ಬೆಂಗಳೂರು, ನ.19-ದಿವಾಳಿಯಾಗಿದೆಯಾ ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ಪ್ರಶ್ನಿಸಿರುವ ಜೆಡಿಎಸ್ ದುಡ್ಡಿಲ್ಲದ ಖಾಲಿ ಕೈ ಆಡಳಿತ ನಡೆಸಲಾಗುತ್ತಿದೆ ಎಂದು ಆರೋಪಿಸಿದೆ.
ಈ ಸಂಬಂಧ ಜೆಡಿಎಸ್ ಎಕ್ಸ್ ನಲ್ಲಿ ಸರಣಿ ಪೊಸ್ಟ್ ಮಾಡಿದ್ದು, ಶಾಸಕ ರಾಜು ಕಾಗೆ ಬಳಿಕ ಈಗ ಮತ್ತೊಬ್ಬ ಕಾಂಗ್ರೆಸ್ ಶಾಸಕ ಗವಿಯಪ್ಪ, ನಮ ಕ್ಷೇತ್ರಕ್ಕೆ ಅನುದಾನ ಕೊಡುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿರುವುದು ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ ಎಂದು ಲೇವಡಿ ಮಾಡಿದೆ.
ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಗೆ ಬರೀ 10 ಕೋಟಿ ರೂ. ಅನುದಾನ ಕೊಡಲಾಗಿದೆ ಎಂದು ಶಾಸಕ ಗವಿಯಪ್ಪ ಅಸಮಾಧಾನ ತೋಡಿಕೊಂಡಿದ್ದಾರೆ. ಹಿಂದಿನ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ.ಆದರೆ ಈ ಬಾರಿ ಅನುದಾನ ಸಿಗದೆ, ಕ್ಷೇತ್ರದಲ್ಲಿ ಆಸ್ಪತ್ರೆಗಳು, ರಸ್ತೆಗಳ ಸಮಸ್ಯೆಗಳು ಸಾಕಷ್ಟಿದೆ. ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಆಗುತ್ತಿಲ್ಲ ಎಂದು ತಮ ಸರ್ಕಾರದ ವಿರುದ್ಧವೇ ಕಿಡಿಕಾರಿರುವುದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅದಕ್ಷ ಆಡಳಿತಕ್ಕೆ ಉದಾಹರಣೆ ಎಂದು ಟೀಕಿಸಿದೆ.
ಗ್ಯಾರಂಟಿ ಯೋಜನೆಗಳಿಗೆ ಹಣಹೊಂದಿಸಲು ಹೆಣಗಾಡುತ್ತಿರುವ ಮುಖ್ಯಮಂತ್ರಿ, ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡುತ್ತಿಲ್ಲ. ಸ್ವತಃ ಕಾಂಗ್ರೆಸ್ ಶಾಸಕರೇ ತಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಕಣ್ಣೀರಿಡುತ್ತಿದ್ದರೂ ಮುಖ್ಯಮಂತ್ರಿಗಳು ಕಿವಿಗೊಡುತ್ತಿಲ್ಲ..ಯಾಕಂದರೆ ಸರ್ಕಾರದ ಬೊಕ್ಕಸ ಖಾಲಿ ಮಾಡಿರುವುದೇ ಸಿದ್ದರಾಮಯ್ಯ ಅವರ ಸಾಧನೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಎಚ್.ಆರ್.ಗವಿಯಪ್ಪ ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು, ಬೊಕ್ಕಸದಲ್ಲಿ ಹಣವಿಲ್ಲದೆ ಅನುದಾನ ಕಡಿತವಾಗಿದೆ. ವಿಜಯನಗರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ. ಇದೇನಾ ಕಾಂಗ್ರೆಸ್ ನ್ಯಾಯ ? ವಚನ ಭ್ರಷ್ಟ ಸರ್ಕಾರದ ಹುಸಿ ಭರವಸೆಗಳಿಗೆ ಬೇಸತ್ತ ಸ್ವಪಕ್ಷೀಯ ಶಾಸಕರು ಎಂದು ಟೀಕಾ ಪ್ರಹಾರ ನಡೆಸಿದೆ.
ಅವೈಜ್ಞಾನಿಕ ಗ್ಯಾರಂಟಿಯಿಂದಾಗಿ ನಿಜವಾದ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದಂತೆ ರಾಜ್ಯ ಕಾಂಗ್ರೆಸ್ ಮಾಡಿದೆ. ವೇದಿಕೆಯಲ್ಲಿ ದೊಡ್ಡ ದೊಡ್ಡ ಹುಸಿ ಭಾಷಣಗಳನ್ನು ಮಾಡುವ ಸಿದ್ದರಾಮಯ್ಯ ಸರ್ಕಾರ ನ್ಯಾಯಯುತವಾಗಿ ಕ್ಷೇತ್ರಗಳಿಗೆ ನಿಧಿ ಹಂಚಿಕೆ ಮಾಡಲು ಕೈಲಾಗದ ದುಸ್ಥಿತಿ ತಲುಪಿದೆ. ಈ ಸತ್ಯವನ್ನು ಕಾಂಗ್ರೆಸ್ ಶಾಸಕ ಗವಿಯಪ್ಪ ಬಿಚ್ಚಿಟ್ಟಿದ್ದಾರೆ.
ಕೊಟ್ಟಿರುವ 12 ಕೋಟಿ ರೂ. ಆಸ್ಪತ್ರೆಗೆ ಸಾಲುತ್ತಿಲ್ಲ. ಇನ್ನಿತರ ಯೋಜನೆಗಳಿಗೆ ನಾವೇನು ಮಾಡುವುದು ಎಂದು ಅವರು ಪ್ರಶ್ನಿಸಿದ್ದಾರೆ. ಆದರೆ ಹಗರಣಗಳಲ್ಲಿ ಸಿಲುಕಿರುವ ಭ್ರಷ್ಟ ಸಿಎಂ ಸಿದ್ದರಾಮಯ್ಯ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ನಾಡಿನ ದುರಂತ ಎಂದು ಜೆಡಿಎಸ್ ಆರೋಪಿಸಿದೆ.