Friday, November 22, 2024
Homeರಾಜ್ಯಕಾಂಗ್ರೆಸ್‌ನ್ನು ಕೇಡರ್‌ಬೇಸ್‌‍ ಆಗಿ ಸಂಘಟಿಸಲು 'ಕಾಂಗ್ರೆಸ್‌‍ ಕುಟುಂಬ' ರಚನೆ : ಡಿಕೆಶಿ

ಕಾಂಗ್ರೆಸ್‌ನ್ನು ಕೇಡರ್‌ಬೇಸ್‌‍ ಆಗಿ ಸಂಘಟಿಸಲು ‘ಕಾಂಗ್ರೆಸ್‌‍ ಕುಟುಂಬ’ ರಚನೆ : ಡಿಕೆಶಿ

ಬೆಂಗಳೂರು, ಮೇ 27- ಕಾಂಗ್ರೆಸ್‌‍ ಅನ್ನು ಕೇಡರ್‌ಬೇಸ್‌‍ ಆಗಿ ಸಂಘಟಿಸಲು ಕಾಂಗ್ರೆಸ್‌‍ ಕುಟುಂಬ ಎಂಬ ಕಾರ್ಯಕ್ರಮವನ್ನು ರೂಪಿಸಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಮಾಜಿ ಪ್ರಧಾನಿ ದಿ.ನೆಹರೂ ಅವರ 68 ನೇ ಪುಣ್ಯಸರಣೆಯಲ್ಲಿ ಮಾತನಾಡಿದ ಅವರು, ಜೂನ್‌ 1 ರಂದು ಕೆಪಿಸಿಸಿ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯನ್ನು ಬಲಗೊಳಿಸಲು ಬೂತ್‌ ಮಟ್ಟದಿಂದಲೂ ಕೇಡರ್‌ ಆಧಾರಿತವಾಗಿ ರೂಪಿಸಬೇಕಿದೆ.

ಪ್ರತಿ ಬೂತ್‌ ಮಟ್ಟದಲ್ಲೂ 50 ಸದಸ್ಯರನ್ನು ನೊಂದಾಯಿಸಬೇಕು. ಯಾವುದೇ ಕಾರ್ಯಕ್ರಮ ಮಾಡಬೇಕಾದರೂ ಅವರ ಸಹಭಾಗಿತ್ವ ಅಗತ್ಯ. ಪ್ರತಿ ನಿರ್ಧಾರಗಳಿಗೂ ಅವರ ಸಹಮತ ಇರಬೇಕು. ಕಾಂಗ್ರೆಸ್‌‍ ಕುಟುಂಬ ಎಂಬ ಹೆಸರಿನ ಈ ಕಾರ್ಯಕ್ರಮಕ್ಕೆ ಪಕ್ಷದ ಪದಾಧಿಕಾರಿಗಳು, ನಿಗಮಮಂಡಳಿ ಅಧ್ಯಕ್ಷರು, ಸದಸ್ಯರು, ಸಚಿವರು, ಶಾಸಕರು ಎಲ್ಲರೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಮತ್ತು ಸಚಿವರು ತಿಂಗಳಲ್ಲಿ ಒಂದು ದಿನ ಕಾಂಗ್ರೆಸ್‌‍ ಕಚೇರಿಯಲ್ಲಿ ಕುಳಿತು ಪಕ್ಷದ ಕಾರ್ಯಕರ್ತರ ಅಹವಾಲು ಕೇಳಬೇಕಿದೆ. ಮುಖ್ಯಮಂತ್ರಿಯವರು ಮೂರು ಗಂಟೆ ಪಕ್ಷದ ಕಚೇರಿಯಲ್ಲಿರಲು ಒಪ್ಪಿಕೊಂಡಿದ್ದಾರೆ. ಸಚಿವರು ದಿನಪೂರ್ತಿ ಇದ್ದು, ಅಹವಾಲು ಸ್ವೀಕರಿಸಬೇಕು.

