ಬೆಂಗಳೂರು, ಮೇ 29-ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರನ್ನು ಪಾಕಿಸ್ತಾನಿ ಎಂದು ನಿಂದಿಸಿರುವ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ ಅವರನ್ನು ನಾಯಿಗೆ ಹೋಲಿಸಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ತಿನ ಸದಸ್ಯರನ್ನು ಒಳಗೊಂಡ ಕಾಂಗ್ರೆಸ್ ನಿಯೋಗ ಇಂದು ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.
ವಿಧಾನಪರಿಷತ್ ಆಡಳಿತ ಪಕ್ಷದ ನಾಯಕರಾದ ಸಚಿವ ಎನ್. ಎಸ್. ಭೋಸರಾಜು, ಹಾಗೂ ವಿಧಾನಪರಿಷತ್ತಿನ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರ ನೇತೃತ್ವದ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿಯಾಗಿ ದೂರು ಸಲ್ಲಿಸಿತು.
ಬಳಿಕ ಭೋಸರಾಜು ಅವರು ಮಾತನಾಡಿ, ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್ ಹಾಗೂ ಛಲವಾದಿ ನಾರಾಯಣಸ್ವಾಮಿ ಬೀದಿಯಲ್ಲಿ ಸಂವಿಧಾನ ವಿರೋಧಿಯಾಗಿ ಮಾತನಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಹೇಳಿಕೆ ನೀಡುವುದು ಸಮಂಜಸವಲ್ಲ.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಬಿಜೆಪಿ ಸದಸ್ಯರು ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುವುದನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ದಲಿತ ಸಮುದಾಯವನ್ನು ಹೀಗೆಳೆಯುವಂತಹ ಹೇಳಿಕೆ ನೀಡಿರುವ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಉಚ್ಚಾಟನೆ ಮಾಡಬೇಕು. ಹಾಗೆಯೇ, ಅಧಿಕಾರಿಯ ಬಗ್ಗೆ ಹೇಳಿಕೆ ನೀಡಿರುವ ರವಿಕುಮಾರ್ ಅವರ ವಿರುದ್ದ ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾದ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಸಲೀಂ ಅಹ್ಮದ್ ಅವರು ಮಾತನಾಡಿ, ವಿರೋದ ಪಕ್ಷದ ನಾಯಕರಾಗಿ ಬೇಜವಾಬ್ದಾರಿ ಹೇಳಿಕೆ ನೀಡಿರುವ ಛಲವಾದಿ ನಾರಾಯಣ್ ಸ್ವಾಮಿ ವಿರುದ್ದ ಕ್ರಮ ಕೈಗೊಳ್ಳಬೇಕು. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಛಲವಾದಿ ಆಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ. ಐಎಎಸ್ ಅಧಿಕಾರಿಯನ್ನು ಪಾಕಿಸ್ತಾನದಿಂದ ಬಂದಿದ್ದಾರಾ? ಎಂದು ಹೇಳಿರುವ ರವಿಕುಮಾರ್ ಅವರನ್ನು ಅಮಾನತ್ತಗೊಳಿಸಬೇಕು. ಇವರಿಬ್ಬರೂ ಸಮಾಜದಲ್ಲಿ ತಪ್ಪು ಸಂದೇಶ ಕೊಡುತ್ತಿದ್ದಾರೆ ಎಂದು ಹೇಳಿದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯರಾದ ವಸಂತ್‌ಕುಮಾರ್, ಅನಿಲ್ ಕುಮಾರ್ ಎಂ.ಎಲ್. ಜಗದೇವ ಗುತ್ತೇದಾರ್, ಎಸ್. ರವಿ, ಡಿ.ಟಿ. ಶ್ರೀನಿವಾಸ್, ದಿನೇಶ್ ಗೂಳಿಗೌಡ, ಚನ್ನರಾಜ್ ಹಟ್ಟಿಹೊಳಿ, ಬಸವನಗೌಡ ಬಾದರ್ಲಿ, ಪುಟ್ಟಣ್ಣ, ನಸೀರ್ ಅಹ್ಮದ್, ಗೋವಿಂದರಾಜು, ನಾಗರಾಜ್ ಯಾದವ್, ಮಂಜುನಾಥ್ ಭಂಡಾರಿ ನಿಯೋಗದಲ್ಲಿದ್ದರು.