ನವದೆಹಲಿ,ಡಿ.29- ಮಾಜಿ ಪ್ರಧಾನಿದ ದಿವಂಗತ ಡಾ.ಮನಮೋಹನ್ ಸಿಂಗ್ ಅವರ ಸಾರಕ ನಿರ್ಮಾಣದ ಕುರಿತು ಕಾಂಗ್ರೆಸ್ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದೆ. ಪ್ರತಿಯೊಂದೂ ವಿಚಾರದಲ್ಲೂ ಸಂಕುಚಿತ ಮನೋಭಾವನೆ ತೋರುವ ಅದಕ್ಕೆ ಏನು ಹೇಳಿದರೂ ಪ್ರಯೋಜನವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡಾ. ಸಿಂಗ್ ಅವರ ಪರಂಪರೆಯನ್ನು ಅವಮಾನಿಸುತ್ತಿದೆ ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದರು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ, ಸಾರಕ ನಿರ್ಮಾಣ ವಿಚಾರದಲ್ಲಿ ಮೋದಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಇದರ ವಿರುದ್ಧ ಧ್ವನಿ ಎತ್ತುವುದಾಗಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಜೆ.ಪಿ.ನಡ್ಡಾ ಸಾರಕ ನಿರ್ಮಾಣದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಆದಾಗ್ಯೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಈ ವಿಚಾರವಾಗಿ ಇನ್ನಿಲ್ಲದ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಅವರನ್ನು ತಡೆಯುವ ಗೋಜಿಗೆ ಹೋಗದಿರುವುದು ದು:ಖಕರ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಈ ದೇಶಕ್ಕೆ ಡಾ. ಮನಮೋಹಸಿಂಗ್ ಅವರ ಕೊಡುಗೆ ಏನು ಎಂಬುದನ್ನು ಬಿಜೆಪಿಗೆ ಯಾರೂ ಹೇಳಿಕೊಡಬೇಕಿಲ್ಲ. ಅವರ ಸೇವೆಯನ್ನು ನಾವು ಸದಾ ಗೌರವಿಸುತ್ತೇವೆ. ಹಾಗೆಯೇ ಸೂಕ್ತ ಸ್ಥಳದಲ್ಲಿ ಅವರ ಸಾರಕ ನಿರ್ಮಾಣ ಮಾಡಿ ಅವರಿಗೆ ಗೌರವ ನೀಡಲಾಗುವುದು. ಆದರೆ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಅಸಹ್ಯ ಹುಟ್ಟಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದೇಶಕ್ಕೆ ಕೊಡುಗೆ ನೀಡಿದ ತನ್ನ ಯಾವ ನಾಯಕರನ್ನೂ ಗೌರವಿಸಿ ಗೊತ್ತಿರದ ಕಾಂಗ್ರೆಸ್‌ನಿಂದ ನಾವು ಮನಮೋಹನ್ ಸಿಂಗ್ ಅವರಿಗೆ ಯಾವ ರೀತಿಯ ಗೌರವ ನೀಡಬೇಕು ಎಂಬುದನ್ನು ಕಲಿಯುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.