅವರು ತಿಳಿಸಿದರು.
ನಮ್ಮ ನಾಯಕರು ಕಾಂಗ್ರೆಸ್‍ನ್ನು ನಂಬಿ ಕೆಟ್ಟರು. ನಮಗೆ 2008ರ ತಪ್ಪಿನ ಅರಿವಾಗಿದ್ದು, ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡೆ ಹೋಗುವ ನಿರ್ಣಯ ಮಾಡಿದ್ದು, ಮುಂಬರುವ ಲೋಕಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಕಾರ್ಪೊರೇಷನ್ ಚುನಾವಣೆಗಳಲ್ಲಿ ಮೈತ್ರಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ನಾವು ಈಗ 900 ವರ್ಷಗಳಿಂದ ಸ್ತ್ರೀ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಅಂದೆ ಬಸವಣ್ಣ ಆದಿಯಾಗಿ ಸ್ತ್ರೀ ಸಬಲೀಕರಣ ಮಂತ್ರ ಕೊಟ್ಟಿದ್ದರು. ಇಂಥ ಪುಣ್ಯಭೂಮಿಯಿಂದ ನಾವುಗಳು ಪಕ್ಷದ ಬಲವರ್ಧನೆಗೆ ಕೈ ಹಾಕಿದ್ದು, ಮುಂದಿನ ದಿನಗಳು ಜೆಡಿಎಸ್-ಬಿಜೆಪಿ ಪಕ್ಷಗಳು ಒಂದಾಗಿ ರಾಜ್ಯದಲ್ಲಿ ಪ್ರಾಬಲ್ಯ ಮೆರೆಯುವುದು ಶತಸಿದ್ಧ ಎಂದು ಹೇಳಿದರು.
ಮೋದಿಯವರ ನಾಯಕತ್ವ ದೇಶದ ಉನ್ನತಿಗೆ ಅತ್ಯವಶ್ಯಕವಾಗಿದೆ. ದೇಶ ಪ್ರಗತಿಯ ಹಾದಿಯಲ್ಲಿ ಬೆಳೆಯುತ್ತಿದ್ದು, ಜಗತ್ತಿನಲ್ಲಿ ಭಾರತವು ನಂ.1 ದೇಶವಾಗಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಬೆಂಬಲಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.
ಕೋರ್ ಕಮಿಟಿ ಸದಸ್ಯರುಗಳಾದ ಸಿ. ಎಸ್. ಪುಟ್ಟರಾಜು, ಅಲ್ಕೋಡ್ ಹನುಮಂತಪ್ಪ, ಬಂಡೆಪ್ಪ ಕಾಶಂಪೂರ್, ನಾಡಗೌಡ, ರಾಜು ಗೌಡ, ಕೃಷ್ಣಾ ರೆಡ್ಡಿ, ಸುರೇಶ್ ಗೌಡ, ದೊಡ್ಡಪ್ಪ ಗೌಡರು, ತಿಮ್ಮರಾಯಪ್ಪ, ಪ್ರಸನ್ನಕುಮಾರ್, ವೀರಭದ್ರಪ್ಪ ಹಾಲರವಿ, ಸುನಿತಾ ಚೌಹಣ್, ಸೂರಜ್ ಸೋನಿ ನಾಯಕ್, ಮಾಜಿ ಸಚಿವರಾದ ಡಾ.ಮಾಲಕ ರೆಡ್ಡಿ, ಮಲ್ಲಿಕಾರ್ಜುನ ಖೂಬಾ, ಗುರು ಪಾಟೀಲ್, ಸಂಜೀವನ್ ಯಾಕಾಪುರ್, ಕಲಬುರಗಿ ಜಿಲ್ಲಾಧ್ಯಕ್ಷ ಸುರೇಶ್ ಮಹಾಗವಕರ್, ಬೀದರ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.