ಕಾಟಾಚಾರಕ್ಕೆ ಬಂದು ಹೋಗಲು ಅವಕಾಶವಿಲ್ಲ. ಸಚಿವರು, ಮುಖ್ಯಮಂತ್ರಿಗಳು ಕಚೇರಿಗೆ ಬರುವುದಕ್ಕೆ ಒಂದು ವಾರ ಮೊದಲೇ ಸಮಯ ತಿಳಿಸಬೇಕು, ಅವರನ್ನು ಭೇಟಿ ಮಾಡಲು ಬರುವವರು ನೊಂದಾಯಿಸಿಕೊಳ್ಳಬೇಕು. ಈ ಕೆಲಸಕ್ಕಾಗಿ ಒಬ್ಬರು ಕಾರ್ಯಾಧ್ಯಕ್ಷರು ಹಾಗೂ ಇಬ್ಬರು ಪದಾಧಿಕಾರಿಗಳನ್ನು ನಿಯೋಜಿಸುತ್ತೇನೆ. ರಾಜ್ಯಾದ್ಯಂತ ಯಾರೇ ಬರುವುದಾದರೂ ಅವರು ನೊಂದಾವಣಿ ಮಾಡುವ ವೇಳೆ ತಮ ಪಕ್ಷದ ಸದಸ್ಯತ್ವದ ಸಂಖ್ಯೆಯನ್ನೂ ನಮೂದಿಸಬೇಕು ಎಂದು ವಿವರಿಸಿದರು.

ಸದಸ್ಯರಲ್ಲದೇ ಇರುವವರನ್ನು ನೆಂಟ, ಸಂಬಂಧಿಕ ಎಂದು ಕರೆತಂದು ಸಚಿವರ ಬಳಿ ಮಾತನಾಡಿಸಲು ಅವಕಾಶ ಇಲ್ಲ. ಪೂರ್ಣವಾಗಿ ಕಾರ್ಯಕರ್ತರಿಗೆ ನೊಂದಣಿಗೆ ಅವಕಾಶವಿದೆ. ಸಚಿವರು, ಮುಖ್ಯಮಂತ್ರಿ ಬಂದಾಗ ಅವರ ಸುತ್ತಮುತ್ತ ಶಾಸಕರು, ಪದಾಧಿಕಾರಿಗಳೇ ಕುಳಿತುಕೊಳ್ಳುವುದು ಬೇಡ. ಕಾರ್ಯಕರ್ತರನ್ನು ಭೇಟಿ ಮಾಡಲು ನನಗೂ ಕೂಡ ಸಮಯ ಸಿಗುವುದಿಲ್ಲ. ಅಷ್ಟರ ಮಟ್ಟಿಗೆ ಅವರ ಸುತ್ತಲೂ ಜನ ಸುತ್ತುವರೆದಿರುತ್ತಾರೆ ಎಂದು ಆಕ್ಷೇಪಿಸಿದರು.

ದೂರದೂರಿಂದ ಬರುವ ಕಾರ್ಯಕರ್ತರನ್ನು ಭೇಟಿ ಮಾಡದೇ ಇರುವುದಕ್ಕೆ ನನಗೆ ಮುಜುಗರವಾಗುತ್ತದೆ. ನಮ ಕಚೇರಿಗಳಲ್ಲಿ ಆಪ್ತಸಹಾಯಕರು, ಗನ್‌ಮ್ಯಾನ್‌ಗಳು ಕೋಟು, ಸೂಟು ಬೂಟು ಹಾಕಿದವರನ್ನು ಕರೆದುಕೊಂಡು ಹೋಗಿ ಆ್ಯಂಟಿ ಛೇಂಬರ್‌ನಲ್ಲಿ ಕೂರಿಸಿರುತ್ತಾರೆ. ಸಾಮಾನ್ಯ ಕಾರ್ಯಕರ್ತರನ್ನು ವಿಚಾರಿಸಿರುವುದಿಲ್ಲ ಎಂದರು.ಈ ವೇಳೆ ಪ್ರಮುಖರೊಬ್ಬರು ಮಧ್ಯಪ್ರವೇಶಿಸಿದಾಗ ಸಿಟ್ಟಾದ ಡಿ.ಕೆ.ಶಿವಕುಮಾರ್‌, ಜಾಸ್ತಿಯಾಯಿತು ನಿನ್ನ ಚೇಷ್ಠೆ, ನನಗೆ ಗೊತ್ತಿರುವುದನ್ನು ನಾನು ಹೇಳುತ್ತಿದ್ದೇನೆ, ನಿನ್ನದೇನು? ಎಂದು ತರಾಟೆಗೆ ತೆಗೆದುಕೊಂಡರು.

ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯುವಕರಿಗೆ, ಪಕ್ಷ ನಿಷ್ಠರಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಕಾಂಗ್ರೆಸ್‌‍ ಬಿಟ್ಟು ಹೋಗಿದ್ದ ಇಬ್ಬರನ್ನು ಕರೆತಂದು ಟಿಕೆಟ್‌ ಕೊಟ್ಟಿದ್ದನ್ನು ಬಿಟ್ಟರೆ ಉಳಿದ ಎಲ್ಲಾ ಕಡೆ ಪಕ್ಷನಿಷ್ಠರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಇದು ಮುಂದಿನ ನಾಲ್ಕು ವರ್ಷಗಳ ಸರ್ಕಾರ ಅಲ್ಲ, ಮುಂದಿನ ಹತ್ತು ವರ್ಷಗಳ ಕಾಲವೂ ಅಧಿಕಾರದಲ್ಲಿ ಮುಂದುವರೆಯಲಿದೆ. ಅದಕ್ಕಾಗಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತೇವೆ ಎಂದರು.

ಇತ್ತೀಚೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಇನ್ನು ಮುಂದೆ ಆರ್‌ಎಸ್‌‍ಎಸ್‌‍ ಇಲ್ಲದೆಯೂ ನಾವು ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದಾರೆ. ಆರ್‌ಎಸ್‌‍ಎಸ್‌‍ನವರನ್ನು ಬಳಸಿಕೊಂಡು ಈಗ ಬಿಜೆಪಿ ಕೈಬಿಡುತ್ತಿದೆ. ಆರ್‌ಎಸ್‌‍ಎಸ್‌‍ ಇಲ್ಲದೇ ಇದ್ದರೆ, ಬಿಜೆಪಿ ಶೂನ್ಯ ಎಂದು ಹೇಳಿದರು.

5-10 ವರ್ಷಗಳಿಂದಲೂ ನಿರಂತರವಾಗಿ ಅಧಿಕಾರದಲ್ಲಿರುವವರ ಬ್ಲಾಕ್‌ ಹಾಗೂ ಜಿಲ್ಲಾ ಸಮಿತಿಗಳನ್ನು ವಿಸರ್ಜನೆಗೊಳಿಸಿ ಹೊಸ ರಕ್ತಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.ಇದೇ ವೇಳೆ ಜವಹರಲಾಲ್‌ ನೆಹರೂ ಅವರ ಜನದಿನಾಚರಣೆ ಎಂದು ಬಾಯ್ತಪ್ಪಿ ಹೇಳುವ ಮೂಲಕ ಡಿ.ಕೆ.ಶಿವಕುಮಾರ್‌ ಮುಜುಗರಕ್ಕೆ ಒಳಗಾದರು. ವೇದಿಕೆಯಲ್ಲಿದ್ದ ಇತರ ನಾಯಕರು ಲೋಪವನ್ನು ತಿದ್ದಿದರು.

ಜಿಲ್ಲಾ ಕಾಂಗ್ರೆಸ್‌‍ ಅಧ್ಯಕ್ಷರು ಪದಾಧಿಕಾರಿಗಳಿದ್ದಂತೆ ಅವರು ವೇದಿಕೆಯಲ್ಲಿ ಕುಳಿತುಕೊಳ್ಳುವುದಲ್ಲ, ಮಾರ್ಗದರ್ಶಕರಾಗಿ ಕೆಲಸ ಮಾಡಬೇಕು ಎಂದು ಖಾರವಾಗಿ ಹೇಳಿದರು.

ಎಲ್ಲಾ ಜಿಲ್ಲೆಗಳಲ್ಲೂ ಪಕ್ಷದ ಕಚೇರಿ ನಿರ್ಮಿಸಲು ಶಾಸಕರು, ಸಚಿವರು ಜವಾಬ್ದಾರಿ ತೆಗೆದುಕೊಳ್ಳಬೇಕು. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಪ್ರಾರಂಭವಾಗಿದೆ. ನಿನ್ನೆ ಸಚಿವ ಮಹದೇವಪ್ಪ ಅವರ ಜೊತೆ ನಾನು ಮತ್ತು ಮುಖ್ಯಮಂತ್ರಿಯವರು ಚರ್ಚೆ ಮಾಡಿದ್ದೇವೆ. ನೀವು ಜವಾಬ್ದಾರಿ ತೆಗೆದುಕೊಳ್ಳದೇ ಇದ್ದರೆ ಬಿಟ್ಟು ಬೇರೆ ಕಡೆ ಹೋಗಬೇಕಾಗುತ್ತದೆ ಎಂದು ಹೇಳಿದ್ದೇವೆ ಎಂದರು.

ವೇದಿಕೆಯಲ್ಲಿ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರು ಜಂಟಿಯಾಗಿ ಮೊಬೈಲ್‌ ನೋಡುತ್ತಾ ಚರ್ಚೆ ನಡೆಸಿದ್ದು ಗಮನ ಸೆಳೆಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಿಂಗಳಲ್ಲಿ ಒಂದು ದಿನ ನಾನು ಕೂಡ ಪಕ್ಷದ ಕಚೇರಿಗೆ ಆಗಮಿಸುತ್ತೇನೆ. ಕಾರ್ಯಕರ್ತರ ಜೊತೆ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

RELATED ARTICLES

Latest News